ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 11 ಸರ್ಕಾರಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ವಿರುದ್ಧ ಲೋಕಾಯುಕ್ತ #Lokayuktha ಅಧಿಕಾರಿಗಳು ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಎಸ್ ಪಿ ಸುರೇಶ್ ಬಾಬು ನೇತೃತ್ವದಲ್ಲಿ ಸುಮಾರು 100 ಅಧಿಕಾರಿಗಳು ಒಂಬತ್ತು ಜಿಲ್ಲೆಗಳಲ್ಲಿ ಅಕ್ರಮ ಆಸ್ತಿಯನ್ನು ಸಂಗ್ರಹಿಸಿರುವ ಶಂಕಿತ ಸರ್ಕಾರಿ ಅಧಿಕಾರಿಗಳ ವಿರುದ್ಧ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಜಿಲ್ಲೆಗಳ ಅಧೀಕ್ಷಕರು ದಾಳಿಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ. 56 ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ.
ಭ್ರಷ್ಟಾಚಾರ ಎಸಗಿದ ಆರೋಪ ಕೇಳಿಬಂದ ಹಿನ್ನೆಲೆ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದು, ಕೋಲಾರ ತಹಶೀಲ್ದಾರ್ ವಿಜಿಣ್ಣ, ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಜಗದೀಶ್ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆದಿದೆ ಎನ್ನಲಾಗಿದೆ.
ಇಂದು ಮುಂಜಾನೆ ಕಾರ್ಯಾಚರಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಗೇರಿ ವಿಭಾಗದಲ್ಲಿರುವ ಕಂದಾಯ ಅಧಿಕಾರಿಯೊಬ್ಬರ ಕಲಬುರಗಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಡ್ಯ, ಮೈಸೂರಿನಲ್ಲಿ ದಾಳಿ:
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಮೈಸೂರಿನಲ್ಲಿ ನೀರಾವರಿ ಇಲಾಖೆಯ ಸೂಪರಿಡೆಂಟ್ ಇಂಜಿನಿಯರ್ ಮಹೇಶ್ ಕೆ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಕಾರ್ಯಾಚರಣೆ ನಡೆದಿದೆ.
ಮೈಸೂರಿನ ಜೆಸಿ ನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಗೋಕುಲಂ ಕಚೇರಿಯಲ್ಲಿಯೂ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಡ್ಯದಲ್ಲಿ ನಿವೃತ್ತ ಇಇ ಶಿವರಾಜ್ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ 3 ಕಡೆ, ಮೈಸೂರಿನ 2 ಕಡೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿರುವ ಶಿವರಾಜ್‌ಗೆ ಸೇರಿದ ಫಾರ್ಮ್‌ಹೌಸ್, ಶಿವರಾಜ್ ತಂದೆ ಮನೆ, ಜಲ್ಲಿ ಕ್ರಷರ್ ಮೇಲೂ ದಾಳಿ ನಡೆದಿದೆ.
ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದಲ್ಲಿ ಹಾಸನದಲ್ಲಿ ಗ್ರೇಡ್-೧ ಕಾರ್ಯದರ್ಶಿ ಮನೆಗಳ ಮೇಲೆ ದಾಳಿ ನಡೆದಿದೆ. ಗ್ರೇಡ್-1 ಕಾರ್ಯದರ್ಶಿ ಎನ್‌ಎಂ ಜಗದೀಶ್‌ಗೆ ಸೇರಿದ ಹಾಸನದ ಮನೆ, ಬೆಂಗಳೂರಿನ ಮನೆಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಎಂ ರವೀಂದ್ರಗೆ ಸೇರಿದ ಮನೆ, ಫಾರ್ಮ್‌ಹೌಸ್ ಮೇಲೆ ದಾಳಿ ನಡೆದಿದೆ. ಹಿರಿಯೂರು ತಾಲೂಕಿನ ಸೂಗೂರು ಫಾರ್ಮ್‌ಹೌಸ್, ಐಮಂಗಲ ಬಳಿ ಬಾಟಲಿ ಫ್ಯಾಕ್ಟರಿ ಮೇಲೂ ದಾಳಿ ನಡೆದಿದೆ.
ಕೋಲಾರದಲ್ಲಿ ತಹಸೀಲ್ದಾರ್, ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೆ ಮೇಲೂ ಲೋಕಯುಕ್ತ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















