ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಎಲ್ಲರಿಗೂ ಲಸಿಕೆ ನೀಡಲು ನಿಮಗೆ ಆಗುತ್ತದೋ, ಆಗಲ್ಲವೋ ಹೇಳಿ. ಆಗಲ್ಲ ಎಂದರೆ, ಲಸಿಕೆ ನೀಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸುತ್ತೇವೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಲಸಿಕೆ ನೀಡುವ ಕುರಿತಾಗಿ ಗೊಂದಲದ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಲಸಿಕೆ ನೀಡಲು ಸಾಧ್ಯವೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ಆಗುವುದಿಲ್ಲ ಎಂದರೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂಬುದನ್ನೇ ಆದೇಶದಲ್ಲಿ ಉಲ್ಲೇಖಿಸುತ್ತೇವೆ ಎಂದು ಕಿಡಿ ಕಾರಿದೆ.
ರಾಜ್ಯದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಕುತ್ತಿರುವ ಲಸಿಕೆ ಪ್ರಮಾಣ ಎಷ್ಟು, ಕೊರೋನಾ ಲಸಿಕೆ ವಿತರಣೆ ಬಗ್ಗೆ ಯಾವ ರೀತಿಯ ನಿರ್ಧಾರ, ಯಾವ ರೀತಿ ಸ್ವರೂಪ ತೆಗೆದುಕೊಂಡಿದ್ದೀರಿ, ಸರಿಯಾದ ಅಂಕಿ ಅಂಶ ದಾಖಲೆಗಳನ್ನು ನೀಡಿ, ಜನರನ್ನು ದಾರಿತಪ್ಪಿಸಬೇಡಿ ಎಂದು ಛೀಮಾರಿ ಹಾಕಿದೆ.
ಜನರ ಜೀವಿಸುವ ಹಕ್ಕನ್ನು ಉಲ್ಲಂಘಿಸಬೇಡಿ ಎಂದಿರುವ ನ್ಯಾಯಾಲಯ, ಆರೋಗ್ಯದ ಹಕ್ಕು ಜೀವಿಸುವ ಭಾಗವಾಗಿದ್ದು 2ನೆಯ ಡೋಸ್ ನ್ನು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡದಿದ್ದರೆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. 14 ಲಕ್ಷ ಡೋಸ್ ಸಿಕ್ಕರೂ ರಾಜ್ಯಕ್ಕೆ ಸಾಕಾಗುವುದಿಲ್ಲ, 26 ಲಕ್ಷ ಜನರಿಗೆ 2ನೇ ಡೋಸ್ ನೀಡಬೇಕಿದೆ, ಅದನ್ನು ಹೇಗೆ ನೀಡುತ್ತೀರಿ ಎಂದು ಕೇಳಿದೆ.
ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಸರ್ಕಾರದ ಪರ ವಕೀಲರು, ಲಸಿಕೆ ಕೊರತೆ ನಿಜವಾಗಿದ್ದು ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಜಾಗತಿಕ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ 3 ಕೋಟಿ ಲಸಿಕೆ ಡೋಸ್ ಗಳನ್ನು ತರಿಸಲು ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಲಸಿಕೆ ಲಭ್ಯತೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು ನಿಜವಾದ ಪರಿಸ್ಥಿತಿ ಏನಿದೆ ಎಂದು ಹೇಳಿ, ಜನರ ಮುಂದೆ ವಾಸ್ತವ ಸತ್ಯವನ್ನು ಹೇಳಬೇಕು. ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯುವುದೆಲ್ಲ ಸದ್ಯಕ್ಕೆ ಪ್ರಯೋಜನವಾಗುವುದಿಲ್ಲ ಎಂದರು.
ಲಸಿಕೆ ಪೂರೈಕೆ, ಜನರಿಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರವೂ ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು, ಮೊದಲ ಡೋಸ್ ನೀಡಿ ಎರಡನೇ ಡೋಸ್ ನೀಡುವ ಮಧ್ಯೆ ಇರುವ ಭಾರೀ ಅಂತರವನ್ನು ಕಡಿಮೆ ಮಾಡಬೇಕು. ಮಾರ್ಗಸೂಚಿಯನ್ನು ಮೊದಲು ಸರಿಯಾಗಿ ಸಿದ್ಧಪಡಿಸಿ ಎಂದು ಕೇಂದ್ರ ಸರ್ಕಾರಕ್ಕೂ ಹೈಕೋರ್ಟ್ ಛೀಮಾರಿ ಹಾಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post