ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ದಕ್ಷ, ಪ್ರಾಮಾಣಿಕ, ಹಗರಣರಹಿತ ಹಾಗೂ ಪಾರದರ್ಶಕ ಆಡಳಿತ ನೀಡಲು ಶಕ್ತಿ ಮೀರಿ ಶ್ರಮಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ Minister Eshwar Khandre ಹೇಳಿದ್ದಾರೆ.
ವಿಕಾಸಸೌಧದಲ್ಲಿಂದು ತಮ್ಮ ಅಧಿಕೃತ ಕಚೇರಿಯ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಲೇಖವಿದೆ. ಅದರಂತೆ ಜನಪರವಾದ, ಜನಸ್ನೇಹಿಯಾಗಿ ಇಲಾಖೆಯ ಕೆಲಸವನ್ನು ದೇವರ ಕೆಲಸ ಎಂಬಂತೆ ನಿಸ್ಪೃಹತೆಯಿಂದ ಮಾಡುವುದಾಗಿ ತಿಳಿಸಿದರು.
ಇಂದು ಅರಣ್ಯ, ಪರಿಸರ ಇಲಾಖೆಯಲ್ಲಿ ಹಲವಾರು ಸವಾಲುಗಳಿವೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಇಲಾಖೆಯಲ್ಲಿ ಕಣ್ಣಿಗೆ ಕಾಣುವಂತಹ ಮಹತ್ವದ ಬದಲಾವಣೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಇಂದು ಭೂಗ್ರಹದ ಮುಂದೆ ದೊಡ್ಡ ಸವಾಲಿದೆ. ಪ್ಲಾಸ್ಟಿಕ್ ಸಮಸ್ಯೆ ತೀವ್ರವಾಗಿದೆ. ಕುಡಿಯುವ ನೀರು, ಪ್ರಾಣವಾಯು ಗಾಳಿಯೂ ಕಲುಷಿತವಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಐದು ಪ್ರಮುಖ ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಈ ವರ್ಷ ಅರಣ್ಯ ಇಲಾಖೆಯ ವತಿಯಿಂದ ಮತ್ತು ಸಾರ್ವಜನಿಕರ ನೆರವಿನಿಂದ 5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಪಕ್ಷದ ವರಿಷ್ಠರಾದ ಸೋನಿಯಾಗಾಂಧೀ, ರಾಹುಲ್ ಗಾಂಧೀ, ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯ ಮಾಡಲು ಶ್ರಮಿಸಲಾಗುವುದು ಎಂದರು.
Also read: ಪಠ್ಯ ಪರಿಷ್ಕರಣೆ ಬಹಳ ಸೂಕ್ಷ್ಮ ವಿಚಾರ, ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕ್ರಮ: ಸಚಿವ ಮಧುಬಂಗಾರಪ್ಪ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ತರುವಾಯ ತುಮಕೂರು, ಚಿತ್ರದುರ್ಗ, ರಾಮನಗರ ಜಿಲ್ಲೆಗೆ ಭೇಟಿ ನೀಡಿ ಅರಣ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದೇನೆ. ರಾಮನಗರ ಜಿಲ್ಲೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟ ಇಬ್ಬರು ಕೂಲಿ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಿ, ಘಟನೆ ನಡೆದ 3 ದಿನಗಳ ಒಳಗಾಗಿ ತಲಾ 15 ಲಕ್ಷ ಪರಿಹಾರದ ಚೆಕ್ ವಿತರಿಸಿದ್ದೇನೆ.
ನೊರೆ ಮತ್ತು ಮಾಲಿನ್ಯದಿಂದ ಕಲುಷಿತವಾಗಿ ಅಪಾಯಕಾರಿ ಹಂತ ತಲುಪಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಗೂ ಖುದ್ದು ಭೇಟಿ ನೀಡಿ, 2024ರೊಳಗೆ ಕೆರೆ ಮಾಲಿನ್ಯ ತಡೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಲಾಖೆಯ ಬಗ್ಗೆ ನಾಡಿನ ಜನತೆ ಹೆಮ್ಮೆ ಪಡುವಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಈಶ್ವರ ಖಂಡ್ರೆ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post