ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಡವರಿಗೆ, ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಸವಿರುವ ಆರ್ಥಿಕ ದುರ್ಬಲರಿಗೆ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಅಗ್ಗದ ದರದಲ್ಲಿ ಅಕ್ಕಿ ನೀಡಿದ್ದರು. ಅವರ ಸಂಪುಟದಲ್ಲಿ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿಗಳಿಗೆ ಈ ವಿಷಯ ಮರೆತು ಹೋಗಿದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ HD Kumaraswamy ಟಾಂಗ್ ನೀಡಿದರು.
ಅಕ್ಕಿ ಗ್ಯಾರಂಟಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇವರು ಇವತ್ತು ಅಕ್ಕಿ ಗ್ಯಾರಂಟಿ, ಅಕ್ಕಿ ಭಾಗ್ಯ ಎಂದು ಹೇಳುತ್ತಿದ್ದಾರೆ. ಆದರೆ, ದೇವೇಗೌಡರು ಹಿಂದೆಯೇ ಕಡಿಮೆ ದರದಲ್ಲಿ ಅಕ್ಕಿ ನೀಡುವ ಮೂಲಕ ಬಡಜನರ ನೆರವಿಗೆ ಧಾವಿಸಿದ್ದರು ಎಂದರು.

ಮತಕ್ಕಾಗಿ, ಅಧಿಕಾರಕ್ಕಾಗಿ ಅಕ್ಕಿ ಫ್ರೀ ಎಂದವರು ಈಗ ಅಕ್ಕಿ ಕೊಡುವ ಮತುಕೊಟ್ಟಿದ್ದ ಇವರು ದೇವೇಗೌಡರ ಬದ್ಧತೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು. ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಇವರು ಕೊಟ್ಟ ಭರವಸೆ ಈಡೇರಿಸಲಾಗದೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಟೀಕಿಸಿದರು.

ಇದು ಕೂಡ ಪರ್ಸೆಂಟೆಜ್ ಸರ್ಕಾರ. ನಿಮಾಗೆ ಅನುಮಾನ ಇದೆಯಾ? ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿದ ಕುಮಾರಸ್ವಾಮಿ ಅವರು, ಇದಕ್ಕಾಗಿಯೇ ಎಲ್ಲ ಇಲಾಖೆಗಳಲ್ಲಿ ಸಲಹೆಗಾರರು ಬಂದು ತುಂಬಿಕೊಂಡಿದ್ದಾರೆ. ಇದೆಲ್ಲಾ ಪರ್ಸೆಂಟೆಜ್ ವ್ಯವಸ್ಥೆಗೆ ಮಾಡಿಕೊಂಡಿರುವ ವ್ಯವಸ್ಥೆ ಎಂದು ಕುಟುಕಿದರು.
ನಮ್ಮದು ಸಂಪತ್ಪಭರಿದ ರಾಜ್ಯ. ಹಣಕ್ಕೆ ಕೊರತೆ ಇಲ್ಲ. ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹ ಆಗುತ್ತಿದೆ. ಘೋಷಣೆ ಮಾಡಿಕೊಂಡು ಒದ್ದಾಡ್ತಾ ಇದ್ದಾರೆ ಇವರು. ಬಿಜೆಪಿ ಸರಕಾರದ ವಿರುದ್ಧ 40% ಆರೋಪ ಮಾಡಿದ ಇವರು ಈಗ ಪರ್ಸೆಂಟೇಜ್ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದಾರೆ. ಇದು ಕೂಡ ಪರ್ಸೆಂಟೇಜ್ ಸರಕಾರವೇ ಆಗಿದೆ ಎಂದು ಅವರು ದೂರಿದರು.

ಸಿಎಂ ಹಿಂದೆ ಸುತ್ತುವ ಮಂತ್ರಿಗಳು:
ಸರಕಾರ ಬಂದು ಒಂದು ತಿಂಗಳ ಮೇಲಾಯಿತು. ಜನರು ಕಷ್ಟದಲ್ಲಿದ್ದಾರೆ. ಜನ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ವಿವಿಧ ಇಲಾಖೆಗಳ ಮಂತ್ರಿಗಳು ಇನ್ನೂ ತಮ್ಮ ಇಲಾಖೆಗಳ ಸಭೆಗಳನ್ನೇ ನಡೆಸುತ್ತಿಲ್ಲ. ಮುಖ್ಯಮಂತ್ರಿ ಹಿಂದೆ ಮುಂದೆ ಓಡಾಡಿಕೊಂಡಿದ್ದಾರೆ. ದಿನದ 24 ಗಂಟೆಯೂ ಮುಖ್ಯಮಂತ್ರಿ ಜತೆ ಇವರಿಗೇನು ಕೆಲಸ. ಸಿಎಂ ಮನೆಯಲ್ಲೂ ಇವರೇ, ಸಿಎಂ ಕಚೇರಿಯಲ್ಲೂ ಇವರೇ, ಸಿಎಂ ದಿಲ್ಲಿಗೆ ಹೋದರೆ ಅಲ್ಲೂ ಇವರೇ. ಎನ್ ನಡೀತಿದೆ ಇಲ್ಲಿ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ಮುಳಬಾಗಿಲು ಕ್ಷೇತದ ಶಾಸಕ ಸಮೃದ್ಧಿ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಉಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post