ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಎರಡು ರೌಡಿಗಳ ಗುಂಪಿನ ನಡುವೆ ಘರ್ಷಣೆ ನಡೆಯುವ ಮುನ್ನ ಸಿಸಿಬಿ ಪೊಲೀಸರು ಎಚ್ಚೆತ್ತುಕೊಂಡ ಪರಿಣಾಮ ಮಾರಕಾಸ್ತ್ರಗಳ ಸಮೇತ ಹನ್ನೊಂದು ಮಂದಿ ಪಾತಕಿಗಳನ್ನು ಬಂಧಿಸಿ ಜೈಲಿಗಟ್ಟಿದ ಘಟನೆ ನಡೆದಿದೆ.
ನಗರದ ಇಬ್ಬರು ರೌಡಿಗಳ ನಡುವಿನ ಗುಂಪು ಘರ್ಷಣೆಗೆ ಮಂಗಳೂರಿನ ಇಬ್ಬರು ರೌಡಿಗಳಿಗೆ ಸುಪಾರಿ ಕೊಟ್ಟು ಕರೆಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಇಪ್ಪತ್ತು ದಿನಗಳಿಂದ ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕಿದ್ದ 11 ಪಾತಕಿಗಳು ಮಾರತಹಳ್ಳಿ ಸಮೀಪ ಸಾರ್ವಜನಿಕರಿಗೆ ಹೆದರಿಸಿ ಸುಲಿಗೆಗೆ ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರು ಮೂಲದ ಕಿರಣ್ ಗೌಡ, ಉಲ್ಲಾಳ ರೌಡಿ ಶೀಟರ್ ವಿಶ್ವನಾಥ್ ಭಂಡಾರಿ, ಆನೇಕಲ್ ರೌಡಿ ಹರೀಶ್, ಸರ್ಜಾಪುರ ರೌಡಿ ವೆಂಕಟೇಶ್ ಸೇರಿದಂತೆ 11 ಮಂದಿಯನ್ನು ಬಂಧಿಸಿ, 18 ಮಚ್ಚು, ಲಾಂಗು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ವಿವರ:
ಕಾಡುಬಿಸನಹಳ್ಳಿಯ ಸೋಮ ಮತ್ತು ರೋಹಿತ್ ಎನ್ನುವವರ ಗುಂಪಿನ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು. ಸೋಮ ಮತ್ತು ಸೋಮನ ಸಹಚರರನ್ನು ಮುಗಿಸಲು ಸಂಚು ರೂಪಿಸಿರುವ ರೋಹಿತ್ ಮತ್ತು ಅತನ ಸಹಚರರು ಗುಂಪು ಘರ್ಷಣೆಗೆ ತಂತ್ರ ರೂಪಿಸಿದ್ದರು ಎನ್ನಲಾಗಿದೆ.
ಸೋಮ ಮತ್ತು ಆತನ ಸಹಚರರನ್ನು ಹತ್ಯಗೈಯಲು ಮಂಗಳೂರು ಮೂಲದ ಕಿರಣ್ ಗೌಡ ಮತ್ತು ವಿಶ್ವನಾಥ್ ಭಂಡಾರಿಯನ್ನು ಕರೆಸಿಕೊಂಡು ಮಾರತಹಳ್ಳಿ ಸಮೀಪ ಮನೆ ಮಾಡಿಕೊಟ್ಟಿದ್ದರು. ಮಚ್ಚು, ಲಾಂಗು ಹಿಡಿದು ಕಾಡುಬಿಸನಹಳ್ಳಿಯ ಸೋಮನಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ಮಂಗಳೂರು ರೌಡಿಗಳ ಜತೆಗೆ ಸ್ಥಳೀಯ ರೌಡಿ ಶೀಟರ್‌ಗಳನ್ನು ಒಟ್ಟು ಗೂಡಿಸಿದ್ದ ರೋಹಿತ್, ಕರಿಯಮ್ಮನ ಅಗ್ರಹಾರದಲ್ಲಿ ಮನೆ ಮಾಡಿಕೊಟ್ಟಿದ್ದ. ಹತ್ಯೆಗೆ ಸಂಚು ರೂಪಿಸಿ ಗುಂಪು ಘರ್ಷಣೆ ತಯಾರಿಯಲ್ಲಿದ್ದ 11 ಮಂದಿ ಜೈಲು ಸೇರಿದ್ದಾರೆ. ಈ ಸಂಬಂಧ ಮಾರತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೋಲಿಸರ ಕಾರ್ಯವೈಖರಿಯಿಂದ ಬಾರಿ ಅನಾವುತ ಒಂದು ತಪ್ಪಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post