ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಗೌರವಗಳು ಇಲ್ಲಿನ ರೈತರಿಗೆ ಸಲ್ಲಬೇಕು. ಯಾವುದೇ ಅಡ್ಡಿ ಆತಂಕಗಳಿಲ್ಲದೆಯೇ ರೈತರು ಜಾಗ ಬಿಟ್ಟು ಕೊಟ್ಟ ಪರಿಣಾಮ ಶೀಘ್ರಗತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಹೇಳಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ Kempegowda International Airport ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ Shivamogga Airport ಮೊದಲ ವಿಮಾನ ಸೇವೆ ಇಂದಿನಿಂದ ಆರಂಭಗೊಂಡಿದ್ದು, ವಿಮಾನ ಹತ್ತುವ ಮೊದಲು ಮಾಧ್ಯಮದೊಂದಿಗೆ ಮಾತನಾಡಿ, ನಮಗೆ ಸಹಕಾರ ಕೊಟ್ಟ ಎಲ್ಲಾ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಾವು ವಿಮಾನದಲ್ಲಿ ಇಬ್ಬರು ರೈತರನ್ನು ಕರೆದುಕೊಂಡು ಹೋಗುತ್ತಿದ್ದೇವೆ. ರೈತರ ಆಶೀರ್ವಾದದಿಂದಲೇ ಈ ಕೆಲಸ ಆಗಿದೆ ಎಂದು ಹೇಳಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಶಿವಮೊಗ್ಗ ಅತೀ ದೊಡ್ಡ ವಿಮಾನ ನಿಲ್ದಾಣ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇಲ್ಲಿ ನೈಟ್ ಲ್ಯಾಡಿಂಗ್ ವ್ಯವಸ್ಥೆಯೂ ಇದೆ. ಸಂಸದ ರಾಘವೇಂದ್ರ ಅವರ ವಿಶೇಷ ಪರಿಶ್ರಮದಿಂದ ಈ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಅದೆಷ್ಟೋ ಜನರಿಗೆ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ವಿಮಾನಗಳು ಓಡಾಟ ಮಾಡುವಂತಾಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
Also read: ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಸ್ಥಿರ: ಡಾ. ಗೋವಿಂದಯ್ಯ ಯತೀಶ್
ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಶಿವಮೊಗ್ಗಕ್ಕೆ ಮೊದಲ ವಿಮಾನ ಸೇವೆ ಪ್ರಾರಂಭವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು ಶಿವಮೊಗ್ಗ ಆಗಿರುವುದರಿಂದ ಕುವೆಂಪು ವಿಮಾನ ನಿಲ್ದಾಣವೆಂದೇ ಹೆಸರಿಟ್ಟಿದ್ದೇವೆ. ಒಟ್ಟಾರೆಯಾಗಿ ಇದೊಂದು ಐತಿಹಾಸಿಕ ಕ್ಷಣ. ವಿಮಾನ ಆರಂಭದಿಂದ ಮಧ್ಯ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು
ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, “ರಾಜ್ಯದ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಶಿವಮೊಗ್ಗ ಸೇರಿಕೊಂಡಿರುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರ. ವಿಶೇಷವಾಗಿ ಕರ್ನಾಟಕದಲ್ಲಿ ಶಿವಮೊಗ್ಗ ಅನೇಕ ವಿಚಾರವಾಗಿ ಪ್ರಸಿದ್ಧಿಯಾಗಿದ್ದರೂ ಕೂಡ ಏರ್ಪೋರ್ಟ್ ಇಲ್ಲ ಎನ್ನುವ ಕೊರತೆ ಇತ್ತು. ಮಾಜಿ ಸಿಎಂ ಯಡಿಯೂರಪ್ಪ ಹಾಗೆಯೇ ಈಗಿನ ಸಂಸದ ರಾಘವೇಂದ್ರ ಅವರ ಪೂರ್ಣ ಪರಿಶ್ರಮದಿಂದ ಇವತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದೆ. ಅವರಿಬ್ಬರಿಗೂ ನಾನು ಅಭಿನಂದನೆ ತಿಳಿಸುತ್ತೇನೆ” ಎಂದರು.
9.50ಕ್ಕೆ ಸರಿಯಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ತೆರಳಿದ ಮೊದಲ ಇಂಡಿಗೋ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಎಂ.ಬಿ. ಪಾಟೀಲ್, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರ, ವಿಜಯೇಂದ್ರ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಇನ್ನೂ ಹಲವರು ರಾಜಕೀಯ ಗಣ್ಯರು ಪ್ರಯಾಣಿಸಿ ಸಂತಸಪಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post