ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಜೆಡಿಎಸ್ ನಾಯಕರು ತನ್ನ ವಿರುದ್ದ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಜನರ ಮುಂದೆ ಅವರ ಬಣ್ಣ ಬಯಲು ಮಾಡಿಕೊಳ್ಳುತ್ತಿದ್ದಾರೆ. ಅಂಬರೀಶ್ ಹೆಸರು ಹೇಳುವ ಯೋಗ್ಯತೆಯಿಲ್ಲದವರು ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಎಂದು ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬರೀಶ್ ಅಕ್ರಮ ಮಾಡಿರುವ ದಾಖಲೆ ಇದ್ದರೆ ದೂರು ನೀಡಲಿ. ಅಧಿಕಾರದಲ್ಲಿದ್ದಾಗ ಏಕೆ ಈ ಬಗ್ಗೆ ಮಾತನಾಡಲಿಲ್ಲ. ಅಂಬರೀಶ್ ಸ್ಮಾರಕಕ್ಕೆ ಅನುಮೋದನೆ ನೀಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೊರತು ಬೇರೆ ಯಾವ ನಾಯಕರೂ ಅಲ್ಲ. ಅಂಬರೀಶ್ ಸ್ಮಾರಕ ವಿಚಾರಕ್ಕೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ದೊಡ್ಡಣ್ಣ ಹಾಗೂ ಶಿವರಾಂ ಮುಖಕ್ಕೆ ಪತ್ರ ಎಸೆದು ಹೋಗಿದ್ದರು. ಅಂತಹವರು ಅಂಬರೀಶ್ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಮಾಡಿದ ಅವಮಾನಕ್ಕೆ ದೊಡ್ಡಣ್ಣ ನನ್ನ ಬಳಿ ಕಣ್ಣೀರಿಟ್ಟಿದ್ದರು. ಏನು ಸಾಧನೆ ಮಾಡಿರುವುದಕ್ಕೆ ಅಂಬರೀಶ್‌ಗೆ ಸ್ಮಾರಕ ಮಾಡಬೇಕು ಎಂದು ಪ್ರಶ್ನಿಸಿದ್ದರು ಎಂದು ಕಿಡಿಕಾರಿದ್ದಾರೆ.
ಕಳ್ಳನಾದವನು ಪೊಲೀಸರ ಮೇಲೆ ಆರೋಪ ಮಾಡಿದಂತೆ, ಕೆಲವರು ನಡೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಟೆಲಿಪೋನ್ ಟ್ಯಾಪಿಂಗ್ ಮಾಡಿರುವುದು ನಿಜ. ಸಿಬಿಐ ಅಧಿಕಾರಿಗಳು ನನ್ನ ಬಳಿ ಎರಡು ಬಾರಿ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಆದಿಚುಂಚನಗಿರಿ ಶ್ರೀಗಳ ಪೋನ್ ಸಹ ಟ್ಯಾಪ್ ಮಾಡಲಾಗಿತ್ತು. ಆದರೆ ಕುಮಾರಸ್ವಾಮಿ ಟೆಲಿಫೋನ್ ಟ್ಯಾಪಿಂಗ್ ಮಾಡಿಲ್ಲ ಎಂದಿದ್ದಾರೆ. ಕಳ್ಳ ತಾನು ಕಳ್ಳತನ ಮಾಡಿದ್ದಾನೆ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಕಟುವಾಗಿ ಮಾತನಾಡಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಬಗ್ಗೆ ಮಾತನಾಡಲು ಸಂಸ್ಕಾರ ಇರಬೇಕು. ಡಾ.ರಾಜ್ ನಿಧನರಾಗಿದ್ದಾಗ ಯಾರು ಮುಖ್ಯಮಂತ್ರಿಯಾಗಿದ್ದರು? ಕೀಳುಮಟ್ಟದ ರಾಜಕೀಯಕ್ಕೆ ಅಂಬರೀಶ್ ಹೆಸರು ಬಳಸಿಕೊಳ್ಳಬಾರದು. ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಕುಮಾರಸ್ವಾಮಿ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ. ಅವರಿಗೆ ಸಂಬಂಧವಿಲ್ಲದ ವಿಷಯವಾದರೆ ಯಾಕೆ ಆತಂಕಪಡಬೇಕು. ಸದ್ಯದಲ್ಲೇ ಸಿಎಂ ಹಾಗೂ ಗಣಿ ಸಚಿವರನ್ನು ಭೇಟಿಯಾಗಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post