ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ Minister Eshwar Khandre ಖಡಕ್ ಸೂಚನೆ ನೀಡಿದ 24 ಗಂಟೆಯೊಳಗೆ ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿ ಮಾಡಲಾಗಿದ್ದ 60 ಕೋಟಿ ರೂ. ಮಾರುಕಟ್ಟೆ ಮೌಲ್ಯದ 6.5 ಎಕರೆ ಭೂಮಿ ತೆರವು ಮಾಡಿ, ವಶಕ್ಕೆ ಪಡೆಯಲಾಗಿದೆ.
ಹೊಸ ವರ್ಷದಲ್ಲಿ ಅರಣ್ಯ ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ನಿನ್ನೆ ಸಭೆ ನಡೆಸಿ ಉನ್ನತಾಧಿಕಾರಿಗಳಿಗೆ ಆದ್ಯತೆಯ ಮೇಲೆ ಒತ್ತುವರಿ ತೆರವು ಮಾಡಲು ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಬಿ.ಎಂ. ಕಾವಲಿನಲ್ಲಿ ಜೆ.ಸಿ.ಬಿ. ವಾಹನಗಳು ಗರ್ಜಿಸಿದವು.

Also read: ಜ.5 ರಿಂದ ಜ.7 ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ, ಸಾವಯವ ವಾಣಿಜ್ಯ ಮೇಳ
ಈ ಅರಣ್ಯ ಪ್ರದೇಶದಲ್ಲಿ ಸುಮಾರು 6.5 ಎಕರೆಯಷ್ಟು ಭೂಮಿಯನ್ನು ಮಧುಸೂದನಾನಂದ ಸ್ವಾಮಿ ಎಂಬುವವರು ಒತ್ತುವರಿ ಮಾಡಿ, ಮಂಜೂರಾತಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರು, ಅರಣ್ಯ ಭೂಮಿಯಾದ ಕಾರಣ ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ತಿರಸ್ಕರಿಸಿತ್ತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಅವರು ಈ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದ್ದೆಂದು ಮಹತ್ವದ ಆದೇಶ ನೀಡಿದ್ದರು. ನಿನ್ನೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಬೆಂಗಳೂರು ಸುತ್ತಮುತ್ತ ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಆದ್ಯತೆಯ ಮೇಲೆ ತೆರವು ಮಾಡುವಂತೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.

ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಮಧುಸೂದನಾನಂದ ಸ್ವಾಮಿ ಎನ್ನುವವರ ವಿರುದ್ಧ ಈಗಾಗಲೇ 5 ಪ್ರಕರಣ ದಾಖಲು ಮಾಡಲಾಗಿದೆ.
ಈಶ್ವರ ಖಂಡ್ರೆ ಪ್ರತಿಕ್ರಿಯೆ
ಬೆಂಗಳೂರು ಸುತ್ತಮುತ್ತ ಭೂಮಿಗೆ ಬಂಗಾರದ ಬೆಲೆ ಇದೆ. ಕೆಲವರು ಸ್ವಾರ್ಥಕ್ಕಾಗಿ ಕೋಟ್ಯಂತರ ರೂ. ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ಪ್ರಕೃತಿ, ಪರಿಸರ, ಕಾಡು ಮತ್ತು ವನಸಂಪತ್ತು ಉಳಿಸುವುದೇ ಇಲಾಖೆಯ ಕರ್ತವ್ಯವಾಗಿದ್ದು, ಬೆಂಗಳೂರಿನಲ್ಲಿ ಆದೇಶ ಆಗಿರುವ ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)









Discussion about this post