ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರತಿಷ್ಠಿತ ಆಲಮಟ್ಟಿ ಅಣೆಕಟ್ಟೆಯಲ್ಲಿ 524.256 ಮೀ. ನೀರನ್ನು ಸಂಗ್ರಹಿಸುವ ಮೊದಲು ಈ ಯೋಜನೆಗೆ ಬಾಧಿತವಾಗುವ ಮತ್ತು ಮುಳುಗಡೆಯಾಗುವ ಭೂಪ್ರದೇಶದ ಸಂಪೂರ್ಣ ಪರಿಹಾರವನ್ನು ವಿತರಿಸಿಯೇ ನಂತರ ನೀರು ನಿಲ್ಲಿಸುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳರವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಹಣಮಂತ ನಿರಾಣಿಯವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಲ್ಲಿ ಮುಳುಗಡೆಯಾಗುವ ಇನ್ನುಳಿದ ಜಮೀನು ಕ್ಷೇತ್ರವು ಭೂಸ್ವಾಧೀನದ ವಿವಿಧ ಹಂತದಲ್ಲಿರುತ್ತದೆ ಹಾಗೂ ಹಂತ ಹಂತವಾಗಿ ಭೂಸ್ವಾಧೀನ ಪಡಿಸಿಕೊಂಡು ಭೂ ಪರಿಹಾರ ಒದಗಿಸಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಭೂಸ್ವಾಧೀನಪಡಿಸಿಕೊಂಡ ಜಮೀನು ಮಾಲೀಕರಿಗೆ ಭೂ ಪರಿಹಾರ ವಿತರಿಸಲಾಗಿರುತ್ತದೆ ಹಾಗೂ ಏನಾದರೂ ಮಾಲೀಕತ್ವದ ಕುರಿತು ಕಾನೂನು ತೊಡಕುಗಳು ಇದ್ದ ಪಕ್ಷದಲ್ಲಿ ನಿಯಮಾನುಸಾರ ಪರಿಶೀಲಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹ ಸಭೆಯಲ್ಲಿ ತಿಳಿಸಿದರು.
ಇಲ್ಲಿಯವರೆಗೆ 2127.79 ಕೋಟಿ ರೂ. ಪರಿಹಾರದ ಮೊತ್ತ ನೀಡಲಾಗಿದ್ದು, ಸಂತ್ರಸ್ಥರಿಗೆ 78.70 ಕೋಟಿ ರೂ. ಪರಿಹಾರ ವಿತರಿಸಬೇಕಾಗಿರುತ್ತದೆ ಎಂದು ವಿವರಗಳನ್ನು ನೀಡಿದರು. ಒಟ್ಟು 1,33,867 ಎಕರೆ ಕ್ಷೇತ್ರ ಪೈಕಿ ಇದುವರೆಗೂ ಒಟ್ಟು 23,592 ಎಕರೆ ಜಮೀನು ಭೂಸ್ವಾಧೀನತೆಗೆ ಅವಾರ್ಡ್ ಮಾಡಲಾಗಿದೆ ಎಂದು ಪ್ತಶ್ನೋತ್ತರ ವೇಳೆಯಲ್ಲಿ ಸದನಕ್ಕೆ ತಿಳಿಸಿದರು.
ಎತ್ತಿನಹೊಳೆ: ಅಧಿವೇಶನ ಮುಗಿದ ತಕ್ಷಣ ಸಭೆ
ಹಾಸನ ಜಿಲ್ಲೆಯಲ್ಲಿ ಎತ್ತಿನಹೊಳೆ ಮತ್ತು ಹೇಮಾವತಿ ಯೋಜನೆಗಳಿಂದ ಬಾಧಿತವಾದ ಸಂತ್ರಸ್ಥರಿಗೆ ಭೂ ಸ್ವಾಧೀನ ಪ್ರಕ್ರಿಯೆ ಕಾಯಿದೆ ಅನ್ವಯ ಭೂ ಪರಿಹಾರಗಳನ್ನು ವಿತರಿಸಲಾಗುತ್ತಿದ್ದು, ಅಧಿವೇಶನ ಮುಗಿದ ತಕ್ಷಣ ಈ ಕುರಿತು ಆ ಭಾಗದ ಎಲ್ಲಾ ಶಾಸಕರು ಮತ್ತು ಪ್ರಮುಖರ ಸಭೆ ಆಯೋಜಿಸುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ವಿಧಾನ ಪರಿಷತ್ತಿನಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿಯವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡುತ್ತಾ ಈಗಾಗಲೇ ಅವಾರ್ಡ್ ರಚನೆಯಾಗಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರವನ್ನು ತಕ್ಷಣ ಪಾವತಿ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಭೂಸ್ವಾಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆಯೆಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆಯಂತೆ ಹಾಗೂ ಹೊಸ ಭೂಸ್ವಾಧೀನ ಕಾಯಿದೆ ಕಲಂ-26 ರಿಂದ 30ರ ವರೆಗಿನ ನಿರ್ದೇಶನದಂತೆ ಆಯಾಯ ಗ್ರಾಮಗಳಿಗೆ ನಿಗದಿಪಡಿಸಲಾದ ದರದಂತೆ ಪ್ರತಿ ಎಕರೆಗೆ ಕನಿಷ್ಠ ರೂ.16 ಲಕ್ಷ ರೂ. ಗಳಿಂದ ಗರಿಷ್ಠ 26 ಲಕ್ಷ ರೂ.ಗಳವರೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ದರ ನಿಗದಿಪಡಿಸಲಾಗಿರುತ್ತದೆ ಎಂದು ಸದನದಲ್ಲಿ ಸಚಿವರು ತಿಳಿಸಿದರು.
ಈವರೆಗೆ ಒಟ್ಟು 17.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಭೂ ಸಂತ್ರಸ್ಥರಿಗೆ 8.51 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. 8.78 ಕೋಟಿ ರೂ. ವಿಶೇಷ ಭೂಸ್ವಾಧೀನಾಧಿಕಾರಿಗಳು, ಹಾಸನ ರವರಲ್ಲಿ ಲಭ್ಯವಿದ್ದು, ನೋಂದಣಿ ಕಾರ್ಯ ಕೈಗೊಂಡು ದಾಖಲೆ ಸಲ್ಲಿಸಿದ ಭೂಮಾಲೀಕರಿಗೆ ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ ಎಂದೂ ಸಹ ಸದನದಲ್ಲಿ ತಿಳಿಸಿದರು.
ಮಾಂಜ್ರಾ ಯೋಜನಾ ಪ್ರದೇಶಕ್ಕೆ ಭೇಟಿ:
ಬೀದರ್ ಜಿಲ್ಲೆಯ ಮಾಂಜ್ರಾ ಸರಣಿ ಬ್ಯಾರೇಜ್ ಗಳಲ್ಲಿ ಅಳವಡಿಸಿರುವ ಗೇಟುಗಳಿಂದ ಸಮಸ್ಯೆಯಾಗಿ ನೀರು ನಿಲ್ಲದಿರುವುದರ ಬಗ್ಗೆ ಪರಿಶೀಲಿಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಅಧಿವೇಶನದ ನಂತರ ಯೋಜನಾ ಪ್ರದೇಶಕ್ಕೆ ಭೇಟಿ ಕೊಟ್ಟು ಖುದ್ದು ಪರಿಶೀಲನೆ ನಡೆಸುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ರಘುನಾಥ್ ರಾವ್ ಮಲಕಾಪೂರೆ ರವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ಇದಕ್ಕೂ ಮೊದಲು ನೀರಾವರಿ ಕಾರ್ಯದರ್ಶಿ ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸ್ಥಳಕ್ಕೆ ಕಳುಹಿಸಿ ವರದಿ ಪಡೆಯಲಾಗುವುದು. ಗೇಟುಗಳಲ್ಲಿ ತಾಂತ್ರಿಕ ದೋಷವೇನಾದರೂ ಆಗಿದ್ದಲ್ಲಿ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.
ರಾಜ್ಯ ಶ್ರೇಷ್ಠ ನ್ಯಾಯಾಲಯದಲ್ಲಿ ಈ ಕುರಿತು ದಾಖಲಾಗಿದ್ದ ಪ್ರಕರಣವು ವಜಾ ಆಗಿದೆ. 04 ಬ್ಯಾರೇಜುಗಳಲ್ಲಿ 2016ರ ಸಾಲಿನಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮಾಂಜ್ರಾ ನದಿಯಲ್ಲಿ ಬೃಹತ್ ಪ್ರಮಾಣದ ಅಂದರೆ ಹೆಚ್.ಎಫ್.ಎಲ್ ಗಿಂತ 1.00 ಮೀ. ರಿಂದ 4.60 ಮೀ. ಎತ್ತರಕ್ಕೆ ಬಂದ ಪ್ರವಾಹದಿಂದ ಕೆಲವು ಗೇಟುಗಳು ಹಾನಿಗೊಳಗಾಗಿದ್ದು, ಅವುಗಳನ್ನು ಮೂಲ ಗುತ್ತಿಗೆದಾರರಿಂದ ನಿಗಮಕ್ಕೆ ಹೆಚ್ಚಿನ ಆರ್ಥಿಕ ಹೊರೆ ಆಗದಂತೆ ದುರಸ್ತಿಗೊಳಿಸಿ, 2017ನೇ ಸಾಲಿನಲ್ಲಿ ಗೇಟುಗಳನ್ನು ಸಮರ್ಪಕವಾಗಿ ಅಳವಡಿಸಿ, ನೀರು ಶೇಖರಣೆ ಮಾಡಲಾಗಿರುತ್ತದೆ ಎಂದು ಪರಿಷತ್ತಿನಲ್ಲಿ ಸಚಿವರು ತಿಳಿಸಿದರು.
ಕೊಡಗು ಪ್ರವಾಹ ಪ್ರದೇಶದಲ್ಲಿ ಸಂರಕ್ಷಣಾ ಸಾಧ್ಯತೆ ಪರಿಶೀಲನೆ:
ಕೊಡಗು ಜಿಲ್ಲೆಯಲ್ಲಿ ನದಿಗಳಲ್ಲಿ ಹೂಳು ತೆಗೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಹಾರಂಗಿ ಜಲಾನಯನ ಪ್ರದೇಶ ಹಾಗೂ ನದೀ ಪುನಶ್ಚೇತನ ರಕ್ಷಣಾ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿಯೇ ಕೈಗೆತ್ತಿಕೊಳ್ಳಲಾಗುವುದೆಂದು ವಿಧಾನ ಪರಿಷತ್ತಿನಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ವೀಣಾ ಅಚ್ಚಯ್ಯರವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಕಾವೇರಿ ಮತ್ತು ಹಾರಂಗಿ ನದಿಗಳಿದ್ದು ಅವುಗಳಲ್ಲಿ ಕುಶಾಲನಗರದ ಬಳಿ ಕಾವೇರಿ ನದೀ ಪಾತ್ರದಲ್ಲಿ ಎರಡು ಸ್ಥಳಗಳಲ್ಲಿ 2020-21ರಲ್ಲಿ ಹೂಳು ತೆಗೆಯಲು ಕ್ರಮಕೈಗೊಳ್ಳಲಾಗಿದೆಯೆಂದು ಸಚಿವರು ವಿವರಿಸಿದರು.
ಉಪ ನದಿಗಳಲ್ಲೂ ಇಂತಹುದೇ ಕ್ರಮ ಕೈಗೊಳ್ಳಬೇಕೆಂದು ವೀಣಾ ಅಚ್ಚಯ್ಯರವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಉಪ ನದಿಗಳೂ ಸೇರಿದಂತೆ ಎಲ್ಲಾ ರಕ್ಷಣಾತ್ಮಕ ಕಾಮಗಾರಿಗಳ ಕುರಿತು ಏನೇನು ಸಾಧ್ಯತೆಗಳು ಇವೆ ಪರಿಶೀಲಿಸೋಣವೆಂದು ವಿವರಿಸಿದರು.
ಬಳ್ಳಾರಿ ಜಿಲ್ಲೆ
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 17 ಕೆರೆಗಳಿಗೆ ನೀರು ತುಂಬಿಸುವ ವಿಸ್ತೃತ ಯೋಜನಾವರದಿ ಸಿದ್ದವಾಗಿದೆ. ಅದಕ್ಕೆ 300 ಕೋಟಿ ರೂ. ಹಣದ ಅವಶ್ಯಕತೆ ಇದೆ. ಇದಕ್ಕೆ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಕ್ರಮಕೈಗೊಳ್ಳಲಾಗುವುದೆಂದು ಸಚಿವರು ಕೆ.ಸಿಕೊಂಡಯ್ಯರವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post