ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಸರ್ಕಾರ ಶರಾವತಿ ಕಣಿವೆಯಲ್ಲಿ 2000 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ #Sharavathi Pumped Storage ವಿದ್ಯುತ್ ಉತ್ಪಾದನೆ ಯೋಜನೆ ಕೈಗೊಳ್ಳಲು ಮುಂದಾಗಿರುವುದು ಅತ್ಯಂತ ಗಂಭೀರ ಹಾಗೂ ಪರಿಸರ ವಿರೋಧಿ ಹೆಜ್ಜೆಯಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೊನ್ನಾವರ ತಾಲೂಕಿನ ಗ್ರಾಮ ಪಂಚಾಯಿತಿಗಳು, ಪರಿಸರವಾದಿಗಳು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರೂ, ಸರ್ಕಾರ ಜನರ ಧ್ವನಿಯನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ಶಾಸಕ ಡಿ.ಎಸ್. ಅರುಣ್ #D S Arun ಸದನಕ್ಕೆ ತಿಳಿಸಿದರು.
ಅಂದಾಜು 10,000 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಶರಾವತಿ ಭಾಗದಲ್ಲಿ 133 ಎಕರೆ ಹಸಿರು ಭೂಮಿ ಬಲಿ ಪಡೆಯಬೇಕಾಗುತ್ತಿದ್ದು, 16,000ಕ್ಕೂ ಹೆಚ್ಚು ಜೀವಂತ ಮರಗಳು ನಾಶವಾಗಲಿವೆ. ಈಗಾಗಲೇ ಅನೇಕ ಜಲವಿದ್ಯುತ್ ಯೋಜನೆಗಳಿಂದ ತೀವ್ರ ಹಾನಿಗೊಳಗಾದ ಶರಾವತಿ ಕಣಿವೆಯ ಪರಿಸರ ವ್ಯವಸ್ಥೆ ಮತ್ತೊಮ್ಮೆ ದುರ್ಬಲಗೊಳ್ಳುವುದು ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.
ಪಶ್ಚಿಮಘಟ್ಟವು #Western Ghats ಕರ್ನಾಟಕದ ಜೀವನಾಡಿ. ಈ ಹಸಿರು ಪ್ರದೇಶವು ಜನರ ಬದುಕು, ಸಂಸ್ಕೃತಿ ಮತ್ತು ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ಇಂತಹ ಯೋಜನೆಗಳು ರಾಜ್ಯದ ಪರಿಸರ ಸಮತೋಲನಕ್ಕೂ, ಜನಜೀವನಕ್ಕೂ ಹಾಗೂ ಈಗಾಗಲೇ ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಗಲೀಕಗಳ ನೆಲೆಯ ಸಂಪೂರ್ಣ ನಾಶವಾಗುವ ಅಪಾಯ ಎದುರಾಗಿದೆ,ಸರ್ಕಾರವು ಈ ಯೋಜನೆಯನ್ನು ತಕ್ಷಣವೇ ಕೈ ಬಿಡಬೇಕೆಂಬ ಅಭಿಪ್ರಾಯವನ್ನು ಶಾಸಕರು ತಿಳಿಸಿದರು.
ಕೇಂದ್ರ ಅರಣ್ಯ ಸಚಿವಾಲಯವು ಯೋಜನೆಯ ಕುರಿತಂತೆ ವಿವರ ಕೇಳಿರುವುದು ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಸಾವಿರಾರು ಮರಗಳ ನಾಶವನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕು ಎಂದು ನೀಡಿರುವ ಸೂಚನೆ ಗಂಭೀರ ಎಚ್ಚರಿಕೆಯಾಗಿದೆ. ಆದರೆ ರಾಜ್ಯ ಸರ್ಕಾರ ಯೋಜನೆಯ ಪ್ರಮುಖ ಅಂಶಗಳನ್ನು ಮರೆಮಾಚಿರುವುದು ಜನರ ನಂಬಿಕೆಗೆ ದ್ರೋಹದಂತಾಗಿದೆ ಎಂದು ಶಾಸಕರು ಆರೋಪಿಸಿ, ಪರಿಸರ ಸ್ನೇಹಿ ಪರ್ಯಾಯ ಕ್ರಮಗಳ ಕೊರತೆ ಇಲ್ಲ. ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವ ಭೂಗತ ಪವರ್ ಸ್ಟೋರೇಜ್ ಯೋಜನೆಗಳು ಹಾಗೂ ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನಗಳು ಇದಕ್ಕೆ ಉತ್ತಮ ಉದಾಹರಣೆ, ಕರ್ನಾಟಕದಲ್ಲೂ ಇದೇ ಮಾದರಿಯ ಆಧುನಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಕಾಲ ಬಂದಿದೆ. ಆದ್ದರಿಂದ, ಪರಿಸರವನ್ನು ನಾಶಮಾಡುವ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಕ್ಷಣವೇ ಹಿಂಪಡೆಯುವಂತೆ ಮತ್ತು ಪರಿಸರ ಸ್ನೇಹಿ ಪರ್ಯಾಯ ಮಾರ್ಗಗಳನ್ನು ಜಾರಿಗೊಳಿಸುವಂತೆ ಶೂನ್ಯ ವೇಳೆಯಲ್ಲಿ ಇಂಧನ ಸಚಿವರಿಗೆ ಶಾಸಕ ಡಿ.ಎಸ್.ಅರುಣ್ ರವರು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post