ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಾದ್ಯಂತ ಕೊಳೆಗೇರಿ ನಿವಾಸಿಗಳಿಗೆ ಒಂದು ಲಕ್ಷ ರೂ.ಗಳಲ್ಲಿ ಮನೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಚಿವ ಜಮೀರ್ ಅಹಮದ್, Minister Zaneer Ahmed ಕೊಳೆಗೇರಿ ನಿವಾಸಿಗಳಲ್ಲಿ 1.80 ಲಕ್ಷ ಮನೆಗಳಿಗೆ ಫಲಾನುಭವಿಗಳು ಪಾವತಿಸಬೇಕಿದ್ದ 4.5 ಲಕ್ಷ ರೂ.ಗಳಲ್ಲಿ ಕೇವಲ ಒಂದು ಲಕ್ಷ ರೂ. ನೀಡಿದರೆ ಉಳಿದ 3.5 ಲಕ್ಷ ರೂ.ಗಳನ್ನೂ ರಾಜ್ಯ ಸರ್ಕಾರ ಭರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ನಗರ) ಸರ್ವರಿಗೂ ಸೂರು ಅಭಿಯಾನದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಅಡಿಯಲ್ಲಿ ಇದು ಜಾರಿಯಾಗಲಿದೆ. ಈ ಯೋಜನೆಗೆ ಒಟ್ಟು 6,170 ಕೋಟಿ ರೂ. ಅವಶ್ಯವಿದ್ದು, ಪ್ರತಿ ಮನೆ ನಿರ್ಮಾಣಕ್ಕೆ 7.5 ಲಕ್ಷ ರೂ. ವೆಚ್ಚವಾಗಲಿದೆ ಎಂದರು.
Also read: ರೈಲು ಹಳಿಗಳನ್ನು ಸ್ಫೋಟಿಸಿ, ಬಸ್ ಸುಟ್ಟುಹಾಕಿದ ನಕ್ಸಲರು
ಯೋಜನೆಯಡಿ ಮೊದಲ ಹಂತದಲ್ಲಿ 48,796 ಮನೆಗಳನ್ನು ಪೂರ್ಣಗೊಳಿಸಲು 500 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ 1.3 ಲಕ್ಷ ಮನೆಗಳನ್ನು ಹಂತ ಹಂತವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2018ರಿಂದ 2023ರವರೆಗೆ ರಾಜ್ಯಕ್ಕೆ 1,80,253 ಮನೆಗಳು ಮಂಜೂರಾಗಿದ್ದರೂ ಫಲಾನುಭವಿಗಳಿಗೆ ನಿಗದಿಪಡಿಸಿದ್ದ 4.5 ಲಕ್ಷ ರೂ. ಹಣವನ್ನು ಪಾವತಿಸಲು ಬಹುತೇಕರಿಗೆ ಸಾಧ್ಯವಾಗದೆ ಪೂರ್ಣಗೊಳಿಸಲಾಗಿರಲಿಲ್ಲ.
ಈ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಕೊಳಗೇರಿಗಳಲ್ಲಿನ ಶೆಡ್, ಗುಡಿಸಲುಗಳನ್ನು ತೆರವುಗೊಳಿಸಿರುವುದರಿಂದ ಅಲ್ಲಿನ ನಿವಾಸಿಗಳು ಮನೆಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















