ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅರಣ್ಯ ಇಲಾಖೆಯ ಗಣಿ ಗುತ್ತಿಗೆ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸಿ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಸೂಚಿಸಿದರು.
ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅರಣ್ಯ ಇಲಾಖೆ ತೀರುವಳಿ ಮತ್ತಿತರ ಅನುಮತಿ ಪತ್ರಗಳನ್ನು ನೀಡಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆ ತೀರುವಳಿ ಪಡೆಯಲು ಬಹಳಷ್ಟು ಪ್ರಕರಣಗಳು ಬಾಕಿ ಇರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಅರಣ್ಯೀಕರಣಕ್ಕೆ ಪರ್ಯಾಯ ಭೂಮಿ ನೀಡಿಲ್ಲ. ಆನೆಗಳು ಮತ್ತಿತರ ವನ್ಯಜೀವಿಗಳ ಉಪಟಳದಿಂದಾಗಿ ಕೃಷಿ ಭೂಮಿ ಮಾರಲು ಸಿದ್ಧರಿರುವ ರೈತರು ಹಾಸನ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿದ್ದಾರೆ. ಇಂತಹ ರೈತರಿಗೆ ಈ ಸಂಸ್ಥೆಗಳು ಸೂಕ್ತ ಬೆಲೆ ನೀಡಿ ಜಮೀನು ಖರೀದಿಸಬಹುದು ಎಂದು ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತವಾಯಿತು.
ಭಾರತ ಸರ್ಕಾರ ಸ್ವಾಮ್ಯದ ಕೆಐಓಸಿಎಲ್ ಕುದುರೆಮುಖದ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸಿಕೊಡುವ ಬಗ್ಗೆ ಚರ್ಚಿಸಿ ಬಗೆಹರಿಸಲು ಸೂಚಿಸಲಾಯಿತು.
ಅನಗತ್ಯವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರಣ್ಯ ಇಲಾಖೆ ತೊಂದರೆ ನೀಡಬಾರದು. ಅನಗತ್ಯ ವಿಳಂಬ ಮಾಡಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
Also read: ಶೀಘ್ರದಲ್ಲೇ ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯ ಸ್ಪೋಟ: ಬಸವರಾಜ ಬೊಮ್ಮಾಯಿ ಲೇವಡಿ
ಅರಣ್ಯ ಇಲಾಖೆಯ 25 ಮಿಲಿಯನ್ ಟನ್ ಅದಿರನ್ನು ಹರಾಜು ಹಾಕುವ ಸಂಬಂಧ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದುವರೆಯುವಂತೆ ಸೂಚಿಸಿದರು.
2023- 24 ನೇ ಸಾಲಿಗೆ ಮುಖ್ಯ ಖನಿಜ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ಅಂತ್ಯದವರೆಗೆ 3276 ಕೋಟಿ ರೂ.ಗಳ ರಾಜಧನ ಸಂಗ್ರಹಣೆಯಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಲಾಯಿತು.
ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾದ ರಾಜಧನ ಅನಗತ್ಯವಾಗಿ ಸೋರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಜಾಗೃತ ದಳ ಕಾಲಕಾಲಕ್ಕೆ ಪರಿಶೀಲಿಸುವಂತೆ ಕ್ರಮವಹಿಸಲು ಸೂಚಿಸಿದರು.
ಸಿ ವರ್ಗದ ಅದಿರಿನ ಬ್ಲಾಕ್ ಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಅರಣ್ಯ ಅನುಮತಿಗಳನ್ನು ವರ್ಗಾಯಿಸುವ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವಂತೆ ಸೂಚಿಸಿದರು.
ಈಗಾಗಲೇ ಗಣಿಗಾರಿಕೆ ನಡೆಸಿದ ಅರಣ್ಯ ಪ್ರದೇಶದಲ್ಲಿ ಮತ್ತು ಅರಣ್ಯೇತರ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಕುರಿತು ಚರ್ಚಿಸಲಾಯಿತು.
ಅರಣ್ಯ ಸಚಿವ ಈಶ್ವರ ಖಂಡ್ರೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ , ಮುಖ್ಯ ಮಂತ್ರಿಗಳ ರಾಜಕೀಯ್ ಕಾರ್ಯದರ್ಶಿ ಗೋವಿಂದರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಗಿರೀಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post