ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಯೋಧ್ಯೆ ಮನುಕುಲದ ರಾಜಧಾನಿ. ಮನುಕುಲಕ್ಕೆ ನಾಗರಿಕತೆಯ ಸಂಸ್ಕೃತಿಯನ್ನು ತನ್ನ ಆದರ್ಶ ಜೀವನದ ಮೂಲಕ ತೋರಿಸಿ ಕೊಟ್ಟವನೇ ಶ್ರೀರಾಮ ಎಂದು ಉಡುಪಿ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಅಯೋಧ್ಯೆ ಉತ್ಸವದ ಅಂಗವಾಗಿ ಭಾಗವತ ಆಶ್ರಮದಲ್ಲಿ ಸೋಮವಾರ ಶ್ರೀ ಮಠ ಹಮ್ಮಿಕೊಂಡಿದ್ದ ಪ್ರವಚನ ಸರಣಿ, ಭಜನೆ, ಪಲ್ಲಕ್ಕಿ ಉತ್ಸವ ಮತ್ತು ರಂಗ ದೀಪೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮರ್ಯಾದ ಪುರುಷೋತ್ತಮ ಶ್ರೀ ರಾಮಚಂದ್ರ 496 ವರ್ಷದ ನಂತರ ಅಯೋಧ್ಯೆಯಲ್ಲಿ ವಿರಾಜಮಾನನಾಗಿದ್ದಾನೆ ಎಂದರೆ ಇಂದು ಮಹಾ ಸುದಿನ. ವಿಶ್ವದ ಇತಿಹಾಸ ದಲ್ಲಿ ದಾಖಲಾಗುವ ದಿನ. ಈ ದಿನ “ರಾಷ್ಟ್ರೀಯ ಅಸ್ಮಿತಾ ದಿನ” ವಾಗಿ ಪ್ರತಿ ವರುಷವೂ ಆಚರಣೆ ಆಗಬೇಕು ಎಂದು ಶ್ರೀ ಗಳು ಆಶಿಸಿದರು.
ರಾಮನ ವೈಭೋಗವನ್ನು ಎಲ್ಲರೂ ಅಯೋಧ್ಯೆಗೆ ಪ್ರತ್ಯಕ್ಷವಾಗಿ ನೋಡಲು ಆಗಿಲ್ಲ. ಆದರೂ ಪರೋಕ್ಷವಾಗಿ ವಿವಿಧ ವಾಹಿನಿಯಲ್ಲಿ ಕಂಡು ಸಂಭ್ರಮಿಸಿದ್ದೇವೆ. ನಮ್ಮ ನಮ್ಮ ಮನೆ, ಮಂದಿರ, ಗುಡಿ, ಮಠದಲ್ಲಿ ಉತ್ಸವ ನಡೆಸಿ ರಾಮನಿಗೆ ಭಕ್ತಿ ಸಮರ್ಪಣೆ ಮಾಡಿದ್ದೇವೆ. ಇದು ಮಹೋನ್ನತ ಭಾಗ್ಯ ಎಂದರು.
ರಾಮ ಜನುಮ ಭೂಮಿ ಹೋರಾಟದ ಇತಿಹಾಸದಲ್ಲಿ ಒಟ್ಟು 77 ಯುದ್ಧಗಳು, ಕೋಟ್ಯಂತರ ಜನರ ಹೋರಾಟ, 3 ಲಕ್ಷಕ್ಕೂ ಹೆಚ್ಚು ಜನರ ಬಲಿದಾನದ ನಂತರ ರಾಮ ಇದೀಗ ಪ್ರತಿಷ್ಠಾಪನೆ ಆಗುತ್ತಿದ್ದಾನೆ. ರಾಮ ಮಂದಿರ ರಾಷ್ಟ್ರ ಮಂದಿರ ಆಗುವ ಸಮಯದಲ್ಲಿ ನಾವೆಲ್ಲರೂ ಈ ದೇಶದಲ್ಲಿ ಜನುಮ ಪಡೆದಿರುವುದೇ ದೊಡ್ಡ ಧನ್ಯತೆ ಎಂದರು.
ನಾವು 82ರಲ್ಲಿ ಕರ ಸೇವೆಗೆ ಅಯೋಧ್ಯೆಗೆ ಹೋಗಿದ್ದೆವು. ಆಗ ಶಾಸಕರಾಗಿದ್ದ ವಿ.ಎಸ್. ಆಚಾರ್ಯ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನೇತೃತ್ವ ವಹಿಸಿದ್ದರು ಎಂದು ಶ್ರೀ ಗಳು ಸ್ಮರಿಸಿದರು.
ಸಂಜೆ ಪಂಡಿತ ಮಳಗಿ ಆನಂದ ತೀರ್ಥಾಚಾರ್ಯರಿಂದ ಪ್ರವಚನ, ದಾಸರ ಕೃತಿ ಗಾಯನ, ಶ್ರೀ ವಿದ್ಯೇಶ ವಿಠಲಾಂಕಿತ ಕೃತಿ ಸಾಮೂಹಿಕ ಗಾಯನ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ, ಪ್ರಸಾದ, ಮಂತ್ರಾಕ್ಷತೆ ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















