ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಪರೋಕ್ಷ ಜ್ಞಾನಿಗಳು ರಚಿಸಿರುವ ಕೃತಿಗಳನ್ನು ಹಾಡುವ ಮೂಲಕ ನಮ್ಮ ಅಂತರಂಗದ ಸಾಧನೆಯನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ, ಅಂಕಣಕಾರ , ವಿಜಯವಾಣಿ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ ಹೇಳಿದರು.
ನಗರದ ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯದ 25ನೇ ವರ್ಷದ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಮತ್ತು ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಸರಣಿಯ 3 ನೇ ದಿನವಾದ ಭಾನುವಾರ ವಿವಿಧ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಂಗೀತವು ಕೇವಲ ಮನೋರಂಜನೆಗೆ ಮಾತ್ರ ಇರುವ ಕಲೆ ಅಲ್ಲ. ಇದರಿಂದ ಆತ್ಮೋನ್ನತಿ ಸಾಧ್ಯವಿದೆ. ಪರಂಪರಾನುಗತವಾಗಿ ಹಾಡಿಕೊಂಡು ಬಂದಿರುವ ದಾಸರ ಕೃತಿಗಳಲ್ಲಿ ವಿಶೇಷವಾದ ಶಕ್ತಿ ಇದೆ. ಬದುಕಿನ ಸಾರವಿದೆ. ಅಧ್ಯಾತ್ಮದ ಸೆಲೆ ಇದೆ. ಹೊಸ ಪೀಳಿಗೆಗೆ ಈ ಕೃತಿಗಳು ಪರಿಚಯವಾಗಬೇಕು ಎಂದು ಅವರು ಆಶಿಸಿದರು. ಸಂಗೀತ ಕಲಿಕೆಗೆ ಯಾವುದೇ ವಯಸ್ಸಿನ ಅಂತರ ಇಲ್ಲ . ಯಾರು, ಯಾವಾಗಬೇಕಾದರೂ ಕಲಿಕೆ ಆರಂಭಿಸಬಹುದು. ಕಲೆಯನ್ನು ಆರಾಧಿಸಲು, ಸಾಧನೆಗೆ ಪ್ರೇರಣೆಯನ್ನಾಗಿಸಿಕೊಳ್ಳಲು ಸಂಕಲ್ಪ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಸಾಧನೆ ಮಾಡಿದಷ್ಟೂ ಅನಂತ: ಶ್ರೀ ಅನುಗ್ರಹ ವಿದ್ಯಾಲಯದ ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಯೋಲಿನ್ ವಿದ್ವಾಂಸ ಮೈಸೂರು ಸಂಜೀವ ಕುಮಾರ್, ಸಾಧನೆ ಮಾಡಿದಷ್ಟೂ ಕಲೆ ಅನಂತವಾಗಿದೆ ಎಂದರು. ವಿದ್ವಾನ್ ಶ್ರೀಕಂಠ ಭಟ್ಟರು ಅಭಿಮಾನ ಮತ್ತು ವಾತ್ಸಲ್ಯದಿಂದ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಉತ್ತಮ ಗುರು ದೊರೆತಾಗ ಕಲೆಯನ್ನು ನಮ್ಮದನ್ನಾಗಿಸಿಕೊಳ್ಳಲು ನಿಷ್ಠೆಯಿಂದ ಅಭ್ಯಾಸ ಮಾಡಬೇಕು ಎಂದರು.
ಭರತನಾಟ್ಯ ವಿದುಷಿ ರಂಜನಿ ಜಯಸಿಂಹ ಮಾತನಾಡಿ, ನೃತ್ಯಕ್ಕೆ ಸಂಗೀತವೇ ಮೂಲ ಆಧಾರ. ಸಂಗೀತವನ್ನು ಶ್ರದ್ಧೆಯಿಂದ ಕಲಿಯಲು ವಿದ್ಯಾರ್ಥಿಗಳು ಮುಂದಾಗಬೇಕು. ನೃತ್ಯಾಭ್ಯಾಸಿಗಳಿಗೂ ಸಂಗೀತ ಅನಿವಾರ್ಯವಾಗಿದೆ ಎಂದರು. ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ನೇತೃತ್ವದಲ್ಲಿ ಹಿರಿಯ ಮತ್ತು ಕಿರಿಯ ಗಾಯಕರು ಏಕಕಂಠದಲ್ಲಿ ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳನ್ನು ಭಕ್ತಿ- ಭಾವಪೂರ್ಣವಾಗಿ ಹಾಡಿದರು. ವಸುಮತಿ ಭಟ್, ಸುಬ್ಬುಕೃಷ್ಣ, ಆರ್ಯ, ಬಿ.ಆರ್.ವಿ. ಪ್ರಸಾದ್ ಹಾಜರಿದ್ದರು.
ಕೃಷ್ಣ ದೇವರಿಗೆ ಸಂಕೀರ್ತನೆ ಸೇವೆ : ಬೆಳಗ್ಗೆ 7:45 ಕ್ಕೆ ಪುತ್ತಿಗೆ ಮಠದ ಶ್ರೀ ಕೃಷ್ಣ ದೇವರಿಗೆ ಸಂಕೀರ್ತನೆ ಸೇವೆ ನೆರವೇರಿತು. ನಂತರ ವಿದ್ಯಾಲಯದ ಹಿರಿಯ, ಕಿರಿಯ ವಿದ್ಯಾರ್ಥಿಗಳಿಂದ ದಾಸರ ಪದಗಳ ಗಾಯನ ಸುಶ್ರಾವ್ಯವಾಗಿ ಮೂಡಿಬಂತು.
ಸಮಾರೋಪ: ಸಂಜೆ 5:30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರ ನಾಮಗಳ ಗೋಷ್ಠಿ, ನಂತರ ದೇವರ ನಾಮ ಉಚಿತ ಕಲಿಕಾ ಶಿಬಿರದ ಸಮಾರೋಪ ಸಂಪನ್ನಗೊಂಡಿತು. ಹಿರಿಯ ವಿದ್ವಾಂಸ ಮತ್ತು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ. ಹರಿದಾಸ ಭಟ್ಟರು ದೇವರ ನಾಮಗಳಿಗೆ ವಿಶೇಷ ವ್ಯಾಖ್ಯಾನ ನೀಡಿದರು. ಇದೇ ಸಂದರ್ಭ ವೀಣಾ ವಿದುಷಿ ಮತ್ತು ಸಂಗೀತ ಪೋಷಕರಾದ ರೇವತಿ ಕಾಮತ್ ಅವರಿಗೆ ಗೌರವಿಸಲಾಯಿತು.
ಭಾನುವಾರ ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಗೋಷ್ಠಿ ಗಾಯನ ನೆರವೇರಿತು. ವಿದ್ವಾನ್ ಶ್ರೀಕಂಠ ಭಟ್ ನೇತೃತ್ವ ವಹಿಸಿದ್ದರು.
ಅನುಗ್ರಹ ಸಂಗೀತ ಮಹಾವಿದ್ಯಾಲಯ ನಗರದ ಪುತ್ತಿಗೆ ಮಠದಲ್ಲಿ ಹಮ್ಮಿಕೊಂಡಿದ್ದ 25ನೇ ವರ್ಷದ ಶ್ರೀ ಪುರಂದರ ದಾಸರ ಮತ್ತು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಭರತನಾಟ್ಯ ವಿದುಷಿ ರಂಜನಿ ಜಯಸಿಂಹ ಮತ್ತು ಪಿಟೀಲು ವಿದ್ವಾಂಸ ಮೈಸೂರು ಸಂಜೀವ ಕುಮಾರ್ ಅವರಿಗೆ ಸನ್ಮಾನಿಸಲಾಯಿತು. ವಿದ್ವಾನ್ ಶ್ರೀಕಂಠ ಭಟ್, ವಸುಮತಿ ಭಟ್, ಹಿರಿಯ ಪತ್ರಕರ್ತ ರಾಘವೇಂದ್ರ ಗಣಪತಿ, ಸುಬ್ಬುಕೃಷ್ಣ, ಆರ್ಯ, ಬಿ.ಆರ್.ವಿ. ಪ್ರಸಾದ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post