ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೃತಜ್ಞತೆ ಮನುಷ್ಯನಿಗೆ ಇರಬೇಕಾದ ಬಹುಮುಖ್ಯ ಗುಣವಾಗಿದ್ದು, ನಮ್ಮ ಸಾಧನೆಗೆ ಬೆಂಬಲವಾಗಿ ಮತ್ತು ಮಾರ್ಗದರ್ಶಕರಾಗಿ ಇದ್ದವರಿಗೆ ಹಾಗೂ ಸಮಾಜಕ್ಕೆ ನಾವು ಕೃತಜ್ಞರಾಗಿರಬೇಕು ಎಂದು ಕಾಕಲ್ ಕೈರುಚಿ ಹೋಟಲ್ ಉದ್ಯಮ ಸಮೂಹದ ಮುಖ್ಯಸ್ಥ ಸತೀಶ್ ಕಾಕಲ್ ಹೇಳಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯ Havyaka Masabha ‘ಹವ್ಯಕ ಭವನ’ದಲ್ಲಿ ನಡೆದ “ವಿಜಯೀ ಭವ” ಕಾರ್ಯಕ್ರಮದಲ್ಲಿ ಸ್ಪೂರ್ತಿಯ ಮಾತುಗಳನ್ನಾಡಿದ ಅವರು, ಕಾರ್ಯವು ಯಶಸ್ವಿಯಾಗಬೇಕಾದರೆ ಯೋಜನೆ – ಯೋಚನೆಗಳು ಮುಖ್ಯವಾದರೂ, ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಕಾರ್ಯದಲ್ಲಿ ತೊಡಗಿಕೊಳ್ಳದಿದ್ದರೆ (ಆ್ಯಕ್ಷನ್) ಯೋಜನೆ – ಯೋಚನೆಗಳು ವ್ಯರ್ಥ ಎಂದು ಅಭಿಪ್ರಾಯಪಟ್ಟರು.
ಧನಾತ್ಮಕವಾದ ಆಲೋಚನೆಯನ್ನು ಹೊಂದಿದಾಗ ಮಾಡಬೇಕಾದ ಕಾರ್ಯವು ತಾನಾಗಿಯೇ ಆಗುತ್ತದೆ. ಹಲವಾರು ಬಾರಿ ಈ ಅನುಭವವಾಗಿದ್ದು, ನಾವೆಲ್ಲರೂ ಸಾಧನೆಯ ಹಾದಿಯಲ್ಲಿ ಧನಾತ್ಮಕ ಆಲೋಚನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿ, ಹವ್ಯಕ ಮಹಾಸಭೆಯ ಕಾರ್ಯಚಟುವಟಿಕೆಗಳನ್ನು ಪ್ರಶಂಶಿಸಿದರು.
Also read: ಸದೃಢ ಮಕ್ಕಳಿಂದ ಬಲಿಷ್ಠ ರಾಷ್ಟ್ರ: ಶಾಸಕ ಚನ್ನಬಸಪ್ಪ ಅಭಿಮತ
ಬಿ.ಎನ್.ಬಿ ಸೆಕ್ಯುರಿಟೀಸ್ ಹಾಗೂ ಅಟೋಮೇಷನ್ಸ್ ಸಂಸ್ಥೆಯ ಮುಖ್ಯಸ್ಥ ಆನಂದ್ ವಿ ಭಟ್ ಮಾತನಾಡಿ, ಉದ್ಯಮಕ್ಕೆ ಅವಶ್ಯಕವಾದ ಮಾಹಿತಿ ಹಾಗೂ ಬೆಂಬಲವನ್ನು ಬೇರೆಯವರು ನೀಡಬಹುದಾದರೂ, ಯಶಸ್ವಿಯಾಗಬೇಕಾದರೇ ಅಂತಃಸ್ಪೂರ್ತಿ ಅತ್ಯಾವಶ್ಯಕ. ನಮ್ಮ ನಿರ್ಣಯಗಳು ದೃಢವಾಗಿದ್ದಾಗ ನಾವು ದೃಢವಾಗಿ ಬೆಳೆಯಲು ಸಾಧ್ಯ. ಉದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ನಿಯಮಪಾಲನೆ, ಉದ್ಯೋಗಿಗಳನ್ನು ಸಂತೋಷವಾಗಿಟ್ಟುಕೊಳ್ಳುವುದು ಮುಖ್ಯ ಎಂದರು.
ನ್ಯಾಶನಲ್ ಲಾ ಕಾಲೇಜಿನ ವಿಶ್ರಾಂತ ಉಪಕುಲಪತಿ ಡಾ. ಜಯಗೋವಿಂದ ಮಾತನಾಡಿ, ಹವ್ಯಕ ಸಮಾಜ ಸದೃಢ ಸಮಾಜವಾಗಿದ್ದು, ಸಾಧಕರ ಆಗರವಾಗಿದೆ. ಸಾಧಕರನ್ನು ಗುರುತಿಸುವುದರಿಂದ ಇನ್ನಷ್ಟು ಸಾಧಕರಿಗೆ ಪ್ರೇರಣೆಯಾಗಲಿದೆ. ಹವ್ಯಕ ಮಹಾಸಭೆಯ ಈ ಕಾರ್ಯ ಶ್ಲಾಘನೀಯ ಎಂದರು.
ಹರಟೆ ಖ್ಯಾತಿಯ ವೈ.ವಿ ಗುಂಡೂರಾವ್ ಮಾತನಾಡಿ, ‘ಅಮಂತ್ರಮಕ್ಷರಮ್ ನಾಸ್ತಿ’ ಎಂಬ ಸಂಸ್ಕೃತ ಸುಭಾಷಿತದಂತೆ, ನಿಷ್ಪ್ರಯೋಜಕನಾದ ಯಾವ ಮನುಷ್ಯನೂ ಇಲ್ಲ. ದೃಢ ಮನಸ್ಸು ಹಾಗೂ ನಮ್ಮ ನಡುವಳಿಕೆ ನಮ್ಮ ಸಾಧನೆಗೆ ಪ್ರಮುಖ ಹೆಜ್ಜೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಹವ್ಯಕ ಮಹಾಸಭೆ ಜಾತಿಯ ಸಂಘಟನೆಯಾದರೂ, ಸಮಷ್ಟಿ ಸಮಾಜಕ್ಕೆ ಉಪಕಾರಿಯಾಗುವ ಕಾರ್ಯಗಳನ್ನು ಮಾಡುತ್ತಿದೆ. ಜಾತಿಯನ್ನು ಮೀರಿ ಎಲ್ಲಾ ಸಮುದಾಯಗಳಿಗೂ ಸಹಕಾರಿಯಾಗುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಸಾಧನೆ ಮಾಡಿದರು ಅವರು ಎದುರಿಸಿದ ಕಷ್ಟನಷ್ಟಗಳು ಹಾಗೂ ಯಶಸ್ಸನ್ನು ನಮ್ಮೆದುರು ಹೇಳಿದಾಗ, ನಮ್ಮಲ್ಲಿ ಒಂದಷ್ಟು ಸ್ಪೂರ್ತಿ ಉಂಟಾಗುತ್ತದೆ ಹಾಗಾಗಿ ‘ವಿಜಯೀ ಭವ’ ಕಾರ್ಯಕ್ರಮ ಸರಣಿಯನ್ನು ಮಹಾಸಭೆಯಿಂದ ಅಯೋಜಿಸಲಾಗುತ್ತಿದೆ ಎಂದರು.
ಮುಂದಿನ ವರ್ಷ ಡಿಸೆಂಬರ್ ನಲ್ಲಿ ತೃತೀಯ ವಿಶ್ವಹವ್ಯಕ ಸಮ್ಮೇಳನವನ್ನು ಯೋಜಿಸಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ 30 ವಿವಿಧ ಸಮಾವೇಶಗಳು, 10 ವಿಜಯೀ ಭವ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮಗಳಿಗೆ ಸಮಾಜದ ಸ್ಪಂದನೆ ಅದ್ಭುತವಾಗಿದೆ ಎಂದರು.
ಸುಧಾ ಶರ್ಮ ಚವತ್ತಿ ಹಾಗೂ ಸೌಮ್ಯಾ ಹೆಗಡೆ ಸಾಧಕರ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸತೀಶ್ ಕಾಕಲ್ ಹಾಗೂ ಆನಂದ್ ವಿ ಭಟ್ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ತನ್ವಿ ಡಿ. ಈಶ್ವರಚಂದ್ರ ಹಾಗೂ ತಂಡದಿಂದ ಲಘುಸಂಗೀತ ಕಾರ್ಯಕ್ರಮ ಜನಮನರಂಜಿಸಿತು.
ಮಹಾಸಭೆಯ ಪ್ರಧಾನ ಕಾರ್ಯ ಕಾರ್ಯದರ್ಶಿ ಸಿಎ. ವೇಣು ವಿಘ್ನೇಶ ಸಂಪ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷರಾದ ಶ್ರೀಧರ ಜೆ ಭಟ್ಟ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕಾರ್ಯಕ್ರಮದ ಸಂಚಾಲಕ ರವಿನಾರಾಯಣ ಪಟ್ಟಾಜೆ ಉಪಸ್ಥಿತರಿದ್ದರು. ಮಹಾಸಭೆಯ ವಿವಿಧ ಪ್ರಾಂತ್ಯಗಳ ನಿರ್ದೇಶಕರು, ಸಂಚಾಲಕರು ಸೇರಿದಂತೆ ಹಲವರು ಭಾಗಿಗಳಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post