ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಾತಿ ಗಣತಿಯ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದ ಕಾಂಗ್ರೆಸ್ ನಾಯಕರು, ಪ್ರತಿ ಜಿಲ್ಲೆಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ವರದಿಯನ್ನು ಸೋರಿಕೆ ಮಾಡಿದ್ದರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Minister Sudhakar ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ಹತ್ತಿರವಾದಂತೆ ಕ್ಷುಲ್ಲಕ ವಿಚಾರಗಳನ್ನೆತ್ತಿ ಆರೋಪ ಮಾಡುವುದನ್ನು, ಸುಳ್ಳು ಆಪಾದನೆ ಮಾಡುವುದನ್ನು ಕಾಂಗ್ರೆಸ್ ನಾಯಕರು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, 130 ಕೋಟಿ ರೂ. ಖರ್ಚು ಮಾಡಿ ಜಾತಿ ಗಣತಿ ಮಾಡಲಾಗಿತ್ತು. ಆ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ಕಾಂಗ್ರೆಸ್ ಅಭ್ಯರ್ಥಿಗಳ ಬಳಿ ಮಾತ್ರ ಹಂಚಿಕೊಳ್ಳಲಾಗಿತ್ತು. ಇದನ್ನು ನಾನು ಬೇಕಿದ್ದರೆ ಶೇರ್ ಮಾಡುತ್ತೇನೆ. ಜಾತಿ ಗಣತಿಯನ್ನು ಗೌಪ್ಯವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅವರಿಗೆ ಬೇಕಾದವರಿಗೆ ಸೋರಿಕೆ ಮಾಡಲಾಗಿದೆ. ಇದರ ಹೊಣೆಗಾರಿಕೆಯನ್ನು ಕಾಂಗ್ರೆಸ್ ನಾಯಕರು ಹೊರುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಯಾವುದಾದರೂ ತಾರ್ಕಿಕವಾದ ವಿಷಯಗಳನ್ನು ಇಟ್ಟುಕೊಂಡು ಮಾತನಾಡಬೇಕು. ಆದರೆ ಕಾಂಗ್ರೆಸ್ ನಾಯಕರು ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ಮಾತನಾಡಿ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ಅವರು ಉತ್ಪ್ರೇಕ್ಷೆ ಮಾಡಿ ಮಾತನಾಡಿದ್ದಾರೆ. ಆದರೆ ಮುಖ್ಯಮಂತ್ರಿಗಳು ಈಗಾಗಲೇ ತನಿಖೆಗಾಗಿ ಕಾನೂನಿನ ಸಲಹೆ ಪಡೆಯಲು ಸೂಚಿಸಿದ್ದಾರೆ. ಕಾನೂನು ಸಲಹೆಯಂತೆ ಸರ್ಕಾರ ಕ್ರಮ ವಹಿಸಲಿದೆ. ಈ ರೀತಿಯ ರಾಜಕೀಯ ಹುನ್ನಾರ ಮಾಡುವುದು ಬಿಜೆಪಿಯ ಇತಿಹಾಸದಲ್ಲೇ ಇಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆಯುತ್ತಿರುವುದರಿಂದ ಇಂತಹ ವಿಷಯಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಜನರ ಮುಂದೆ ಹೋಗುತ್ತಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post