ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ಮರೆ ಮಾಚಲು ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ #Milk Price Hike ಮಾಡಿ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಯಾವುದೇ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಸುಮಾರು 500 ಕೋಟಿ ರೂ. ಪ್ರೋತ್ಸಾಹಧನ ಕೊಡುವುದು ಬಾಕಿ ಇದೆ. ಪ್ರೋತ್ಸಾಹ ಧನ ಇಲ್ಲದೇ ರೈತರು ಮತ್ತು ಹಾಲು ಒಕ್ಕೂಟಗಳು ಸಂಕಷ್ಟಕ್ಕೆ ಈಡಾಗಿವೆ. ಇಡೀ ವರ್ಷ ಪ್ರೋತ್ಸಾಹ ಧನ ನೀಡದೇ, ನೀವೇ ದರ ಹೆಚ್ಚಳ ಮಾಡಿಕೊಂಡು ನೀವೇ ಪ್ರೋತ್ಸಾಹ ಧನ ನೀಡಿ ಎಂದು ಜನರ ಮೇಲೆ ಹೊರೆ ಹಾಕಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ದಿವಾಳಿಯಾಗಿರುವುದಕ್ಕೆ ಇದು ಮತ್ತೊಂದು ಸಾಕ್ಷಿ ಎಂದು ಹೇಳಿದರು.
ತಮ್ಮ ವೈಫಲ್ಯ ಮುಚ್ಚಿಕೊಂಡು ಸರ್ಕಾರ ಕೊಡಬೇಕಾದ ಪ್ರೋತ್ಸಾಹ ಧನವನ್ನು ಕೆಎಂಎಫ್ ಗೆ 4 ರೂ ಹಾಲಿನ ದರ ಹೆಚ್ಚಳ ಮಾಡಿ, ಜನರ ಮೇಲೆ ಭಾರ ಹೇರಿದೆ. ವರ್ಷದಲ್ಲಿ ಮೂರು ಬಾರಿ 9 ರೂ. ಹೆಚ್ಚಳ ಮಾಡಿದ್ದಾರೆ. ಇದೊಂದು ಬೇಜವಾಬ್ದಾರಿ ರಾಜ್ಯ ವಿರೋಧಿ ಸರ್ಕಾರ ಇದೆ. ರಾಜ್ಯವನ್ನು ದಿವಾಳಿ ಮಾಡಿ ಆರ್ಥಿಕವಾಗಿ ಸದೃಢವಾಗಿರುವ ರಾಜ್ಯವನ್ನು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
Also read: ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ಪ್ರಯಾಣಿಕರೇ ಗಮನಿಸಿ | ಇಲ್ಲಿದೆ ಬಿಗ್ ಅಪ್ಡೇಟ್
ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಭಂಡತನಕ್ಕೆ ಬಿದ್ದಿದೆ. ವಿದ್ಯುತ್ ದರ ಹೆಚ್ಚಳ ಮಾಡಿದೆ. ಡಿಜಿಟಲ್ ಮೀಟರ್ ಅಳವಡಿಕೆ ದೊಡ್ಡ ಹಗರಣವಾಗಿದೆ. ಪೆಟ್ರೋಲ್, ಡಿಸೇಲ್, ಮುದ್ರಾಕ ನೋಂದಣಿ ಶುಲ್ಕ ಎಲ್ಲವನ್ನು ಹೆಚ್ಚಳ ಮಾಡಿದ್ದಾರೆ. ಅಬಕಾರಿ ತೆರಿಗೆ ದರವಂತೂ ಲೆಕ್ಕವಿಲ್ಲದಷ್ಟು ಹೆಚ್ಚಳ ಮಾಡಿದ್ದಾರೆ. ಕಳೆದ ವರ್ಷ ಸುಮಾರು 40 ಸಾವಿರ ಕೋಟಿ ರೂ. ಹೆಚ್ಚಿನ ತೆರಿಗೆ ಭಾರವನ್ನು ಜನರ ಮೇಲೆ ಹಾಕಿದ್ದಾರೆ. ಈಗ ಸುಮಾರು 55 ಸಾವಿರ ಕೋಟಿ ರೂ. ಹೊಸ ತೆರಿಗೆ ಮೂಲಕ ಜನರ ಮೇಲೆ ಭಾರ ಹಾಕಿದ್ದಾರೆ. ಇಷ್ಟೆಲ್ಲಾ ಆದರೂ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಒಂದು ಕಡೆ ತೆರಿಗೆ ಭಾರ ಇನ್ನೊಂದೆಡೆ ಬೆಲೆ ಏರಿಕೆ ಭಾರ, ಇದರಿಂದ ಮಧ್ಯಮ ವರ್ಗದವರು ಬಡವರಾಗುತ್ತಿದ್ದಾರೆ. ಬಡವರು ಅತಿ ಬಡವರಾಗುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ. ಈ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ಈ ಸರ್ಕಾರ ಆದಷ್ಟು ಬೇಗ ತೊಲಗಲಿ ಅಂತ ಜನ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೆ ಪಕ್ಷ ನೊಟೀಸ್ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೆ ಪಕ್ಷದ ಶಿಸ್ತು ಸಮಿತಿ ಅವರಿಗೆ ನೊಟೀಸ್ ಕೊಟ್ಟಿದೆ. ಅವರು ನೊಟೀಸ್ ಗೆ ಉತ್ತರ ನೀಡಲಿದ್ದಾರೆ. ಹೀಗಾಗಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post