ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದುಷ್ಟ ಶಕ್ತಿಗಳು ಸಮಾಜದ ಎಲ್ಲ ರಂಗದಲ್ಲೂ ಒಳ ಹೊಕ್ಕಿರುವುದರಿಂದ ಎಚ್ಚರ ಅಗತ್ಯ. ಭಯೋತ್ಪಾದನೆಯ ದಮನಕ್ಕೆ ಸಾಮಾನ್ಯ ಪೇದೆಯೂ ಕೂಡ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅವರು ಇಂದು ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸಿ ಮಾತನಾಡಿದರು.
ಕರ್ನಾಟಕ ಪೊಲೀಸ್ ಇಲಾಖೆಗೆ ದೊಡ್ಡ ಇತಿಹಾಸ ಇದೆ. ಅನೇಕ ಸಂದರ್ಭಗಳಲ್ಲಿ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಸಮಾಜದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ದೇಶ ಹಾಗೂ ವಿದೇಶಿ ದುಷ್ಟ ಶಕ್ತಿ ಗಳು ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿವೆ. ಅಪರಾಧ ಘಟಿಸಿದ ನಂತರ ಅದರ ನಿಯಂತ್ರಣಕ್ಕಾಗಿ ಕಾನೂನು ರೂಪುಗೊಳ್ಳುತ್ತದೆ. ಆದರೆ ಇಂಥ ಅಪರಾಧಗಳ ಸಾಧ್ಯತೆಗಳನ್ನು ಗ್ರಹಿಸಿ ಕಾನೂನುನ್ನು ಮುಂಚಿತವಾಗಿ ಯೇ ರೂಪಿಸುವ ಅಗತ್ಯವಿದೆ ಎಂದರು.
ಪೊಲೀಸರಿಗೆ ಆಧುನಿತ ಶಸ್ತ್ರಾಸ್ತ್ರದ ಅಗತ್ಯ ಇದೆ. ಹಿರಿಯ ಅಧಿಕಾರಿಗಳು ಹೆಚ್ಚು ದಕ್ಷರಾಗಿ ಕಾರ್ಯ ನಿರ್ವಹಿಸಿದರೆ ಕೆಳ ಹಂತದ ಅಧಿಕಾರಿಗಳ ಮೆಲೆ ಪರಿಣಾಮ ಬೀರುತ್ತದೆ. ಪೊಲೀಸರು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೀರಿ.ಅದನ್ನು ಸರ್ಕಾರ ಮತ್ತು ಸಮಾಜ ಗೌರವಿಸುತ್ತದೆ. ತಮ್ಮ ಹಿಂದೆ ಕುಟುಂಬ ಮಕ್ಕಳು ಇದ್ದಾರೆ ಅದನ್ನು ಆಳುವವರು ಗಮನಿಸಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸರ ಪಾತ್ರ ಅತ್ಯಂತ ಮುಖ್ಯ ಎಂದರು.
ಪೊಲೀಸರಿಗೆ ಸೌಲಭ್ಯ
ಪೊಲೀಸರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ನಮ್ಮ ಸರ್ಕಾರ ಬೇರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ನೇಮಕಾತಿ ಪ್ರಮಾಣವು ಹೆಚ್ಚಳವಾಗಿದೆ. ಪ್ರತಿ ವರ್ಷ ನಾಲ್ಕು ಐದು ಸಾವಿರ ಪೊಲಿಸರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರ ವಿಶ್ವಾಸಾರ್ಹತೆ ಹೆಚ್ಚಬೇಕಿದೆ. ಯಾವುದೇ ಭ್ರಷ್ಟಾಚಾರ ಆಗದಂತೆ ನೇಮಕಾತಿ ಆಗಬೇಕು. ಅದನ್ನು ನಾವು ಮಾಡುತ್ತೇವೆ. ತರಬೇತಿಯಲ್ಲಿ ಹೊಸ ತಂತ್ರಜ್ಞಾನದ ಪರಿಚಯ, ಸೈಬರ್ ಅಪರಾಧಗಳ ಕುರಿತು ತರಬೇತಿ ನೀಡುವ ಕೆಲಸ ಆಗಬೇಕು ಎಂದರು.
Also read: ಎಲೆಚುಕ್ಕೆ ರೋಗದ ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ
ಪೊಲೀಸರ ತರಬೇತಿಗೆ ಪ್ರತ್ಯೇಕ ಕಮಾಂಡ್
ಕಳೆದ ಒಂದು ವರ್ಷದಲ್ಲಿ ಪೊಲಿಸ್ ಠಾಣೆಗಳ ನಿರ್ಮಾಣ ಹೆಚ್ಚಾಗಿದೆ. ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ. ಇನ್ಸ್ ಪೆಕ್ಟರ್ ಮತ್ತು ಡಿವೈ ಎಸ್ಪಿ ವರ್ಗಗಳ ಅಧಿಕಾರಿಗಳಿಗೆ ತರಬೇತಿ ಅಗತ್ಯವಿದೆ. ಅದಕ್ಕೆ ಪ್ರತ್ಯೇಕ ತರಬೇತಿ ಕಮಾಂಡ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ.
ಸುಧಾರಣೆಗೆ ಕ್ರಮ
ಪೊಲೀಸರ ತ್ಯಾಗ, ಬಲಿದಾನ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸಲು ಪೊಲೀಸ್ ವಸ್ತುಸಂಗ್ರಹಾಲಯ, ಎಟಿಎಸ್ ಬಲವರ್ಧನೆ, ಜೈಲುಗಳ ಸಂಖ್ಯೆ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುವುದಲ್ಲದೆ ಇನ್ನಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಪೊಲೀಸರ ಜೊತೆಗಿದೆ
ಪೊಲೀಸರ ತ್ಯಾಗ ವ್ಯರ್ಥವಾಗದಂತೆ ಅದು ಸದಾ ಸ್ಮರಣೆಯಲ್ಲಿ ಇಡುವಂತೆ ಮಾಡುವುದು ನಮ್ಮ ಕೆಲಸ. ನಮ್ಮ ಸರ್ಕಾರ ಪೊಲೀಸರ ಜೊತೆ ಇರುತ್ತದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post