ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗಿದಾಗ ಯಶಸ್ಸು ಸಾಧ್ಯ. ನಾವು ಸಶಕ್ತವಾಗಿದ್ದಾಗ ಮಾತ್ರ ಜಗತ್ತಿನಲ್ಲಿ ಗೌರವ ಪ್ರಾಪ್ತವಾಗುತ್ತದೆ. ಉದ್ಯಮಗಳನ್ನು ಹುಟ್ಟುಹಾಕಲು ಈಗ ಪೂರಕ ವಾತಾವರಣವಿದ್ದು, ಈ ದಿಶೆಯಲ್ಲಿ ಯುವ ಸಮುದಾಯ ಆಲೋಚಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ #MP Tejaswi Surya ಹೇಳಿದರು.
ಹವ್ಯಕ ಮಹಾಸಭೆಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿತವಾಗಿದ್ದ ‘ಪ್ರತಿಬಿಂಬ Grand Final’ ಹಾಗೂ ‘ಯುವಜನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹವ್ಯಕ ಸಮಾಜ ಜನಸಂಖ್ಯಾ ದೃಷ್ಟಿಯಿಂದ ಅತಿ ಚಿಕ್ಕ ಸಮುದಾಯವಾದರೂ, ಸಮಷ್ಟಿ ಸಮಾಜದ ಮೇಲೆ ಈ ಪುಟ್ಟ ಸಮುದಾಯದ ಪ್ರಭಾವ ಅಚ್ಚಳಿಯದಂತಿದೆ ಎಂದು ಹವ್ಯಕ ಸಮಾಜವನ್ನು ಶ್ಲಾಘಿಸಿದರು.

ಹವ್ಯಕ ಜನಾಂಗವು ತನ್ನದೇ ಆದ ಭಾಷಾ ಸೊಗಡನ್ನು ಹೊಂದಿದೆ. ಪ್ರಾಂತ್ಯವಾರು ವಿಭಿನ್ನವಾದ ಭಾಷಾ ಸೊಗಡು ಹವಿಗನ್ನಡದ ಹಿರಿಮೆ. ಮನೆಯಲ್ಲಿ ನಮ್ಮ ಭಾಷೆಯನ್ನು ಬಳಸುವ ಮೂಲಕ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.

Also read: ಕೊಪ್ಪಳ | ಕಿರ್ಲೋಸ್ಕರ್ ಫೌಂಡ್ರಿ ವಿಸ್ತರಣೆ, ನೂತನ ಯೋಜನೆಗಳ ಜಾರಿಗೆ ವ್ಯಾಪಕ ಬೆಂಬಲ
ಹವಿಗನ್ನಡ ಭಾಷಾ ಶ್ರೀಮಂತಿಕೆಯನ್ನು ಹೊಂದಿದೆ. ಕನ್ನಡದ ಮೊದಲ ನಾಟಕ ಯಾವದು ಎಂದು ಕೇಳಿದರೆ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಎಂಬ ಉತ್ತರ ಬರುತ್ತದೆ. ಈ ನಾಟಕ ಇರುವುದು ಹವಿಗನ್ನಡದಲ್ಲಿ ಎಂಬುದು ಹವ್ಯಕ ಕನ್ನಡದ ಭಾಷಾ ಶ್ರೀಮಂತಿಕೆಯನ್ನು ತಿಳಿಸುತ್ತದೆ ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾನ್ ಸೂರ್ಯನಾರಾಯಣ ಭಟ್ ಹಿತ್ಲಳ್ಳಿ, ನಾವು ಅನುಸರಿಸುವ ಅದ್ವೈತ ತತ್ತ್ವದ ಪ್ರತಿಪಾದನೆಯಂತೆ ಈ ಜಗತ್ತೇ ಪ್ರತಿಬಿಂಬವಾಗಿದ್ದು, ಈ ಪ್ರತಿಬಿಂಬ ಕಾರ್ಯಕ್ರಮ ಹವ್ಯಕ ಸಮಾಜದ ಪ್ರತಿಬಿಂಬವಾಗಿದೆ. ಹವ್ಯಕ ಸಮಾಜ ಎಲ್ಲಾ ರಂಗದಲ್ಲೂ ಇದ್ದು, ನಮ್ಮ ಛಾಪನ್ನು ಎಲ್ಲೆಡೆ ಮೂಡಿಸಬೇಕು ಎಂದರು.
ಮಿಸ್ ಯೂನಿವರ್ಸ್ ಪಿಟೈಟ್ ಡಾ.ಶೃತಿ ಹೆಗಡೆ ಮಾತನಾಡಿ, ಸ್ಪರ್ಧೆಯಲ್ಲಿ ಅಥವಾ ಜೀವನದಲ್ಲಿ ಗೆಲ್ಲಲು ಆತ್ಮವಿಶ್ವಾಸ ಮುಖ್ಯ. ಆತ್ಮವಿಶ್ವಾಸದ ಜೊತೆಗೆ ಪರಿಶ್ರಮ ಸೇರಿಕೊಂಡಾಗ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಯುವಜನತೆಗೆ ಸ್ಪೂರ್ತಿಯ ಮಾತುಗಳನ್ನಾಡಿದರು.
ಅಭ್ಯಾಗತರಾದ ಅಜಿತ್ ಬೊಪ್ಪನಹಳ್ಳಿ ಮಾತನಾಡಿ, ಇದು ಸಮಾಜಮಾಧ್ಯಮದ ಯುಗವಾಗಿದ್ದು ಸಮಾಜ ಮಾಧ್ಯಮದಲ್ಲಿ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. ತಾಳ್ಮೆಯಿಂದ ವರ್ತಿಸಬೇಕಾದ್ದು ಸಮಾಜ ಮಾಧ್ಯಮದ ಕುರಿತಾದ ಮೊದಲ ನಿಯಮ ಎಂದು ಕಿವಿಮಾತು ಹೇಳಿದರು.
ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ, ಬೆಂಗಳೂರಿನ ವಿವಿಧ ಪ್ರಾಂತ್ಯಗಳಲ್ಲಿ ಆಯೋಜಿಸಲಾಗಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದ Grand finale ನಡೆಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
‘The success story of enterpriser’ ಎಂಬ ಕಾರ್ಯಕ್ರಮದಲ್ಲಿ ಹವ್ಯಕ ಸಮಾಜದ ಯುವ ಉದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಂಡು, ಉದ್ಯಮವನ್ನು ಆರಂಭಿಸುವ ಕುರಿತು ಯುವ ಜನತೆಗೆ ಮಾರ್ಗದರ್ಶನ ಮಾಡಿದರು.

ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್, ಆದಿತ್ಯ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ , ಕಾರ್ಯಕ್ರಮದ ಸಂಚಾಲಕ ದಿನೇಶ್ ಎಂ ಭಟ್ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post