ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರಗಳನ್ನು ಮಿತಿಮೀರಿ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿಂದು ನಿಯಮ 69 ರಡಿಯಲ್ಲಿ ಮಾತನಾಡಿದ ಅವರು, ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ ಕೇಂದ್ರ ಸರ್ಕಾರ ಜನದ್ರೋಹ ಮಾಡಿದೆ ಎಂದು ದೂರಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿದಿದ್ದರೂ ದುಬಾರಿ ಸುಂಕ ವಿಧಿಸುವ ಮೂಲಕ ಪೆಟ್ರೋಲ್,ಡೀಸೆಲ್ ದರಗಳನ್ನು ಮಿತಿ ಮೀರಿ ಹೆಚ್ಚಿಸಲಾಗಿದೆ ಎಂದರು.
ಕಚ್ಚಾ ಬ್ಯಾರಲ್ ತೈಲಕ್ಕೆ ನೂರಾ ಐದು ಡಾಲರ್ ಬೆಲೆ ಇದ್ದಾಗ ಲೀಟರ್ ನೀರಿನಲ್ಲಿ ಪೆಟ್ರೋಲ್ ಬೆಲೆ ಎಪ್ಪತ್ತೆಂಟು ರೂಪಾಯಿಗಳಷ್ಟಿತ್ತು.
ಆದರೆ ಅರವತ್ತೈದು ಡಾಲರ್ ಬೆಲೆ ಇದ್ದಾಗ ತೊಂಭತ್ಮೂರು ರೂಪಾಯಿಗಳಾಗಿವೆ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಮೇಲೆ ಒಂಭತ್ತು ರೂಪಾಯಿ ಅಬಕಾರಿ ಸುಂಕ ವಿಧಿಸಲಾಗಿತ್ತು.ಆದರೆ ಈಗ ಅದು ಮೂವತ್ತೆರಡು ರೂಪಾಯಿಗಳಿಗೇರಿದೆ. ಇದೇ ರೀತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಯುಪಿಎ ಸರ್ಕಾರದ ಅವಧಿಯಲ್ಲಿ ಮೂರು ರೂಪಾಯಿಗಳಷ್ಟಿತ್ತು.ಆದರೆ ಈಗ ಮೂವತ್ತೊಂದು ರೂಪಾಯಿಗಳಿಗೇರಿದೆ ಎಂದರು.
ಈ ಅಬಕಾರಿ ಸುಂಕವೊಂದರಿಂದಲೇ ರಾಜ್ಯದಲ್ಲಿ ನಲವತ್ತೆರಡು ಸಾವಿರ ಕೋಟಿ ರೂ ಸಂಗ್ರಹಿಸಲಾಗಿದ್ದು ಇದರಲ್ಲಿ ರಾಜ್ಯದ ಸುಂಕ ಹದಿನಾರು ಸಾವಿರ ಕೋಟಿ ರೂಪಾಯಿ.ಕೇಂದ್ರದ ಅಬಕಾರಿ ಸುಂಕದ ಪ್ರಮಾಣ 25,000 ಕೋಟಿ ರೂ. ಎಂದು ವಿವರಿಸಿದರು.
ಒಟ್ಟಿನಲ್ಲಿ ಕಳೆದೊಂದು ವರ್ಷದಲ್ಲಿ ವಿವಿಧ ತೆರಿಗೆಗಳ ಮೂಲಕ ರಾಜ್ಯದಿಂದ ಕೇಂದ್ರ ಸರ್ಕಾರ 1.18 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ.ಪ್ರತಿಯಾಗಿ ಸಾವಿರ ಕೋಟಿ ರೂಪಾಯಿಗಳನ್ನೂ ಕೊಟ್ಟಿಲ್ಲ ಎಂದರು.
ಹೀಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಹೀಗಾಗಿ ಎಲ್ಲೇ ಹೋದರೂ ನಿರಾಶೆಯ ವಾತಾವರಣ ಕಾಣುತ್ತಿದೆ.ಕೊಳ್ಳುವ ಶಕ್ತಿಯಿಲ್ಲದ ಜಾರಣ ಜನ ಅಂಗಡಿ, ಮಾಲ್ ಗಳಿಗೆ ಹೋಗುತ್ತಿಲ್ಲ ಎಂದರು.
ಕೊಳ್ಳುವ ಶಕ್ತಿ ಇದ್ದರೆ ತಾನೇ ಜನ ಮಾರುಕಟ್ಟೆಗೆ ಹೋಗುವುದು ಎಂದವರು ಪ್ರಶ್ನಿಸಿದರು. ಸ್ವತ: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನಾವು ಹೇಳಿದರೆ ನೀವು ಬಿಜೆಪಿಯವರು ವಿರೋಧಿಸುತ್ತೀರಿ. ಆದರೆ ನಿರ್ಮಲಾ ಸೀತಾರಾಮನ್ ಹೇಳಿದ್ದಕ್ಕೆ ಏನು ಉತ್ತರ ನೀಡುತ್ತೀರಿ ಎಂದು ಕೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post