ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಸಮಾನತೆ ಹೋಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂಬುದು ಸಂವಿಧಾನದ ಉದ್ದೇಶ, ಇದಕ್ಕೆ ವಿರುದ್ಧವಾಗಿರುವವರು ಬಿಜೆಪಿಯವರು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಗುಡುಗಿದರು.
ಅವರು ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಕಲ್ಪ ಅಧಿವೇಶನದಲ್ಲಿ ಮಾತನಾಡಿ, 1925ರಲ್ಲಿ ಹೆಡಗೇವಾರ್ ಅವರು ಆರ್,ಎಸ್,ಎಸ್ ನ ಸಂಸ್ಥಾಪನಾ ಅಧ್ಯಕ್ಷರು. ಅವರ ನಂತರ ಗೋಲ್ವಾಲ್ಕರ್ ಅವರು ಸಂಚಾಲಕರಾಗಿ ಕೆಲಸ ಮಾಡಿದ್ದರು. ಸಾವರ್ಕರ್ ಅವರು ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಯಿತು. 1980ರಲ್ಲಿ ಭಾರತೀಯ ಜನತಾ ಪಕ್ಷ ಹುಟ್ಟಿಕೊಂಡಿತು. ಈ ಬಿಜೆಪಿ ಎನ್ನುವುದು ಆರ್,ಎಸ್,ಎಸ್ ನ ರಾಜಕೀಯ ಅಂಗ. ಇದನ್ನು ನಿಯಂತ್ರಿಸುವುದು ಆರ್,ಎಸ್,ಎಸ್ ಮತ್ತು ಹಿಂದೂ ಮಹಾಸಭಾ. ಗೋಲ್ವಾಲ್ಕರ್ ಅವರ ಚಿಂತನ ಗಂಗಾ ಪುಸ್ತಕದಲ್ಲಿ, ಆರ್,ಎಸ್,ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಚಿಂತನ ಗಂಗಾ ಕೃತಿಯಲ್ಲಿ ಒಂದು ಕಡೆ “ಅಲ್ಲಿ ಇಲ್ಲಿ ಹೀಗೆ ಹಲವು ದೇಶಗಳ ಸಂವಿಧಾನದಿಂದ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಬಂದು, ಹೊಂದಾಣಿಕೆ ಇಲ್ಲದಂತೆ ಅಸಂಬದ್ಧವಾದ ರೀತಿ ಸಂವಿಧಾನ ರಚನೆ ಮಾಡಿದ್ದಾರೆ. ಇದು ಈ ದೇಶಕ್ಕೆ ಹೊಂದಾಣಿಕೆ ಇಲ್ಲದ ಸಂವಿಧಾನ” ಎಂದು ಬರೆದಿದ್ದಾರೆ. ಇದು ಆರ್,ಎಸ್,ಎಸ್ ಗೆ ಸಂವಿಧಾನದ ಬಗ್ಗೆ ಕವಡೆಕಾಸಿನ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ. ಅವರು ಸಂವಿಧಾನ ಹೇಳುವ ಸಮಾನತೆಗೆ ವಿರುದ್ಧವಾದವರು ಎಂದರು.

ಬಾಬಾ ಸಾಹೇಬರು ಸಂವಿಧಾನ ಅಂಗೀಕಾರವಾಗುವ ಹಿಂದಿನ ದಿನ 25/10/1949ರಂದು ಸಂವಿಧಾನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ನಾವು ನಾಳೆಯಿಂದ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇದೆ. ಸಂವಿಧಾನ ಜಾರಿಗೆ ಬಂದ ನಂತರ ಈ ಅಸಮಾನತೆಯನ್ನು ಹೋಗಲಾಡಿಸಬೇಕು, ಒಂದು ವೇಳೆ ಇದನ್ನು ಮಾಡದಿದ್ದರೆ ಈ ಅಸಮಾನತೆಗೆ ಒಳಗಾಗಿರುವ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದು ಹೇಳಿದ್ದರು. ಇದು ಸಂವಿಧಾನ ಜಾರಿಗೆ ಮೊದಲೇ ಬಾಬಾ ಸಾಹೇಬರು ನೀಡಿದ್ದ ಎಚ್ಚರಿಕೆ ಎಂದು ತಿಳಿಸಿದರು.

ಪದೇ ಪದೇ ಇನ್ನೆಷ್ಟು ವರ್ಷ ಮೀಸಲಾತಿ ಇರಬೇಕು ಎಂದು ಪ್ರಶ್ನಿಸುತ್ತಿದ್ದವರು ಬಿಜೆಪಿಯವರು. ಈಗ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ ಮೇಲೆ ಬಾಯಿ ಮುಚ್ಚಿಕೊಂಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಬಹುದು ಎಂಬುದು ಸಂವಿಧಾನದಲ್ಲಿ ಇಲ್ಲ. ಕೇಂದ್ರ ಸರಕಾರ ತರಾತುರಿಯಲ್ಲಿ ಒಂದಿನ ಲೋಕಸಭೆಯಲ್ಲಿ, ಒಂದಿನ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಮಾಡಿಕೊಂಡು, ಜಾರಿಗೆ ನೀಡಿತು. ಕೇವಲ 48 ಗಂಟೆಯಲ್ಲಿ ಯಾವುದೇ ಸಮೀಕ್ಷೆಯ ವರದಿ ಇಲ್ಲದೆ, ಹೋರಾಟಗಳಿಲ್ಲದೆ ಮೀಸಲಾತಿ ನೀಡಿಬಿಟ್ರು. ಈಗ ಮೀಸಲಾತಿ ಇಲ್ಲದವರು ಯಾರಾದರೂ ಉಳಿದಿದ್ದಾರಾ? ಹೀಗಾದರೆ ಸಾಮಾಜಿಕವಾಗಿ ಸಮಾನತೆ ಹೇಗೆ ಸಾಧ್ಯ? ಶೋಷಿತ ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತಾ? ಎಂದರು.

ಹಿಂದುಳಿದ ಜಾತಿಯವರು ಅಥವಾ ದಲಿತರು ಬಿಜೆಪಿಯಿಂದ ಗೆದ್ದರೆ ಅವರು ಹೇಳಿದಂತೆ ಮಾಡಬೇಕಲ್ವಾ? ಅವರು ಗರ್ಭಗುಡಿಯಲ್ಲಿ ನಿಂತು ತೀರ್ಮಾನ ಮಾಡಿ ಬಂದು ಹೇಳುತ್ತಾರೆ, ಅದನ್ನು ಇವರು ಜಾರಿ ಮಾಡಬೇಕು. ಕರಾವಳಿ ಭಾಗದಲ್ಲಿ ಗಲಾಟೆ, ಕೊಲೆಗಳು ಆಗಬೇಕಾದರೆ ಶೂದ್ರರ ಹುಡುಗರನ್ನು ಕರೆದುಕೊಂಡು ಬಂದು ಮುಂದೆ ಬಿಡುತ್ತಾರೆ. ಆರ್,ಎಸ್,ಎಸ್ ನ ಒಬ್ಬನಾದ್ರೂ ಜೈಲಿಗೆ ಹೋಗಿದ್ದರೆ, ಕೊಲೆ ಆಗಿದ್ದರೆ ತೋರಿಸಿ ನೋಡೋಣ. ಜೈಲಿನಿಂದ ಬಂದವರಿಗೆ ಹೂವಿನ ಹಾರ ಹಾಕುವವರು ಇವರು. ಅವರನ್ನು ಜೈಲಿಗೆ ಕಳಿಸಿದ್ದು ಕೂಡ ಇವರೇ. ಈ ರೀತಿ ಜನರ ದಾರಿ ತಪ್ಪಿಸಿ ಗೊಂದಲ ನಿರ್ಮಾಣ ಮಾಡಿಸುತ್ತಾರೆ. ಇದನ್ನೆಲ್ಲ ಅರ್ಥಮಾಡಿಕೊಳ್ಳದೆ ಹೋದರೆ ಅಂಬೇಡ್ಕರ್ ಅವರು ನೀಡಿದ್ದ ಎಚ್ಚರಿಕೆಯ ಮಾತು ಸತ್ಯವಾಗುತ್ತದೆ ಎಂದರು.

1931ರ ನಂತರ ಜಾತಿ ಗಣತಿ ನಡೆದಿಲ್ಲ, ಇದನ್ನು ನಾವು ಮಾಡಿದ್ದೆವು. ಸ್ವಾತಂತ್ರ್ಯ ನಂತರ ಲಂಬಾಣಿ ಜನ, ಕುರುಬರು, ಕುಂಬಾರರು, ಮಡಿವಾಳರು, ಅಲ್ಪಸಂಖ್ಯಾತರು, ಕ್ಷೌರಿಕರು, ದಲಿತರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಾಗಬೇಕಲ್ವಾ? ಈ ಪರಿಸ್ಥಿತಿ ಗೊತ್ತಾಗದೆ ಹೋದರೆ ಅವರನ್ನು ಮುನ್ನೆಲೆಗೆ ತರಲು ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ? 1931ರ ನಂತರ ಜಾತಿ ಗಣತಿ ಮಾಡಿಲ್ಲ, ಮೀಸಲಾತಿ ವಿಚಾರ ಬಂದಾಗಲೆಲ್ಲಾ ನ್ಯಾಯಾಲಯಗಳು ನಿಮ್ಮ ಬಳಿ ಜಾತಿಗಳ ಜನಸಂಖ್ಯೆಗೆ, ಅವರ ಸ್ಥಿತಿಗತಿಗಳಿಗೆ ಸಂಬಂಧಿಸಿದ ನಂಬಿಕಾರ್ಹ ಮಾಹಿತಿ ಯಾವುದಿದೆ ಎಂದು ಹಲವು ಬಾರಿ ಪ್ರಶ್ನಿಸಿವೆ. ಜನ ತಮ್ಮ ಸಮುದಾಯದ ಜನಸಂಖ್ಯೆಗಿಂತ ಎರಡು ಮೂರು ಪಟ್ಟು ಜಾಸ್ತಿ ಜನಸಂಖ್ಯೆ ಹೇಳುತ್ತಾರೆ. ಹೀಗಾದರೆ ಆರೂವರೆ ಕೋಟಿ ಇರುವ ಕನ್ನಡಿಗರು ಹದಿನಾರುವರೆ ಕೋಟಿ ಆಗಿಬಿಡುತ್ತಾರೆ. ನಾವು ಮನೆ ಮನೆಗೆ ತೆರಳಿ ಮೂರು ವರ್ಷಗಳ ಕಾಲ ಮಾಹಿತಿ ಸಂಗ್ರಹಿಸಿ ಜಾತಿ ಗಣತಿ ಮಾಡಿದ್ದೆವು, ಇಷ್ಟೆಲ್ಲ ಮಾಡಿದ ಮೇಲೆ ಆ ವರದಿಯನ್ನು ತೆಗೆದುಕೊಳ್ಳಬೇಕಾ ಬೇಡ್ವಾ? ಸದಾಶಿವ ಆಯೋಗದ ವರದಿ ಇನ್ನು ಸದನದ ಮುಂದೆ ಬಂದೇ ಇಲ್ಲ, ಬಹಳಷ್ಟು ಜನ ಇದನ್ನು ಓದಿಕೊಂಡಿಲ್ಲ ಎಂದರು.
ಪರಿಶಿಷ್ಟ ಜಾತಿಯವರ ಮೀಸಲಾತಿ ಪ್ರಮಾಣವನ್ನು 15 ರಿಂದ 17% ಗೆ ಏರಿಕೆ ಮಾಡಿ, ಈ 17% ಅನ್ನು ಆಧಾರವಾಗಿಟ್ಟುಕೊಂಡು ವಿವಿಧ ಜಾತಿಗಳಿಗೆ 6%, 4.5%, 1% ಹೀಗೆ ಲೆಕ್ಕಹಾಕಿದ್ದಾರೆ. ಆದರೆ ಈ ಮೀಸಲಾತಿ ಹೆಚ್ಚಳ ಇನ್ನು ಊರ್ಜಿತವೇ ಆಗಿಲ್ಲ. ಲಂಬಾಣಿಗಳಿಗೆ, ಬೋವಿಗಳಿಗೆ 4.5% ಮೀಸಲಾತಿ ಲೆಕ್ಕ ಹಾಕಿದ್ದಾರೆ ಇದಕ್ಕೂ ಮೊದಲು ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕು. ಈ ಬಿಜೆಪಿಯವರು ಜನರ ಹಣೆಗೆ ತುಪ್ಪ ಹಚ್ಚಿದ್ದಾರೆ, ಮೂಗಿಗೆ ಹಚ್ಚಿದ್ದರೆ ವಾಸನೆಯಾದರೂ ಬರುತ್ತಿತ್ತು, ಈಗ ವಾಸನೆಯೂ ಬರುತ್ತಿಲ್ಲ ಎಂದರು.

ನಾವು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದರೆ ಬಿಜೆಪಿಯವರು ಇದನ್ನು ನಂಬಬೇಡಿ, ಅವರಿಂದ 10 ಕೆ.ಜಿ ಕೊಡೋಕಾಗಲ್ಲ ಎನ್ನುತ್ತಾರೆ. ಹಿಂದೆ 7 ಕೆ.ಜಿ ಅಕ್ಕಿ ಕೊಟ್ಟವರಿಗೆ ಈಗ 10 ಕೆ.ಜಿ ಅಕ್ಕಿ ಕೋಡೋಕಾಗಲ್ವಾ? ಇದಕ್ಕೆ ಎರಡು ಮೂರು ಸಾವಿರ ಕೋಟಿ ಹಣ ಹೆಚ್ಚು ಖರ್ಚಾಗಬಹುದು ಅಷ್ಟೆ. ಬೆಲೆಯೇರಿಕೆ ವಿಪರೀತವಾಗಿದೆ, ಗ್ಯಾಸ್ ಬೆಲೆ 2013ರಲ್ಲಿ 414 ರೂ. ಇತ್ತು, ಇಂದು 1,150 ರೂ ಆಗಿದೆ, ಇದಕ್ಕಾಗಿ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುತ್ತೇವೆ ಎಂದಿದ್ದೇವೆ, ಇದನ್ನು ಮಾಡಲು ಆಗಲ್ಲ ಎಂದು ಅವರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ರಾಜ್ಯವು ಒಂದು ವರ್ಷಕ್ಕೆ ಅಸಲು ಮತ್ತು ಬಡ್ಡಿ ರೂಪದಲ್ಲಿ 56,000 ಕೋಟಿ ರೂ. ಕಟ್ಟಬೇಕಾಗಿದೆ. ಸಾಲ ಪಡೆಯುವುದು ಕಡಿಮೆ ಮಾಡಿ, ಅನಗತ್ಯ ಖರ್ಚು ಕಡಿಮೆ ಮಾಡಿ, ತೆರಿಗೆ ಸಂಗ್ರಹವನ್ನು ಸಮರ್ಪಕವಾಗಿ ಮಾಡಿದ್ರೆ ಈ ಎಲ್ಲವನ್ನು ಕೊಡಬಹುದು. ಪ್ರತೀ ವರ್ಷ ಬಜೆಟ್ ಗಾತ್ರ 25 ರಿಂದ 30 ಸಾವಿರ ಕೋಟಿ ಹೆಚ್ಚಾಗುತ್ತಾ ಹೋಗುತ್ತಿದೆ, ಹೀಗಿದ್ದಾಗ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಖಂಡಿತಾ ಜಾರಿಗೆ ಕೊಡಲು ಸಾಧ್ಯವಿದೆ. ಅಪಪ್ರಚಾರ ಮಾಡುವವರ ಮಾತಿಗೆ ಬೆಲೆ ಕೊಡದೆ ನಾವು ಎಚ್ಚರಿಕೆಯಿಂದ ಇರಬೇಕು ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post