ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಮೈಸೂರು |
ಕ್ಯಾಪ್ಟನ್ ಪ್ರಾಂಜಲ್… Captain Pranjal ಇನ್ನು ಕೆಲವೇ ದಿನಗಳಲ್ಲಿ ಮೇಜರ್ ಹುದ್ದೆಗೆ ಪದೋನ್ನತಿ ಹೊಂದಬೇಕಿದ್ದ ವೀರ ಯೋಧ ಪ್ರಾಂಜಲ್ ನಿನ್ನೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ.
ಹೌದು… ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಿನ್ನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ (29) ಹುತಾತ್ಮರಾಗಿದ್ದಾರೆ.
ರಾಜೌರಿ ಜಿಲ್ಲೆಯ ಕಲಕೋಟ್ ಅರಣ್ಯದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಹುತಾತ್ಮರಾದವರ ಇಬ್ಬರು ಸೇನಾಧಿಕಾರಿಗಳ ಪೈಕಿ ಒಬ್ಬರು ಕರ್ನಾಟಕದ ಮೈಸೂರು ಮೂಲದವರು ಎಂಬುದು ದೃಢಪಟ್ಟಿದೆ.
ದಕ್ಷಿಣ ಕನ್ನಡದ ಕಾಟಿಪಳ್ಳದಲ್ಲಿ ತನ್ನ ಬಾಲ್ಯ ಕಳೆದ ಇವರು ಚಿಕ್ಕ ವಯಸ್ಸಿನಿಂದಲೂ ಸೈನ್ಯಕ್ಕೆ ಸೇರಿ ರಾಷ್ಟ್ರ ರಕ್ಷಣೆಯ ಕನಸನ್ನು ಹೊತ್ತಿದ್ದರು. ಕ್ಯಾಪ್ಟನ್ ಪ್ರಾಂಜಲ್ ಮಂಗಳೂರಿನ ಎಂಆರ್’ಪಿಎಲ್ ತೈಲ ಕಂಪನಿಯಲ್ಲಿ ಹಲವು ವರ್ಷಗಳ ಕಾಲ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿರುವ ಎಂ. ವೆಂಕಟೇಶ್ ಅವರ ಪುತ್ರರಾಗಿದ್ದಾರೆ..
ಪ್ರಾಂಜಲ್ ಅವರು ವೆಂಕಟೇಶ್ ಅವರ ಏಕೈಕ ಪುತ್ರರಾಗಿದ್ದು, ಇವರು ಎಸ್’ಎಸ್‌ಎಲ್’ವಿವರೆಗೆ ಸುರತ್ಕಲ್ ಎಂಆರ್’ಪಿಎಲ್ ಸಮೀಪದಲ್ಲೆ ಇರುವ ಡೆಲ್ಲಿ ಪಬ್ಲಿಕ್ ಸ್ಕೂಲ್’ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಪಿಯುಸಿ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು.
ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಾಂಜಲ್ ಅವರು ಇನ್ನು ಕೆಲವೇ ದಿನಗಳಲ್ಲಿ ಮೇಜರ್ ಸ್ಥಾನಕ್ಕೆ ಪದೋನ್ನತಿ ಹೊಂದಬೇಕಿತ್ತು. ಆದರೆ, ಇದಕ್ಕೂ ಮುನ್ನವೇ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ.
ಕ್ಯಾ. ಪ್ರಾಂಜಲ್ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಬನ್ನೇರುಘಟ್ಟದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post