ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಶಿಕ್ಷಣ ಪದ್ಧತಿ ಎಂದರೆ ಕೇವಲ ಪಠ್ಯಾಧ್ಯಯನವಲ್ಲ; ಅದು ಮಾನವನ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಸಂಸ್ಕಾರಾಧ ರಿತ ಜೀವನ ಶಿಕ್ಷಣ ಎಂದು ವೇದವಿಜ್ಞಾನ ಗುರುಕುಲದ ಪ್ರೊ.ರಾಮಚಂದ್ರಭಟ್ ಕೋಟೆಮನೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಸರ್ಗ ವಿದ್ಯಾ ನಿಕೇತನ ಶಾಲೆ – ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು–ಶಿಷ್ಯ ಪರಂಪರೆ, ಮೌಲ್ಯಚಿಂತನೆ, ಪ್ರಕೃತಿಯೊಂದಿಗೆ ಸಹಜ ನಂಟು ಮತ್ತು ಆತ್ಮವಿಕಾಸವೇ ಇದರ ಜೀವಾಳ ಎಂದರು.
ಈ ಶಾಶ್ವತ ಪರಂಪರೆಯನ್ನು ಆಧುನಿಕ ಶಿಕ್ಷಣದೊಂದಿಗೆ ಸಮನ್ವಯಗೊಳಿಸಿ, ನಿಸರ್ಗ ವಿದ್ಯಾ ನಿಕೇತನ ಶಾಲೆ ಕಳೆದ ಇಪ್ಪತ್ತೈದು ವರ್ಷಗಳಿಂದ ಜ್ಞಾನ–ಸಂಸ್ಕಾರ–ಶಿಸ್ತುಗಳ ಸಮಗ್ರ ಶಿಕ್ಷಣವನ್ನು ನೀಡುತ್ತಿರುವುದು ಅಭಿನಂದನೀಯ ರಜತ ಮಹೋತ್ಸವದ ಭವ್ಯ ಸಮಾರಂಭ ಈ ಶಿಕ್ಷಣ ಯಾತ್ರೆಯ ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪ್ರಕೃತಿ ಸಂಪದ ರಜತ ಮಹೋತ್ಸವ ವಿಶೇಷ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರಾಂಶುಪಾಲ ಡಾ. ಉದಯ್ ರತ್ನ ಕುಮಾರರ ದೂರದೃಷ್ಟಿಯ ನೇತೃತ್ವದಲ್ಲಿ, ರಜತ ಮಹೋತ್ಸವವನ್ನು ಕೇವಲ ಒಂದೇ ದಿನದ ಆಚರಣೆಗೆ ಸೀಮಿತಗೊಳಿಸದೆ, ವರ್ಷವಿಡೀ ವೈವಿಧ್ಯಮಯ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ಸೇವಾ ಮತ್ತು ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದು ಶಾಲೆಯ ವಿಶೇಷತೆ. ಇವು ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ನಾಯಕತ್ವ, ಸಾಮಾಜಿಕ ಹೊಣೆಗಾರಿಕೆ ಮತ್ತು ಭಾರತೀಯ ಸಂಸ್ಕೃತಿಯ ಅರಿವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಗಾಯಕ ಶಶಿಧರ ಕೋಟೆ ಮಾತನಾಡಿ, ನಿಸರ್ಗದೊಂದಿಗೆ ಸಹಬಾಳ್ವೆ, ಸಂಸ್ಕೃತಿಯ ಗೌರವ, ರಾಷ್ಟ್ರಭಕ್ತಿ, ಆತ್ಮವಿಶ್ವಾಸ ಮತ್ತು ಮಾನವೀಯ ಮೌಲ್ಯಗಳು – ಇವೆಲ್ಲವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಿಕ್ಷಕರ ಮಾರ್ಗದರ್ಶನ ಅನನ್ಯವಾಗಿದೆ. ಇಂತಹ ಗುರುಗಳ ಆಶೀರ್ವಾದದಲ್ಲಿ ರೂಪುಗೊಳ್ಳುವ ವಿದ್ಯಾರ್ಥಿಗಳೇ ನಾಳೆಯ ಸಂಸ್ಕಾರಯುತ, ಜವಾಬ್ದಾರಿಯುತ ನಾಗರಿಕರು ಎಂದರು.
ಸಾಕ್ಷಿ ಟ್ರಸ್ಟ್ ನ ಟ್ರಸ್ಟಿ ಡಾ.ರ.ವಿ.ಜಹಾಗೀರದಾರ , ಮುಖ್ಯ ಶಿಕ್ಷಕಿ ಜಯಮಾಲಾ ಬಿ., ಆಡಳಿತಾಧಿಕಾರಿ ಧನುಷ್ ಕುಮಾರ್ ವೇದಪುರಿ ಮೊದಲಾದವರು ವೇದಿಕೆಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















