ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಾಲ್ಮೀಕಿ ಜನಾಂಗದ ಶಾಪ ಸರ್ಕಾರಕ್ಕೆ ತಟ್ಟಬಾರದೆಂದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಆರ್ಥಿಕ ಸಚಿವರೂ ಆಗಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ #R Ashok ಆಗ್ರಹಿಸಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ #Valmiki Corporation Scam ಕುರಿತು ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ವಸಂತನಗರದ ಯೂನಿಯನ್ ಬ್ಯಾಂಕ್ ಹಾಗೂ ಎಂಜಿ ರಸ್ತೆಯ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿದೆ. ಎರಡು ಖಾತೆ ತೆರೆಯಬಾರದು ಎಂದು ಸರ್ಕಾರವೇ ಆದೇಶ ಮಾಡಿರುವಾಗ ಅದನ್ನು ಉಲ್ಲಂಘಿಸಲಾಗಿದೆ. ಕಳ್ಳತನ ಆಗಿರುವುದೇ 187 ಕೋಟಿ ರೂ. ಎಂದಿರುವಾಗ ಅದು 89 ಕೋಟಿ ರೂ. ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸು ಇಲಾಖೆಯವರು ತಮಗೆ ಗೊತ್ತಿರಲಿಲ್ಲ ಎಂದು ಹೇಳಿದರೂ ಅದು ದೊಡ್ಡ ತಪ್ಪು ಎಂದರು.

ಬೇನಾಮಿ ಹಣ ಬಂದ ಕೂಡಲೇ ಸಹಜವಾಗಿ ಇಲ್ಲಿ ಜಾರಿ ನಿರ್ದೇಶನಾಲಯ ಬಂದು ತನಿಖೆ ಮಾಡಿದೆ. ಹಾಗೆಯೇ ಸಿಬಿಐ ಕೂಡ ಕಾನೂನು ಪ್ರಕಾರ ಮಧ್ಯಪ್ರವೇಶ ಮಾಡಿ ತನಿಖೆ ಮಾಡುತ್ತಿದೆ. ಆದರೆ ಎಸ್‌ಐಟಿಯನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ್ದು, ತನಿಖೆ ವೇಗವಾಗಿ ನಡೆದಿಲ್ಲ. ಇಲ್ಲಿ ತಾರತಮ್ಯ ನಡೆದಿದೆ ಎಂದರು.

ನಿಗಮದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕ್ರಿಯಾಯೋಜನೆಗೆ ಆದೇಶ ಹೊರಡಿಸಿ ಐದು ತಿಂಗಳಾದರೂ ಅದನ್ನು ಇಲಾಖೆಯ ಕಾರ್ಯದರ್ಶಿ ಪರಿಶೀಲನೆ ಮಾಡಿಲ್ಲ. ಪರಿಶಿಷ್ಟ ಪಂಗಡಕ್ಕೆ ನೀಡಿದ ಈ ಯೋಜನೆಯ ಪ್ರಗತಿ ಎಷ್ಟೆಂದು ತಿಳಿಯುವ ಪ್ರಯತ್ನವೇ ನಡೆದಿಲ್ಲ. ತಳ್ಳು ಗಾಡಿ ಬರುತ್ತದೆಂದು ಕಾಯುತ್ತಿದ್ದ ವ್ಯಕ್ತಿಗೆ ಹಣ ತಲುಪಲೇ ಇಲ್ಲ. ಹಿಂದಿನ ಬಜೆಟ್‌ನಲ್ಲಿ ನೀಡಿದ ಹಣವನ್ನು ಏಕೆ ಖರ್ಚು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪ್ರಶ್ನಿಸಬೇಕಿತ್ತು. ಆಗಲೇ ಪ್ರಶ್ನೆ ಮಾಡಿದ್ದರೆ ಫಲಾನುಭವಿಗಳಿಗೆ ಅನುಕೂಲವಾಗುತ್ತಿತ್ತು ಎಂದರು.
Also read: ಪವರ್ ಲಿಫ್ಟಿಂಗ್ ಸ್ಪರ್ಧೆ: ಪೆಸಿಟ್‌ನ್ ಸುಮನ್‌ಗೆ ಚಿನ್ನದ ಪದಕ
ಹಗರಣವಾಗಿದೆ ಎಂದು ಗೊತ್ತಾದಾಗ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಇದು ತಮ್ಮ ವ್ಯಾಪ್ತಿಯದ್ದಲ್ಲ ಎಂದು ಹೇಳಿದರು. ಆರ್ಥಿಕ ಇಲಾಖೆಯವರೂ ಇದನ್ನೇ ಹೇಳಿದರು. ಮುಖ್ಯಮಂತ್ರಿಯನ್ನು ಕೇಳಿದರೆ ಇದು ನನಗೆ ಸಂಬಂಧವಿಲ್ಲ ಎಂದರು. ಹೀಗೆ ಯಾರೂ ಒಪ್ಪಿಕೊಳ್ಳದೆ ಮತ್ತೊಬ್ಬರ ಮೇಲೆ ತಪ್ಪು ಹೇರುವ ಕೆಲಸ ಮಾಡಿದ್ದಾರೆ. ಇದು ಹೊಣೆ ಇಲ್ಲದ ಸರ್ಕಾರ ಎಂದು ದೂರಿದರು.

ಇದು 224 ಶಾಸಕರಿಗೂ ಸಂಬಂಧಪಟ್ಟ ಸಂಗತಿ. ಒಂದು ವರ್ಷದಿಂದ ನಿಗಮದಿಂದ ದಲಿತರಿಗೆ 187 ಕೋಟಿ ರೂ. ಮೊತ್ತದ ಯೋಜನೆ ಸಿಕ್ಕಿಲ್ಲ. ಈ ಹಣವನ್ನು ಮುಖ್ಯಮಂತ್ರಿಯೇ ನೀಡಬೇಕು. ಇದಕ್ಕೆ ಯಾರು ಜವಾಬ್ದಾರಿ? ಯೋಜನೆ ಮುಂದುವರಿಸುವುದಕ್ಕೆ ಯಾರನ್ನು ಹೊಣೆಗಾರರಾಗಿ ಮಾಡುತ್ತಾರೆ? ಇದು ಕ್ಷೇತ್ರದ ಮತದಾರರಿಗೆ ತಲುಪಬೇಕಾದ ಹಣ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಮನೆಗೆ ಹೋಗಿ ಒಂದು ದಿನ ವಾಸ್ತವ್ಯ ಮಾಡಲಿ. ದಲಿತರು ಎಷ್ಟು ಕಷ್ಟ ಪಡುತ್ತಾರೆ ಎಂದು ಗೊತ್ತಾಗುತ್ತದೆ. ಅಂತಹ ಜನರ ಹಣವನ್ನು ಕದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ಕುಟುಂಬ ಬೀದಿಗೆ ಬಂದಿದೆ ಎಂಬ ಸುದ್ದಿ ಪತ್ರಿಕೆಯಲ್ಲಿ ಬಂದಿದೆ. ಆ ಮನೆಯನ್ನೇ ಕುಟುಂಬದವರು ಖಾಲಿ ಮಾಡಿ ಹೋಗಿದ್ದಾರೆ. ಆ ಕುಟುಂಬವೀಗ ಬೀದಿಗೆ ಬಂದಿದೆ. ಸಚಿವರು ಬಂದು ಸಮಾಧಾನ ಹೇಳಿದ್ದಾರೆಯೇ ಹೊರತು, ಏನೂ ಪರಿಹಾರ ಸಿಕ್ಕಿಲ್ಲ ಎಂದು ಮೃತ ಅಧಿಕಾರಿಯ ಪತ್ನಿ ಹೇಳಿದ್ದಾರೆ. ಇದೇ ರೀತಿ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಆಗಿದ್ದರೆ ಸಹಿಸಿಕೊಳ್ಳುತ್ತಿದ್ದೆವಾ? ಎಂದು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post