ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಹೋಟೆಲ್, ರೆಸಾರ್ಟ್, ವಸತಿಗೃಹಗಳ ಕೊರೋನಾ ಕಾಲದ ವಿದ್ಯುತ್, ನೀರಿನ ಶುಲ್ಕವನ್ನು ಮನ್ನಾ ಮಾಡುವುದು ಸೇರಿದಂತೆ ಈ ಉದ್ಯಮ ನೆಲಕಚ್ಚದಂತೆ ಅಗತ್ಯ ನೆರವನ್ನು ನೀಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು ಮುಖ್ಯಾಂಶಗಳು ಹೀಗಿದೆ:
ಕರ್ನಾಟಕ ಸರ್ಕಾರಕ್ಕೆ ಹೋಟೆಲ್ ಕಾರ್ಮಿಕರು, ದೀಪಾಲಂಕಾರದ ಕೆಲಸಗಾರರು, ಫೋಟೋಗ್ರಾಫರ್ ಗಳು ಸೇರಿ ಇನ್ನಿತರೆ ನಾನಾ ಜನ ಸಮುದಾಯಗಳು ಪಡುತ್ತಿರುವ ಕಷ್ಟ ಕಣ್ಣಿಗೆ ಬಿದ್ದಿಲ್ಲ. ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಹೋಟೆಲ್‍ಗಳು ಬಂದ್ ಆಗಿ ಮಾರಾಟಕ್ಕಿವೆ. ಹೋಟೆಲ್, ಕ್ಯಾಂಟೀನ್ ಕಟ್ಟಡಗಳ ಬಾಡಿಗೆ ಕಟ್ಟಲಾಗದೆ ಮಾಲೀಕರು ಪರಿತಪಿಸುತ್ತಿದ್ದಾರೆ.
ಬ್ಯಾಂಕ್ ಸಾಲದ ಬಡ್ಡಿ ಬೆಳೆಯುತ್ತಲೇ ಇರುವ ಕಾರಣ ಸಣ್ಣ ಮತ್ತು ಮಧ್ಯಮ ಹೋಟೆಲ್‍ಗಳ ಮಾತ್ರವಲ್ಲ ದೊಡ್ಡ ಹೋಟೆಲ್‍ಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಹೋಟೆಲ್ ಕಾರ್ಮಿಕರು ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಬೆಂಗಳೂರು ನಗರ ಮತ್ತು ಅಕ್ಕ ಪಕ್ಕದ ನಾಲ್ಕೈದು ಜಿಲ್ಲೆಗಳಲ್ಲೇ 20 ಸಾವಿರಕ್ಕೂ ಅಧಿಕ ಮಂದಿ ಹೋಟೆಲ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇವರ ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟದಲ್ಲಿದ್ದಾರೆ.
ಈ ಕಾರ್ಮಿಕರ ಮಕ್ಕಳು ಶಿಕ್ಷಣ ತೊರೆಯಬೇಕಾದ ಸ್ಥಿತಿ ಬಂದೊದಗಿದೆ. ಇಡೀ ಸೇವಾ ವಲಯವೆ ಸ್ಥಗಿತಗೊಂಡಿರುವುದರಿಂದ ಪ್ರವಾಸೋದ್ಯಮವನ್ನೆ ನೆಚ್ಚಿಕೊಂಡಿದ್ದ ವಸತಿ ಗೃಹಗಳ ಮಾಲೀಕರು ಮತ್ತು ಕೆಲಸಗಾರರೂ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ.
ಶುಭ ಕಾರ್ಯಗಳು ನಡೆಯದಿರುವುದರಿಂದ, ಧಾರ್ಮಿಕ ಕಾರ್ಯಗಳು, ಹಬ್ಬಗಳ ಆಚರಣೆಗೂ ಅವಕಾಶ ಇಲ್ಲವಾಗಿದ್ದರಿಂದ ಫೋಟೋಗ್ರಾಫರ್ ಗಳು, ಡೆಕೊರೇಟರ್ ಗಳು, ದೀಪದ ಅಲಂಕಾರ ಮಾಡುವ ಕೆಲಸಗಾರರು ಸೇರಿ ಪ್ರತಿಯೊಂದೂ ದುಡಿಯುವ ವರ್ಗದ ಸಹಸ್ರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.
ಇವರೆಲ್ಲರ ಸಂಕಷ್ಟ ಮತ್ತು ನೋವುಗಳು ಸರ್ಕಾರಕ್ಕೆ ಕಾಣಬೇಕಿತ್ತು. ಸರ್ಕಾರ ಕುರುಡಾಗಿರುವುದರಿಂದ ಈ ಶ್ರಮಿಕ ವರ್ಗಗಳೆ ಸ್ವತಃ ಸರ್ಕಾರವನ್ನು ಇನ್ನಿಲ್ಲದಂತೆ ಒತ್ತಾಯಿಸುತ್ತಿದ್ದರೂ ಅವರಿಗೆ ಸೂಕ್ತವಾದ ನೆರವು ಸಿಕ್ಕಿಲ್ಲ.
ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್‍ನಲ್ಲಿ ಅರ್ಧದಷ್ಟು ಕೂಡ ತಲುಪಬೇಕಾದವರಿಗೆ ತಲುಪಲಿಲ್ಲ. ಕಾರ್ಮಿಕ ನಿಧಿ ಹೊರತುಪಡಿಸಿ ಕೇವಲ 800-900 ಕೋಟಿಯಷ್ಟು ಹಣ ನೆಪಮಾತ್ರಕ್ಕೆ ಹಂಚಿಕೆಯಾಗಿದೆ.
ಎರಡನೇ ಅಲೆ ಸಂದರ್ಭದಲ್ಲೂ ಸರ್ಕಾರ ಘೋಷಿಸಿರುವ 2 ಸಾವಿರ ಕೋಟಿ ರೂ.ಗಳ ಪ್ಯಾಕೇಜು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದು ಮತ್ತೊಮ್ಮೆ ಹೇಳಬೇಕಾಗಿದೆ. ಈ 2 ಸಾವಿರ ಕೋಟಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ ಅವರದೆ ಹಣದ ಪ್ಯಾಕೇಜು ಬಿಟ್ಟರೆ ಉಳಿಯುವುದು ಕೇವಲ 1500 ಕೋಟಿ ರೂ.ಗಳು ಮಾತ್ರ. ಅತಿ ಕಡಿಮೆ ಪ್ಯಾಕೇಜು ಘೋಷಿಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲಿಗೆ ನಿಂತಿದೆ ಎಂಬ ಆರೋಪದಿಂದ ಹೊರಬರಬೇಕಾದರೆ ರಾಜ್ಯ ಸರ್ಕಾರ ಈಗಲಾದರೂ ಉತ್ತಮ ಪ್ಯಾಕೇಜನ್ನು ಘೋಷಿಸಿ ಅಕ್ಕ ಪಕ್ಕದ ರಾಜ್ಯಗಳ ಮುಂದೆ ಮರ್ಯಾದೆ ಉಳಿಸಿಕೊಳ್ಳಬೇಕಿದೆ.
ಆದ್ದರಿಂದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ತಲಾ 10000 ರೂ.ಗಳನ್ನು ಘೋಷಿಸಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತಿದ್ದೇನೆ. ಜೊತೆಗೆ ಈ ಕೆಳಕಂಡ ವಲಯಗಳ ಜನರೂ ಸಹ ಉಳಿದವರಂತೆ ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಹೋಟೆಲ್, ವಸತಿ ಗೃಹ, ಫೋಟೋಗ್ರಾಫರ್ ಗಳು, ಅಲಂಕಾರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ತಕ್ಷಣ ಸೂಕ್ತ ಪ್ಯಾಕೇಜ್ ಘೋಷಣೆ ಮಾಡಬೇಕು.
ಹೋಟೆಲ್, ಕ್ಯಾಂಟೀನ್ ಮಾಲೀಕರ ಬ್ಯಾಂಕ್ ಸಾಲ ವಸೂಲಾತಿಯನ್ನು ಮುಂದೂಡಬೇಕು. ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಜೊತೆಗೆ ಎಲ್ಲಾ ಉತ್ಪಾದಕ ಮತ್ತು ಸೇವಾ ವಲಯಗಳ ಜನರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post