ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಆರ್.ವಿ. ರಸ್ತೆಯ ವಿಜಯ ಕಾಲೇಜು ಮತ್ತು ಕರ್ನಾಟಕ ಸರ್ವೋದಯ ಮಂಡಲದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿವಸ (ರಾಷ್ಟ್ರೀಯ ಕಾನೂನು ದಿನಾಚರಣೆ) ಅಂಗವಾಗಿ ವಿಶೇಷ ಉಪನ್ಯಾಸವನ್ನು ನ. 22ರ ಮಂಗಳವಾರ ಮಧ್ಯಾಹ್ನ 1ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಆಯೋಸಲಾಗಿದೆ.
ಬಿ.ಹೆಚ್.ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೆ. ಎಸ್. ಸಮೀರಸಿಂಹ ಕಾರ್‍ಯಕ್ರಮ ಉದ್ಘಾಟಿಸಲಿದ್ದಾರೆ. ಡಾ.ಹೆಚ್.ಎಸ್. ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ (ಲಕ್ಷ್ಮಣ್ ತುಕಾರಾಂ ಗೋಲೆ ಪರಿವರ್ತನೆ ಕಥೆ) ಸಾಂದರ್ಭಿಕ ಕೃತಿ ಬಿಡುಗಡೆ ಮಾಡುವರು, ‘ವಕೀಲರಾಗಿ ಮಹಾತ್ಮ ಗಾಂಧೀಜಿ’ Mahathma Gandhiji ಕುರಿತು ತುಮಕೂರಿನ ಹಿರಿಯ ಗಾಂಧಿ ಚಿಂತಕ ಲ. ನರಸಿಂಹಯ್ಯ ತೊಂಡೋಟಿ ಉಪನ್ಯಾಸ ನೀಡುವರು.
ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು, ಪ್ರಾಂಶುಪಾಲೆ ಪ್ರೊ. ಕೆ.ಎಸ್. ಶೈಲಜಾ ಅಧ್ಯಕ್ಷತೆ ವಹಿಸುವರು. ರಾ.ಸೇ.ಯೋ ಅಧಿಕಾರಿ ಪ್ರೊ.ಎಸ್.ಎ. ಶ್ರೀಕಂಠ , ಉಪ ಪ್ರಾಂಶುಪಾಲ ಡಾ.ಡಿ. ರಾಧಾಕೃಷ್ಣ , ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ಡಾ. ಯ.ಚಿ. ದೊಡ್ಡಯ್ಯ ಉಪಸ್ಥಿತರಿರುವರು ಎಂದು ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ತಿಳಿಸಿದ್ದಾರೆ.
ವಿವರಗಳಿಗೆ : 9035618076ಗೆ ಸಂಪರ್ಕಿಸಬಹುದು
ಡಾ. ಹೆಚ್.ಎಸ್.ಸುರೇಶ್ ಕಿರು ಪರಿಚಯ :
ನರಸಿಂಹರಾಜಪುರ ಮೂಲದ ಹೊಸ್ಕೆರೆ ಶಂಕರ ಭಟ್ಟ ಸುರೇಶ್ ಜನಿಸಿದ್ದು ಶಿವಮೊಗ್ಗದಲ್ಲಿ. ಆಯನೂರು, ಮಂಡಿಘಟ್ಟ, ಕುಂದಾಪುರ, ಶಿವಮೊಗ್ಗ ದಲ್ಲಿ ಶಿಕ್ಷಣ.ಹಾರನಹಳ್ಳಿ, ಮತ್ತೂರಿನಲ್ಲಿ ಕೆಲ ವರ್ಷ ಪ್ರೌಢ ಶಾಲೆ ಶಿಕ್ಷಕರಾಗಿದ್ದು ನಂತರ ಮಡಿಕೇರಿ ಮತ್ತು ಮಂಡ್ಯ ವಿ. ಸಿ. ಫಾರಂ ನಲ್ಲಿ ಸಾಮಾಜಿಕ ಶಿಕ್ಷಣ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಲಿಂದ ಕೇಂದ್ರ ಸರಕಾರದ ನೆಹ್ರೂ ಯುವ ಕೇಂದ್ರವನ್ನು ಸೇರಿ ಮಂಡ್ಯ ಜಿಲ್ಲೆಯ ಯುವಜನರ ಪ್ರೀತಿಗೆ ಪಾತ್ರರಾದರು.
ಮುಂದೆ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ಸೇರ್ಪಡೆಯಾಗಿ ಮಹಾರಾಷ್ಟ್ರ ಗೋವಾ, ಗುಜರಾತ್, ಕೇರಳ, ಕರ್ನಾಟಕದಲ್ಲಿ ಎನ್. ಎಸ್.ಎಸ್. ಸಲಹೆಗಾರರಾಗಿ ಕೆಲಸ ಮಾಡಿ 2009 ರಲ್ಲಿ ನಿವೃತ್ತರಾದರು . ಹುಬ್ಬಳ್ಳಿಯಲ್ಲಿನ ರಾಜ್ಯ ಕಾನೂನು ವಿಶ್ವ ವಿದ್ಯಾಲಯದಲ್ಲಿ ಎನ್ನೆಸ್ಸೆಸ್ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು. ರಾಜ್ಯ ಯುವ ರೆಡ್ ಕ್ರಾಸ್ ಸಲಹೆಗಾರರಾಗಿ ಕಾಲೇಜುಗಳಿಗೆ ಅಗತ್ಯವಾದ ಮಾರ್ಗದರ್ಶಿ ಕೈಪಿಡಿ ರಚಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಭರತ್ ಲಾಲ್ ಮೀನಾ ಅವರಿಂದ ಸ್ಥಾಪಿತ ಅಪ್ನಾ ದೇಶ್ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಸರ್ವ ಸೇವಾ ಸಂಘ ವಾರ್ಧ ಇವರ ಆಹ್ವಾನದ ಮೇರೆಗೆ ಬಾಂಗ್ಲಾ ದೇಶ್‌ನ ನೌಕಾಲಿ ಯಲ್ಲಿ ಆಕ್ಟೋಬರ್ 2, 2018ರಲ್ಲಿ ನಡೆದ ಹತ್ತು ದಿನಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಇವರ ‘ಎನ್. ಎಸ್ .ಎಸ್. ಅಧಿಕಾರಿಗಳಲ್ಲಿ ಪಾತ್ರ ಪರಿಕಲ್ಪನೆ’ ಪ್ರೌಢ ಪ್ರಬಂಧಕ್ಕೆ ಮಹಾರಾಷ್ಟ್ರದ ನಾಂದೇಡ್ ವಿಶ್ವವಿದ್ಯಾಲಯದ ಪಿಹೆಚ್. ಡಿ. ಲಭಿಸಿದೆ. ಶ್ರೀಲಂಕಾ, ಸಿಂಗಪೂರ್, ಬ್ರಿಟನ್, ಫ್ರಾನ್ಸ್ , ಅಮೆರಿಕ, ವೆಸ್ಟ್ ಇಂಡೀಸ್‌ನಲ್ಲಿನ ಯುವ ಸೇವೆಗಳ ಅಧ್ಯಯನ ಮಾಡಿದ್ದಾರೆ. ದೂರದರ್ಶನದ ಚಂದನ ವಾಹಿನಿಯಲ್ಲಿ, ಬೆಂಗಳೂರು ಆಕಾಶವಾಣಿಯಲ್ಲಿ ಸಂದರ್ಶನ, ಸಂವಾದಗಳಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷರಾಗಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















