ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
‘ರಾಜ್ಯದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಕಳೆದ ಕೆಲ ವರ್ಷಗಳಿಂದ ನಾವು ಕೋವಿಡ್ ನಿಂದ ನರಳಿದ್ದೇವೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದು, ಎಲ್ಲರ ಬದುಕು ಆರೋಗ್ಯಕರವಾಗಿ ಉತ್ತಮವಾಗಲಿ. ವ್ಯಾಪಾರ ವಹಿವಾಟು, ಮಳೆ, ಶಿಕ್ಷಣ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಕಳೆದುಕೊಂಡವರೆಲ್ಲರಿಗೂ ಈ ವರ್ಷ ಭಾಗ್ಯ ಮರುಕಳಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ D.K. Shivakumar ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ಮಾಡಲಾಗುತ್ತಿದೆ ಎಂದರು.
ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ. ಬೆಂಗಳೂರು ಹಾಗೂ ಇತರ ಎಲ್ಲಾ ಕಡೆಗಳಲ್ಲಿ ಇನ್ನು ಮುಂದೆ ಮಾಂಸದ ವ್ಯಾಪಾರ ಮಾಡುವವರು ಪ್ರಾಣಿ ವಧೆ ಮಾಡುವ ಮುನ್ನ ಸ್ಟನಿಂಗ್ (ಪ್ರಜ್ಞೆ ತಪ್ಪಿಸುವ) ಮಾಡಬೇಕು. ಇನ್ನು ಮುಂದೆ ಎಲ್ಲ ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ವ್ಯವಸ್ಥೆ ಇದ್ದರಷ್ಟೇ ಇನ್ನು ಮುಂದೆ ಪರವಾನಗಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಇಡೀ ರಾಜ್ಯದ ರೈತರು ಕೋಳಿ, ಕುರಿ, ಮೇಕೆಗಳನ್ನು ಸಾಕುತ್ತಾರೆ. ಅವುಗಳನ್ನು ಉಪಕಸುಬಾಗಿ ಮಾಡುತ್ತಿದ್ದಾರೆ. ಮಾಂಸದ ವ್ಯಾಪಾರ ಮಾಡುವವರಿಗೆ ರೈತರು ತಾವು ಸಾಕಿದ ಕೋಳಿ, ಕುರಿಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಲಾಲ್ ಮಾಡುತ್ತಾರೆ, ಮತ್ತೆ ಕೆಲವರು ಹಲಾಲ್ ಮಾಡುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ದೇಶದಲ್ಲಿ ಯಾರು ಹೇಗೆ ಬದುಕಬೇಕು, ಯಾರು ಏನನ್ನು ತಿನ್ನಬೇಕು ಎಂಬುದು ಸಾವಿರಾರು ವರ್ಷಗಳಿಂದ ಪರಂಪರೆಯಾಗಿ ನಡೆದುಕೊಂಡು ಬಂದಿದೆ ಎಂದರು.
Also read: ಹೊಸತೊಡಕು – ಶಾಂತಿಯುತ ಹಬ್ಬ ಆಚರಣೆಗೆ ಸೂಕ್ತ ಕ್ರಮ : ಸಿಎಂ
ಅವರೆಲ್ಲ ಅನಾದಿ ಕಾಲದಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ವಸ್ತುಗಳ ವಿನಿಮಯ ವ್ಯಾಪಾರ (barter system) ಪದ್ಧತಿ ಕೂಡ ಇತ್ತು. ನಾವು ಕೂಡ ದೇವರಿಗೆ ಬಲಿ ಕೊಡುವ ಹರಕೆ ಮಾಡಿಕೊಂಡರೆ ಆ ಪ್ರಾಣಿ ತಲೆಗೆ ತೀರ್ಥ ಹಾಕಿ ಆ ಪ್ರಾಣಿ ತಲೆ ಆಡಿಸುವವರೆಗೂ ಕಾಯುತ್ತೇವೆ. ನಂತರ ನಾವು ಅದನ್ನು ಬಲಿ ಕೊಡುತ್ತೇವೆ. ಇದು ನಮ್ಮ ಪರಂಪರೆ. ನಮ್ಮ ಬದುಕಿನಲ್ಲಿ ನಾವದನ್ನು ಮಾಡಿಕೊಂಡು ಬಂದಿದ್ದೇವೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, ‘ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರಿಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ?’ ಎಂದು ಕೇಳುತ್ತಿದ್ದಾರೆ ಎಂದರು.
ಹಳ್ಳಿಗಳಲ್ಲಿ ಪಶು ಸಂಗೋಪನೆ ಮಾಡಿ ಎಂದು ಉತ್ತೇಜನ ನೀಡಿದವರು ಯಾರು? ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ಇದನ್ನೇ ಅವಲಂಬಿಸಿದ್ದಾರೆ. ಈ ಕೋಳಿ, ಕುರಿಗಳು ಸರಿಯಾದ ಸಮಯಕ್ಕೆ ಮಾರಾಟವಾಗದಿದ್ದರೆ, ಅವುಗಳಿಗೆ ನಿತ್ಯ ಹಾಕುವ ಮೇವು, ಸಾಕಣೆ ಮಾಡುವವನಿಗೆ ಹೊರೆಯಾಗುತ್ತದೆ ಎಂದರು.
ನಾನು ಕೂಡ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ನಮ್ಮ ಊರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಕೋಳಿ ಫಾರಂ ಇಟ್ಟುಕೊಂಡಿದ್ದೆ. ನನಗೆ ಇದರ ವ್ಯಾಪಾರ, ವ್ಯವಹಾರ ಎಲ್ಲವೂ ಗೊತ್ತಿದೆ. ನಮ್ಮ ಮನೆಯಲ್ಲಿ ಕುರಿಗಳನ್ನು ಸಾಕಿದ್ದೆವು. ಕೋಳಿಗಳ ವಧೆಗೆ ಇಂತಿಷ್ಟು ಸಮಯ ಎಂದು ಇರುತ್ತದೆ. ಆ ಸಮಯ ಮೀರಿದರೆ, ಅದು ಸಾಕಣೆ ಮಾಡುವವರಿಗೆ ಹೊರೆಯಾಗಿ ನಷ್ಟ ಅನುಭವಿಸುವಂತಾಗುತ್ತದೆ.
ಬಟ್ಟೆ ಹೊಲಿಯುವವನು ಬಟ್ಟೆ ಹೊಲಿಯುತ್ತಾನೆ, ಮೊಟ್ಟೆ ಮಾರುವವನು ಮಾರುತ್ತಾನೆ. ಹೀಗೆ ಒಬ್ಬೊಬ್ಬರು ಒಂದೊಂದು ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬರು ತಮ್ಮ ವ್ಯಾಪಾರ ಬಿಟ್ಟು ಬೇರೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ಇಷ್ಟು ದಿನಗಳ ಕಾಲ ಮಾಂಸ ವ್ಯಾಪಾರ ಮಾಡುವವರು ಇಂತಿಷ್ಟು ದರ ಎಂದು ಹಾಕುತ್ತಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂದು ಹೋಗಿ ನೋಡಿ. ಆರ್ ಎಸ್ ಎಸ್, ಬಿಜೆಪಿಯವರ ಈ ಆದೇಶಕ್ಕೆ ಯಾರೂ ಅಂಜಿಕೊಳ್ಳಬೇಡಿ. ರೈತರು ಹಾಗೂ ವ್ಯಾಪಾರಿಗಳ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ರೈತರು ಹಾಗೂ ವ್ಯಾಪಾರಿಗಳು ಸಮಾಜದಲ್ಲಿ ಒಂದಕ್ಕೊಂದು ಕೊಂಡಿಯಾಗಿ ಬೆಸೆದುಕೊಂಡಿದ್ದು, ನಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ನಾವು ಮಾಡುತ್ತೇವೆ. ನಿಮಗೆ ಏನಾದರೂ ತೊಂದರೆ ಆದರೆ ನಮಗೆ ತಿಳಿಸಿ, ನಮ್ಮ ಕಾರ್ಯಕರ್ತರನ್ನು ಕಳುಹಿಸಿ ನಿಮಗೆ ರಕ್ಷಣೆ ಕೊಡಿಸುವ ಕೆಲಸ ನಾವು ಮಾಡುತ್ತೇವೆ. ಇದು ನಮ್ಮ ಜವಾಬ್ದಾರಿ ಎಂದರು.
ನಾನು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ, ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಕ್ಕೆ ಗೌರವ ನೀಡಿ. ಎಲ್ಲರನ್ನು ಒಟ್ಟಾಗಿ ಸೌಹಾರ್ದತೆಯಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಪ್ರಮಾಣ ಮಾಡಿದ್ದೀರಿ. ಅವರ ಬದುಕು, ಹೊಟ್ಟೆ ಮೇಲೆ ಹೊಡೆಯಬೇಡಿ. ಈಗಾಗಲೇ ಉದ್ಯೋಗ ನಷ್ಟ ಆಗುತ್ತಿದೆ. ವ್ಯಾಪಾರ, ವ್ಯವಹಾರ ನಷ್ಟ ಆಗುತ್ತಿದೆ. ಎಲ್ಲರೂ ಒಟ್ಟಾಗಿ ಬದುಕಲು ಅವಕಾಶ ಮಾಡಿಕೊಡಿ. ಈ ಕೂಡಲೇ ನಿಮ್ಮಪಕ್ಷ ಹಾಗೂ ಸಂಘಟನೆ ಹೆಸರು ಹೇಳಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೋ ಅದನ್ನು ನಿಲ್ಲಿಸಿ. ನಾಳೆ ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡುತ್ತೇನೆ ಎಂದರು.
ಸರ್ಕಾರದ ಏಕಾಏಕಿ ಆದೇಶದ ಉದ್ದೇಶ ಏನು ಎಂಬ ಪ್ರಶ್ನೆಗೆ, ‘ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಮಾಡುವ ಉದ್ದೇಶ. ಚುನಾವಣೆಯನ್ನು ಸರಿಯಾಗಿ ಮಾಡಲು ಅವರ ಬಳಿ ಯಾವುದೇ ಸಾಧನೆಗಳಿಲ್ಲ. ಹೀಗಾಗಿ ಇಂತಹ ಭಾವನಾತ್ಮಕ ವಿಚಾರವನ್ನು ತರುತ್ತಿದ್ದಾರೆ. ನಾವು ಸಂವಿಧಾನದ ಆಶಯದಂತೆ ಸಮಾಜವನ್ನು ಒಂದು ಮಾಡಲು ಪ್ರಯತ್ನಿಸಿದರೆ, ಅವರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದರು.
ಹಲಾಲ್ ಕಟ್ ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, ‘ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ. ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ‘ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post