ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ವಾತಂತ್ರ್ಯ ಗಳಿಸಿ ಒಂದು ನೂರು ವರ್ಷಗಳು ಪೂರ್ಣಗೊಳಿಸುವ 2047 ರ ಅಮೃತ ಕಾಲದ ವೇಳೆಗೆ ಭಾರತವು ಸಮೃದ್ಧ ಮತ್ತು ಸದೃಢ ರಾಷ್ಟ್ರವಾಗಲಿದೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು President Droupadi Murmu ಅವರು ಇಲ್ಲಿ ಇಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಸಮಗ್ರ ಕುಳಿರರಿಮೆ ಯಂತ್ರ ತಯಾರಿಕಾ ಸೌಲಭ್ಯ ( ಇಂಟೆಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ) ವನ್ನು ಉದ್ಘಾಟಿಸಿ, ರಾಷ್ಟ್ರೀಯ ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆ ( ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ) ಯ ದಕ್ಷಿಣ ವಲಯ ಪ್ರಯೋಗಾಲಯಕ್ಕೆ ದೂರಸಂವೇದಿ ವ್ಯವಸ್ಥೆ ಮೂಲಕ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕುಳಿರರಿಮೆ ಮತ್ತು ಅರೆ ಕುಳಿರರಿಮೆ ಯಂತ್ರಗಳ ತಯಾರಿಕೆಯಲ್ಲಿ ದಾಪುಗಾಲು ಹಾಕುತ್ತಿರುವುದು ಸ್ವಾವಲಂಬೀ ಭಾರತಕ್ಕೆ ಮೆರುಗು ತರುವಂತಾಗಿದೆ. ಅಷ್ಟೇ ಅಲ್ಲ ! ವಿಶ್ವಕದಲ್ಲಿಯೇ ಕುಳಿರರಿಮೆ ಯಂತ್ರ ತಯಾರಿಕಾ ತಂತ್ರಜ್ಞಾನ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವು ಆರನೇ ರಾಷ್ಟ್ರವಾಗಿದೆ. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಆತ್ಮ ನಿರ್ಭರ ಭಾರತದ ಮತ್ತೊಂದು ಮಜಲು ಎನಿಸಿದೆ.ಎಂಧು ರಾಷ್ಟ್ರಪತಿ ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈವರೆಗೆ ಉಡಾಯಿಸಿರುವ ಉಪಗ್ರಹಗಳು ರಕ್ಷಣಾ ಮತ್ತು ಸಂವಹನ ಕ್ಷೇತ್ರಗಳು ಮಾತ್ರವಲ್ಲದೇ, ಹವಾಮಾನ ಮುನ್ಸೂಚನೆ ನೀಡಿ ಜನಸಾಮಾನ್ಯರ ದೈನಂದಿನ ಬದುಕಿಗೆ ದಿಕ್ಸೂಚಿಯಾಗಿದೆ. ಅಂತೆಯೇ, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ರಕ್ಷಣಾ ಉಪಕರಣಗಳನ್ನು ತಯಾರಿಸಿ ವಿಶೇಷ ಕೊಡುಗೆ ನೀಡಿದೆ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ರಕ್ಷಣಾ ಪಡೆಗಳ ಹಿಂದೆ ಬೆಂಬಲವಾಗಿ ಹಾಗೂ ಬೆಂಬಲವಾಗಿ ಇರುವ ರಕ್ಷಣಾ ಪಡೆಯೇ ಆಗಿದೆ ಎಂಬುದು ವೈಮಾನಿಕ ಸಂಶೋಧನೆ, ಅಭಿವೃದ್ಧಿ ಮತ್ತು ತಯಾರಿಕೆಯ ವಿವಿಧ ವೇದಿಕೆಗಳಲ್ಲಿ ಸಾಬೀತಾಗಿದೆ. ಅಮೃತ ಕಾಲದ ವೇಳೆಗೆ ಈ ಎರಡೂ ಸಂಸ್ಥೆಗಳು ಮಹತ್ತರ ಮತ್ತು ಸಕಾರಾತ್ಮಕ ಪಾತ್ರ ನಿರ್ವಹಿಸಿ ಭವ್ಯ ಭಾರತಕ್ಕೆ ಭವ್ಯ ಭವಿಷ್ಯವನ್ನು ರೂಪಿಸಲಿದೆ ಎಂದು ದ್ರೌಪತಿ ಮುರ್ಮು ಅವರು ತಿಳಿಸಿದರು.
ಕೋವಿಡ್-19 ರ ಸೋಂಕಿನ ವಿರುದ್ಧ 215 ಕೋಟಿ ಪ್ರತಿರೋಧದ ಲಸಿಕೆ ನೀಡುವಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಹಿಂದಿಕ್ಕಿದೆ. ವಿಶ್ವದಲ್ಲಿಯೇ ಬೃಹತ್ ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ತಂತ್ರ ನಮ್ಮ ಭವಿಷ್ಯವನ್ನು ಪರಿವರ್ತಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ ರಾಷ್ಟ್ರಪತಿ ಮುಂದಿನ 25 ವರ್ಷಗಳಲ್ಲಿ ಮರು ಕಲ್ಪನೆಯೊಂದಿಗೆ ಭಾರತವು ಅಭಿವೃದ್ಧಿ ರಾಷ್ಟ್ರವಾಗಲಿದೆ ಎಂದು ರಾಷ್ಟ್ರಪತಿ ಆಶಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಸ್ಮರಿಸಿದ ಮುರ್ಮು ಅವರು ದುಬಾರಿ ಮೊತ್ತದ ಕರೋನರಿ ಸ್ಟಂಟ್ ದರವನ್ನು ತಂತ್ರಜ್ಞಾನ ಬಳಸಿ ದೇಶೀಯವಾಗಿ ಅಭಿವೃದ್ಧಿಪಡಿಸಿ ಕಲಾಂ ರಾಜು ಸ್ಟೆಂಟ್ ರೂಪಿಸಿ ಮಾನವೀಯತೆ ಮೆರೆದ ಮಹನೀಯ ಕಲಾಂ ಎಂದು ದ್ರೌಪದಿ ಮುರ್ಮು ಅವರು ಬಣ್ಣಿಸಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಡಾ ಭಾರತಿ ಪ್ರವೀಣ್ ಪವಾರ್ ಅವರು ಮಾತನಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಎರಡನ್ನೂ ಕಂಡಾಗ ಅಸಾಧ್ಯ ಎಂಬುದು ವೈಜ್ಞಾನಿಕ ಪದವೇ ಅಲ್ಲ ಎಂದೆನಿಸುತ್ತದೆ. ಬೆಂಗಳೂರಿನಲ್ಲಿ ಈ ದಿನ ಲೋಕಾರ್ಪಣೆಗೊಂಡ ರಾಷ್ಟ್ರೀಯ ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆಯ ದಕ್ಷಿಣ ವಲಯ ಪ್ರಯೋಗಾಲಯವು ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್), ಚಿಕನ್ ಗುನ್ಯಾ ತರಹದ ರೋಗದ ವೈರಾಣುಗಳ ಪತ್ತೆ ಹಚ್ಚುವಿಕೆ ಮತ್ತು ನಿಯಂತ್ರಣಕ್ಕೆ ಕಣ್ಗಾವಲು ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಶದ ಶೇಕಡಾ 65 ರಷ್ಟು ರಕ್ಷಣಾ ಉಪಕರಣಗಳು ಕರ್ನಾಟಕದಲ್ಲಿ ಉತ್ಪಾದನೆಗೊಳ್ಳುತ್ತಿವೆ. ಅಂತೆಯೇ, ದೇಶದ ಶೇಕಡಾ 65 ರಷ್ಟು ಔಷಧಿಗಳು ಕರ್ನಾಟಕದಲ್ಲಿಯೇ ತಯಾರಾಗುತ್ತಿವೆ. ಹೊಸ ರೋಗಗಳಿಗೆ ಹೊಸ ಔಷಧಿಗಳನ್ನು ಕಂಡು ಹಿಡಿಯುತ್ತಿರುವ ರಾಜ್ಯದ ವಿಜ್ಞಾನಿಗಳು ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂತೆಯೇ ಕರ್ನಾಟಕವು ದೇಶದ ಬಾಹ್ಯಾಕಾಶ ನಗರಿಯಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.
ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್ ಸೋಮನಾಥ್ ಅವರು 2023 ರ ಮಾರ್ಚ್ ವೇಳೆಗೆ ಮೊದಲ ಕುಳಿರರಿಮೆ ಯಂತ್ರವು ಹೊರ ಬರಲಿದೆ ಎಂದು ತಿಳಿಸಿದರು.
ಈ ಮುನ್ನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ ಬಿ ಅನಂತ ಕೃಷ್ಣನ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ತಂತ್ರಜ್ಞಾನಕ್ಕೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಕಲ ರೀತಿಯ ನೆರವು ನೀಡಲಿದೆ. ರಾಕೆಟ್ ತಂತ್ರಜ್ಞಾನಕ್ಕೆ ಅಗತ್ಯವಿರುವ ಎಲ್ಲಾ ಉಪಕರಣ ಮತ್ತು ಪರಿಕರಗಳನ್ನು ಒಂದೇ ಸೂರಿನಡಿ ತಯಾರಿಸಿ ಪೂರೈಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಜ್ಜುಗೊಂಡಿದೆ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಅವರಿಗೆ ಉಪಗ್ರಹ ಉಡಾವಣಾ ನೌಕೆಯ ಮಾದರಿಯ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಆಗಮಿಸಿದೊಡನೆಯೇ ವೈಮಾನಿಕಾಂತರಿಕ್ಷ ವಿಭಾಗಕ್ಕೆ ತೆರಳಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಆಸಕ್ತಿಯಿಂದ ವೀಕ್ಷಿಸಿ ಸವಿವರ ಮಾಹಿತಿ ಪಡೆದರು
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, Governor Thavarchand Gehlot ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್ Minister Sudhakar ಅವರೂ ಸೇರಿದಂತೆ ವಿಜ್ಞಾನಿಗಳೂ ಒಳಗೊಂಡಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post