ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದತ್ತಾತ್ರೇಯ ದೇವರು ಜ್ಞಾನೋಪದೇಶಕ್ಕಾಗಿಯೇ ಪ್ರಕಟಗೊಂಡ ಭಗವಂತ ನಾರಾಯಣನ ಒಂದು ಅವತಾರ ರೂಪ. ಅವತಾರಗಳಲ್ಲಿ ಕೃಷ್ಣನದು ವಿಷ್ಣುವಿನ ಪೂರ್ಣಾವತಾರ, ಕಪಿಲನದು ಅಂಶಾವತಾರ, ಪರಶುರಾಮ, ದತ್ತಾತ್ರೇಯರದು ಆವೇಶಾವತಾರವೆಂದು ಶ್ರೀಮದ್ ಭಾಗವತ ತಿಳಿಸುತ್ತದೆ. ಈ ಅವತಾರ ನಡೆದಿದ್ದು ವೈವಸ್ವತ ಮನ್ವಂತರದ ತ್ರೇತಾಯುಗದಲ್ಲಿ, ಸ್ಮರಣ ಮಾತ್ರದಿಂದ ಸಂತುಷ್ಟನು, ಮಹಾಭಯ ನಿವಾರಕನೂ ಆದ ದತ್ತ ಮಹಾಜ್ಞಾನ ಪ್ರದಾಯಕನೂ ಹೌದು ಮಹಾಯೋಗ ಸರ್ವಕಾಮ ಫಲಪ್ರದಾಯಕ ಮಾತ್ರನಲ್ಲ, ಮುಕ್ತಿದಾಯಕನೂ ಹೌದು..
ಶ್ರೀಮದ್ಭಾಗವತದಲ್ಲಿ ಅತ್ರಿ ಮಹರ್ಷಿಯ ತಪಸ್ಸಿಗೆ ಮೆಚ್ಚಿದ ಶ್ರೀ ಮಹಾವಿಷ್ಣುವು ಮಹರ್ಷಿಯ ಪುತ್ರನಾಗಿ ಅವತರಿಸಿದನೆಂದು ಹೇಳಲಾಗಿದೆ. ಅತ್ರಿಗೆ ತಾನೇ ದತ್ತ ನಾದುದರಿಂದ (ಕೊಡಲ್ಪಟ್ಟವನು) ಈ ಅತ್ರಿ-ಅನುಸೂಯಾ ಪುತ್ರನಿಗೆ ದತ್ತಾತ್ರೇಯನೆಂದು ಹೆಸರಾಯಿತು.
ಪೂರ್ಣತತ್ವ ಸ್ವರೂಪದಿಂದ ದತ್ತಾತ್ರೇಯನು ಅವತರಿಸಿದ್ದ ಪೂರ್ಣಿಮೆಯೆಂದೇ ಎಂಬುದು ವೈಶಿಷ್ಟ್ಯ, ಅದರಲ್ಲೂ ಮಾರ್ಗಶಿರ ಪೌರ್ಣಮಿ! ಮಾಸಾನಾಂ ಮಾರ್ಗಶೀರ್ಷೋಸ್ಮಿ ಎಂದಿದ್ದಾನೆ ಶ್ರೀಕೃಷ್ಣ ಗೀತೆಯಲ್ಲಿ. ದತ್ತಾತ್ರೇಯರು ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳ್ಳಲ್ಲಿ ಒಬ್ಬರು.
ಚಂದ್ರನು ಮೃಗಶಿರ ನಕ್ಷತ್ರದೊಡನೆ ಸೇರಿರುವ ಪೂರ್ಣಿಮೆಯೇ ಮಾರ್ಗಶಿರ ಪೂರ್ಣಿಮೆ. ಮೃಗಶಿರವೆಂದರೆ ಮೃಗದಂತಿರುವ ತಲೆ ಗೊಡ್ಡು ಮನುಷ್ಯ ಎಂದರ್ಥ! ಗೊಡ್ಡು ಮನುಷ್ಯನನ್ನು ಪರಿಪೂರ್ಣ ಮಾನವನನ್ನಾಗಿ ತಿದ್ದುವ ಪೂರ್ಣಿಮೆ ಮಾರ್ಗಶಿರ ಪೂರ್ಣಿಮೆ! ಹಾಗೆ ತಿದ್ದುವ ಶಕ್ತಿ ಪ್ರತ್ಯಕ್ಷ ಸ್ವರೂಪವೇ ಮೂರು ಶಿರಸ್ಸು, ಆರು ಕೈಗಳುಳ್ಳ ದತ್ತಾತ್ರೇಯ ರೂಪ.
ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರರು ಅಧಿದೇವತೆಗಳೆಂದು ಭಾರತೀಯರ ನಂಬಿಕೆ. ಆದರೆ ವಸ್ತುತಃ ಒಂದೇ- ಏಕಂ ಸತ್ ವಿಪ್ರಾ ಬಹುಧಾ ವದಂತಿ‘‘ ಎಂಬ ಸಂಕೇತವೇ ದತ್ತಾತ್ರೇಯನ ರೂಪವಾಗಿದೆ.
ಶೈವ ಮತ್ತು ಶಾಕ್ತ ಪಂಥಗಳ ಮಹಾಗುರುವೂ ದತ್ತನೇ. ಗಂಡುಗೊಡಲಿಯ ವೀರ ಪರಶುರಾಮ ದತ್ತಾತ್ರೇಯರ ಆದ್ಯ ಶಿಷ್ಯರಲೊಬ್ಬ, ಅವನಿಗೆ ದತ್ತ ತ್ರಿಪುರಾರಹಸ್ಯವನ್ನು ಬೋಧಿಸಿದ. ಪುರಾಣ ಪ್ರಸಿದ್ಧ ಕ್ಷತ್ರೀಯ ವೀರನಾದ ಕಾರ್ತವೀರ್ಯಾರ್ಜುನನೂ ದತ್ತ ಶಿಷ್ಯನೇ. ಈ ಇಬ್ಬರೂ ಮಹಸಾಧಕರು, ಮಹಾಭಕ್ತರು, ಮಹಾವೀರರೂ.
ದತ್ತಾತೇಯನಿಗಿರುವ ಇನ್ನೊಂದು ಹೆಸರು ತಾರಕ ಎಂದರೆ ಸಂಸಾರದ ಸಾಗರವನ್ನು ದಾಟಿಸುವ ಗಟ್ಟಿ ತೆಪ್ಪ. ಭಕ್ತರು ಸ್ಮರಿಸಿದ ಕೂಡಲೇ ಸಾಕ್ಷಾತ್ಕರಿಸುವುದರಿಂದ ಈತನು ಸ್ಮರ್ತೃಗಾಮಿ. ಅಂತಯೇ ಇಳೆಯ ಗಂಟನ್ನು ಒದರಿ ತೊರೆದವನು. ಬ್ರಹ್ಮಜ್ಞನು. ಈ ಕಲ್ಪನೆಯನ್ನು ದತ್ತಾತ್ರೇಯನಿಗೆ ಅನ್ವಯಿಸುವುದರಿಂದ ಹೊರಡುವ ಪ್ರಯೋಜನವೆಂದರೆ ಆತ ಅವತಾರ ಪುರುಷನಾಗಿ ಸಾಧ್ಯದ ನೆಲೆಯಲ್ಲಿದ್ದರೂ ಸಾಧನ ವ್ರತಗಳನ್ನು ಕೈಗೊಂಡು ಸಾಧ್ಯವಾಗಿ ಸಾಮಾನ್ಯ ಮರ್ತ್ಯ ಸಾಧಕರಿಗೆ ನಿದರ್ಶನನಾಗಿರುವನೆಂಬುದು.
ಅವಧೂತ ಪ್ರಜ್ಞೆಯ ಆನಂದ ಮೀಮಾಂಸೆ. ದಿಕ್ಕುಗಳನ್ನೇ ಅಂಬರವಾಗಿ ಧರಿಸಿರುವ ಶ್ರೀದತ್ತರದು ಅವಧೂತ ಸ್ವರೂಪ. ದತ್ತನು ನೈಷ್ಠಿಕ ಬ್ರಹ್ಮಚರ್ಯನಿರತ. ದತ್ತಾತ್ರೇಯನ ಉನ್ಮತ್ತತೆಯ ಅವಧೂತ ವರ್ತನೆಯೂ ಮಾರ್ಕಾಂಡೇಯ ಪುರಾಣದಲ್ಲಿದೆ. ದಿನದಲ್ಲಿ ಸ್ನಾನ ವಾರಣಾಸಿಯಲ್ಲಿ, ಜಪ ಕೊಲ್ಲಾಪುರದಲ್ಲಿ, ಭಿಕ್ಷೆ ಮಾಹುರೀಪುರದಲ್ಲಿ, ಮಲಗುವುದು ಸಹ್ಯಾದ್ರಿಯಲ್ಲಿ ಈ ದಿಗಂಬರನು ಅವಧೂತನೆನ್ನಲು ಮತ್ತೇನು ಎನ್ನುತ್ತದೆ ತ್ರಿಪುರಾ ರಹಸ್ಯ.
ಇಂತಹ ಸಿದ್ದಿ ನಿಮಗೆ ಬರಬೇಕಾದರೆ ಗುಟ್ಟೇನು? ನಿಮ್ಮ ಗುರು ಯಾರು? ಎಂದು ಒಮ್ಮೆ ಶಿಷ್ಯನಾದ ಯದು ಪ್ರಶ್ನಿಸಿದಾಗ ದತ್ತಗುರು ತನ್ನ(24) ಇಪತ್ತನ್ನಾಲ್ಕು ಗುರುಗಳ ಬಗ್ಗೆ ತಿಳಿಸುತ್ತ ಈ ಎಲ್ಲಾ ಗುರುಗಳಿಂದ ಭೋಧನೆ ಪಡೆದು ನಿರ್ಲಿಪ್ತವಾದ ಮನಸ್ಸು ಪಡೆದನೆಂದು ಶ್ರೀಮದ್ಭಾಗವತದ ಅವಧೂತ ಗೀತೆಯಲ್ಲಿ ಹೇಳಲಾಗಿದೆ. ಅವಧೂತರು ಯೌಗಿಕ ಪಂಥದ ಅನುಭಾವಿಗಳು. ಸಂಸ್ಥಿಕ ಚೌಕಟ್ಟನ್ನು ಮೀರಿದ ಒಂದು ಸ್ಥಿತಿ.
ದತ್ತಾತ್ರೇಯರು ಯಾವುದೋ ಕಾಲದಲ್ಲಿ ಮುನಿ ದಂಪತಿಗಳಿಗೆ ಪುತ್ರರಾಗಿ ಹುಟ್ಟಿದ ಐತಿಹಾಸಿಕ ವ್ಯಕ್ತಿ ಮಾತ್ರವಲ್ಲ, ಸರ್ವದೇಶ, ಸರ್ವಕಾಲಗಳಲ್ಲೂ ಶುದ್ಧಾತ್ಮರು, ತಮ್ಮ ಹೃದಯಗಳಲ್ಲಿ ಆತನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ಏಕೆಂದರೆ ಆತನ ತಂದೆ ಅತ್ರಿ ಎಂದರೆ ತ್ರಿಗುಣಗಳನ್ನು ಮೀರಿದವನು, ತಾಯಿ ಅನಸೂಯೆ ಎಂದರೆ ಅಸೂಯ ದೋಷರಹಿತವಾದ ಶುದ್ಧ ಪ್ರಕೃತಿ. ಇಂತಹ ಶುದ್ಧ ಪುರುಷ ಮತ್ತು ಪ್ರಕೃತಿ ಇಬ್ಬರ ಸಂಯೋಗವಾದಾಗಲೆಲ್ಲ ದತ್ತಾತ್ರೇಯ ದೇವರು ನಮ್ಮ ಹೃದಯದಲ್ಲಿ ಪ್ರಕಾಶಿಸುವರು.
ಉಲ್ಬಣಿಸಿದ ದುಷ್ಟರ ತಲೆತೆಗೆದು ಸಂಹರಿಸುವ ಕಾರ್ಯವನ್ನು ಈಶ್ವರನ ಕ್ಷಾತ್ರ ಅವತಾರಗಳು ನೆರವೇರಿಸಿದರೆ, ಗುರು ಅವತಾರವು ಮಾನವನ ಮನಃ ಪರಿವರ್ತನೆ ಮಾಡುವ ತಲೆಯನ್ನೇ ತಿದ್ದುವ ಬ್ರಾಹ್ಮ ಆವತಾರ, ಅಜ್ಞಾನಿಗಳ ಕಣ್ಣು ತೆರೆಯಿಸಿ, ಅವರಿಗೆ ಸುಜ್ಞಾನವನ್ನೀಯುವ, ಕಲ್ಲು ಹೃದಯಗಳನ್ನು ಕರಗಿಸಿ ಕೋಮಲ ಹೃದಯ ಕುಸುಮಗಳನ್ನಾಗಿ ಮಾಡಿ ಭಗವದರ್ಪಣಗೊಳಿಸುವ, ಕಾಮಕ್ರೋಧಾದಿ ಕೆಸರು ತುಂಬಿದ ಅಂತಃಕರಣ ಕಾಸರವನ್ನು ತಿಳಿಮಾಡಿ ಮಾನಸ ಸರೋವರಗಳನ್ನು ಅಣಿಗೊಳಿಸುವ ಭಕ್ತಿ ಕಮಲಗಳನ್ನು ಅರಳಿಸುವ ಮಧುರ ಮಾರ್ಗದ ಕರುಣಾವತಾರ.
ದತ್ತಪ್ರಭುವಿನಿಂದ ತ್ರಿಮೂರ್ತಿಗಳು, ಅವರಿಂದ ಮುಕ್ಕೋಟಿ ದೇವತೆಗಳು ಅವರಿಂದ ಮುವತ್ತಮೂರು ಕೋಟಿ ದೇವತೆಗಳು ಬಂದಿದ್ದಾರೆ. ಅದುದರಿಂದ ದತ್ತನಾಮಸ್ಮರಣೆ ಮಾಡಿದ ಮಾತ್ರದಿಂದ ಸಮಸ್ತ ದೇವತೆ ಆ ಸ್ಮರಣೆ ಮಾಡಿದ ಫಲವು ಲಭಿಸುವುದು. ಶ್ರೀದತ್ತನ ಬ್ರಹ್ಮ ಮುಖಕ್ಕೆ ಋಷೀ ಪೂಜೆ ಮಾಡಬೇಕು, ವಿಷ್ಣು ಮುಖಕ್ಕೆ ಶ್ರೀಸತ್ಯನಾರಾಯಣ ಪೂಜೆ ಮಾಡಿ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ರುದ್ರ ಮುಖಕ್ಕೆ ರುದ್ರಾಭಿಷೇಕವನ್ನು ಮಾಡಬೇಕು ಅವರ ಬ್ರಹ್ಮ ಮುಖದ ನಾಲಿಗೆಯಲ್ಲಿ ಸರಸ್ವತಿ ಇದ್ದಾಳೆ. ಮಧ್ಯಮುಖದ ವಕ್ಷಸ್ಥಳದಲ್ಲಿ ಲಕ್ಷ್ಮೀಯು ಇದ್ದಾಳೆ. ಶಿವ ಮುಖದ ವಾಮಭಾಗದಲ್ಲಿ ಗೌರಿಯು ಇದ್ದಾಳೆ. ಸೃಷ್ಠಿಯಲ್ಲಿನ ಸ್ತ್ರೀ ದೇವತಾ ಶಕ್ತಿಗಳು ವಾಮಭಾಗದಲ್ಲೂ, ಪುರುಷ ದೇವತಾ ಶಕ್ತಿಗಳು ಅವರ ಬಲಭಾಗದಲ್ಲಿ ಇವೆ.
ಚಕ್ರ-ಶಂಖಗಳು ವಿಷ್ಣು ಶಕ್ತಿಯ ಪ್ರತೀಕವಾಗಿ ಕಾಲ-ನಾದದ ಸಂಕೇತ, ತ್ರಿಶೂಲ -ಡಮರು -ಶಿವ ಶಕ್ತಿಯ ಪ್ರತೀಕವಾಗಿ ತ್ರಿಗುಣ/ಶಬ್ದ ಶಾಸ್ತ್ರದ ಸಂಕೇತ ಸಂಕೇತ, ಮಾಲೆ-ಕಮಂಡಲು ಬ್ರಹ್ಮ ಶಕ್ತಿಯ ಪ್ರತೀಕವಾಗಿ ಯೋಗಶಕ್ತಿ- ಶಾಂತಿಯ ಸಂಕೇತ. 4 ಶ್ವಾನಗಳು -4 ವೇದಗಳ ಪ್ರತೀಕ, ಭಕ್ತರ ಆತ್ಮಗಳ ಬೇಟೆಗಾರನಾದ ದತ್ತನ ಹಿಂದೆ ಸದಾ ಇರುವ ಸತ್ಯದ ಕಾವಲು ನಾಯಿಗಳಿವು. ದತ್ತನು ಧರಿಸಿರುವ ಕಾವಿ- ತ್ಯಾಗದ ಸಂಕೇತ, ತ್ಯಾಗವಿಲ್ಲದ ಸಂನಾಸವಿಲ್ಲ. ಸಂನ್ಯಾಸ ಮೋಕ್ಷ ಸಾಧನೆಗೆ ಸುಳಭ ಸಾಧನ, ಗೋವುಗಳು ಧರ್ಮದ ಸಂಕೇತ, ಔದುಂಬರ ವೃಕ್ಷ ಅಮೃತಮಯಿ ಔಷಧಿ ಶಕ್ತಿಯ ಸಂಕೇತ.
ಆನಂದದ, ಜ್ಞಾನದ, ಶಾಂತಸ್ಥಿತಿಯ ಮೂರ್ತ ರೂಪದಲ್ಲಿ ಕಾಣಿಸಿಕೊಳ್ಳುವವರೇ ಅವಧೂತರು. ಅವಧೂತರಿಗೆಲ್ಲ ಪರಮಗುರು ದತ್ತಾತ್ರೇಯ, ಅವಧೂತ ಎಂಬ ಅಕ್ಷರಗಳಿಗೆ ಸ್ವಾರಸ್ಯಕರವೂ ಆಳವೂ ಆದ ಅರ್ಥವಿದೆ ಅ ಎಂದರೆ ಆಶೆಗಳನದನು ಬಿಟ್ಟಿರುವುದು, ಆದಿ-ಮಧ್ಯ-ಅಂತ್ಯ ಎಂಬ ಎಣಿಕೆ ಇಲ್ಲದೇ ಶುಚಿಯಾಗಿರುವುದು; ಎಂದೂ ಆನಂದದಲ್ಲಿ ನೆಲೆಸಿರುವುದು. ವ ಎಂದರೆ ಹಿಂದಣ ವಾಸನೆಗಳೆಲ್ಲ ಬಿಟ್ಟು ಹೋಗಿರುವುದು; ಅವನ ಮಾತಿನಲ್ಲಿ ದೋಷವಾಗಲಿ, ಗೊಂದಲವಾಗಲಿ, ಉದ್ವೇಗವಾಗಲಿ ಇರದು. ಅವನು ಹಿಂದಣ, ಮುಂದಣ ಸಂದರ್ಭಗಳನ್ನು ಕೈಬಿಟ್ಟು ಈಗಣ ಕ್ಷಣದಲ್ಲಿ ಮಾತ್ರ ಇರುವನು. ಧೂ ಎಂದರೆ ಧೂಳಿನಿಂದ ಮುಚ್ಚಲ್ಪಟ್ಟ ದೇಹ, ತೊಳೆಯಲ್ಪಟ್ಟ ಮನಸ್ಸು, ಯಾವುದೊಂದು ಈತಿಬಾಧೆಯೂ ಇರದು; ಧ್ಯಾನಧಾರಣಗಳೆಂಬ ಯೋಗ ವಿಧಿಯಾಗಲಿ ಅವನಿಗೆ ಬೇಕಾದುದಿಲ್ಲ ತ ಎಂದರೆ ತತ್ವವನ್ನು ಕುರಿತದ್ದೇ ಚಿಂತೆ, ಉಳಿದಂತೆ ಯಾವ ಚಿಂತೆಯೂ ಇರದಿರುವುದು ತಮಸ್ಸೆಂಬ ಅಜ್ಞಾನವಿಲ್ಲದೆ, ನಾನು -ನನ್ನದೆಂಬ ಅಹಂಕಾರವಿಲ್ಲದಿರುವುದು. ಇಂಥ ಲಕ್ಷಣಗಳುಳ್ಳವನೇ ಅವಧೂತ; ಇಂತಹ ಲಕ್ಷಣ ಸಂಪನ್ನನಿಗಲ್ಲದೆ ಮತ್ತೆಂತಹವರಿಗೆ ತಾನೆ ಆನಂದದಲ್ಲಿ ನೆಲೆಸಲಾದೀತು? ಆನಂದದ ವಿಗ್ರಹ ರೂಪವೇ ದತ್ತಾತ್ರೇಯ.
ಅವಧೂತನನ್ನು ಒಂದೇ ಮಾತಿನಲ್ಲಿ ಹೇಳಬಹುದಾದರೆ ಅವನನ್ನು ಜ್ಞಾನಿ ಎನ್ನಬಹುದು. ಜ್ಞಾನಿ ಎಂದರೆ ಇಲ್ಲಿ ಆತ್ಮ/ಬ್ರಹ್ಮ ಜ್ಞಾನಿ ಎಂದಾಗಬಹುದು, ಇವನಿಗೆ ಆತ್ಮ ಅನಾತ್ಮಗಳ ವಿವೇಕವಿರುತ್ತದೆ. ಶಾಶ್ವತ ಅಶಾಶ್ವತಗಳ ಸಂವೇದನೆಯಿರುತ್ತದೆ. ಹೀಗೆಂದು ಇವನೇನು ಸಂನ್ಯಾಸಿಯೇ ಆಗಿರಬೇಕು, ಕಾಷಾಯ ವಸ್ತ್ರವನ್ನೇ ತೊಟ್ಟಿರಬೇಕು ಎಂದೇನಿಲ್ಲ. ಇವನು ಗೃಹಸ್ಥನು ಆಗಿರಬಹುದು, ಯತಿಯೂ ಆಗಿರಬಹುದು. ವಿದ್ವಾಂಸನೂ ಆಗಿರಬಹುದು. ಓದು ಬರಹಗಳ ಸೊಲ್ಲೆ ಇರದವನಾಗಿರಬಹುದು. ಎಲ್ಲರಂತೆ ಇವನು ಇಂದ್ರಿಯ ಸುಖವನ್ನು ಅನುಭವಿಸುತ್ತಾನೆ; ಎಲ್ಲರಂತೆ ಇವನೂ ನಗುತ್ತಾನೆ ಅಳುತ್ತಾನೆ ಆದರೆ ಇತರರಿಗೂ ಇವನಿಗೂ ಇರುವ ವ್ಯತ್ಯಾಸವೆಂದರೆ ಇವನು ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ; ಇವನಿಗೆ ನನ್ನದೆಂಬ ಮಮಕಾರವೂ ಇರುವುದಿಲ್ಲ, ನನ್ನದಲ್ಲವೆಂಬ ತಿರಸ್ಕಾರವೂ ಇರುವುದಿಲ್ಲ, ಇವನು ಸೂರ್ಯನ ಬೆಳಕಿನಂತೆ; ಇವನಿಗೆ ಪ್ರಪಂಚ ವ್ಯವಹಾರದ ಸೋಂಕು ಇರದು. ಸೂರ್ಯನ ಕಿರಣಗಳು ಕಮಲದ ಮೇಲೂ ಬೀಳುತ್ತದೆ. ಕೆಸರಿನ ಮೇಲೂ ಬೀಳುತ್ತದೆ ಆದರೆ ಅವನಿಗೆ ಕಮಲದ ಪಾವಿತ್ರ್ಯದ ಲೇಪವೂ ಇರದು, ಕೆಸರಿನ ಮಾಲಿನ್ಯದ ಲೇಪವೂ ಇರದು. ಒಂದರಿಂದ ಶುಚಿತ್ವವೂ ಇಲ್ಲ ಮತ್ತೊಂದರಿಂದ ಅಶುಚಿತ್ವವೂ ಇಲ್ಲ. ಎಲ್ಲ ವಿಧವಾದ ದ್ವೈತಭಾವಗಳನ್ನು ಕಳಚಿಕೊಂಡವನು ಅವಧೂತ.
ಮತ್ತೆ ದತ್ತಾತ್ರೇಯನನ್ನು ದಿಗಂಬರ ಎಂದೂ ಬಣ್ಣಿಸುವುದುಂಟು. ಇಲ್ಲೂ ಸ್ವಾರಸ್ಯವಿದೆ ದಿಗಂಬರ ಎಂಬುದರ ಅರ್ಥವ್ಯಾಪ್ತಿ ವಿಶಾಲವಾದುದು. ದಿಕ್ಕುಗಳನ್ನೇ ಬಟ್ಟೆಯನ್ನಾಗಿ ಉಳ್ಳವನು, ಧರಿಸಿದವನು ದಿಗಂಬರ, ಎಂದರೆ ಎಲ್ಲೆಲ್ಲೂ ಹರಡಿಕೊಂಡಿರುವ ದತ್ತಾತ್ರೇಯ ತತ್ವವಾದ ಜ್ಞಾನಾನಂದದ ವ್ಯಾಪಕತೆಯನ್ನು ಇದು ಸಂಕೇತಿಸುತ್ತದೆ. ಹೀಗೆ ದತ್ತಾತ್ರೇಯನ ಕಲ್ಪನೆಯಲ್ಲಿ ಸೃಷ್ಠಿ ರಹಸ್ಯಗಳು ಬದುಕಿನ ಸ್ವಾರಸ್ಯಗಳೂ ಬೆರೆತುಕೊಂಡಿದೆ. ಇವುಗಳ ದರ್ಶನವೇ ನಮ್ಮ ಒಡಲ ಒಳಿತಿಗೆ ದಿಕ್ಕು, ಬೆಳಕು.
ಶ್ರೀದತ್ತ ಉಪಾಸನೆಯಲ್ಲಿ ಪವಿತ್ರ ಪಾದುಕೆಗಳ ಪೂಜೆಗೆ ಮಹತ್ವವಿದೆ. ಕಲಿಯುಗದಲ್ಲಿ ಶ್ರೀದತ್ತಾತ್ರೇಯನ ಪರಂಪರೆಯು ಪ್ರಭಾವಿಯಾಗಿ ಗೋಚರಿಸುತ್ತದೆ. ಮಹಾರಾಷ್ಟ್ರ, ಆಂಧ್ರ ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಿರುವ ಗುರುಚರಿತ್ರೆ ಮತ್ತು ಪರಂಪರಾಗತವಾದ ಕಥೆಗಳಿಂದ ದತ್ತಾತ್ರೇಯನು ಮತ್ತೆರಡು ಅವತಾರಗಳೆತ್ತಿ ಭಕ್ತೋದ್ಧಾರ ಮಾಡಿದನೆಂದು ತಿಳಿದು ಬರುತ್ತದೆ.
ಮೊದಲನೆಯ ಅವತಾರವಾದ ಶ್ರೀಪಾದವಲ್ಲಭರು ಎರಡನೆಯ ಅವತಾರವಾದ ಶ್ರೀನೃಸಿಂಹ ಸರಸ್ವತಿಗಳ ಮೊದಲಾದವರಿಂದ ಆಧುನಿಕ ಕಾಲದಲ್ಲಿ ದತ್ತ ಸಂಪ್ರದಾಯ ವಿಕಾಸ ಉಂಟಾಯಿತೆನ್ನಬಹುದು. ಉಪಾಸನೆ ಮತ್ತು ಸದ್ಗುಣಗಳ ಬಗ್ಗೆ ಅಪಾರ ಶ್ರದ್ಧೆಯೇ ನಿರ್ಭಯತೆಯ ಅಡಿಪಾಯ ಎಂಬ ಭಾವನೆಯ ಜಾಗೃತಿ ಈ ಪಂಥದ ಧ್ಯೇಯ.
ಮೂರನೆಯವರಾದ ಶ್ರೀ ಟೇಂಬೇ ಮಹಾರಾಜರು ದೇವವಾಣಿಯಲ್ಲಿ 6721 ಶ್ಲೋಕಾತ್ಮವಾದ ಗುರು ಚರಿತ್ರೆಯನ್ನು ರಚಿಸಿದರು. ಈ ಗುರು ಚರಿತ್ರೆಯೇ ಅಕ್ಷರಾತ್ಮಕ ಗುರುವಾಗಿ ಲೋಕಸಂಚಾರ ಮಾಡುತ್ತ ಜನಮನವನ್ನು ಪಾವನಗೊಳಿಸುತ್ತದೆ. ದತ್ತಾತ್ರೇಯನ ಅವತಾರವಾದ ಶ್ರೀಪಾದಾದಿ ಗುರುತ್ರಯರು ನಿಂತಲ್ಲಿ, ಕುಳಿತಲ್ಲಿ, ನಡೆದಲ್ಲಿ ಗುರು ದತ್ತ ಕ್ಷೇತ್ರಗಳು ಒಡಮೂಡಿ ನಿಂತಿವೆ.
ದತ್ತ ಕ್ಷೇತ್ರಗಳಲ್ಲೊಂದಾದ ಚಿಕ್ಕಮಗಳೂರಿನ ಬಾಬಾಬುಡಾನ್ ಗಿರಿ ಮತ್ತು ಶ್ರೀನೃಸಿಂಹ ಸರಸ್ವತಿಗಳ ವಾಸ ಸ್ಥಳವಾಗಿದ್ದ ಗಾಣಾಗಪುರ (ಗುಲ್ಬರ್ಗಾ ಜಿಲ್ಲೆ)ಗಳಲ್ಲಿ ಮುಸ್ಲಿಮರಾದಿಯಾಗಿ ಸಕಲ ಧರ್ಮೀಯರೂ ದತ್ತನ ಪೂಜಾದಿಗಳನ್ನು ಮಾಡುವುದನ್ನು ಇಂದಿಗೂ ಕಾಣಬಹುದು. ಹೀಗೆ ದತ್ತ ಸರ್ವಧರ್ಮಗಳ ಸಮನ್ವಯ ಪ್ರತೀಕವೂ ಹೌದು. ಭಗವಾನ್ ಶ್ರೀಧರ ಸ್ವಾಮಿಗಳೇ ಮೊದಲಾದ ಸಾಧು ಶ್ರೇಷ್ಠರು ಈ ದತ್ತ ಜಯಂತಿ ಉತ್ಸವವನ್ನು ವಿಶೇಷವಾಗಿ ಪ್ರಚಾರಕ್ಕೆ ತಂದಿದ್ದಾರೆ. ಶಿವಮೊಗ್ಗೆ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶೀಗೆಹಳ್ಳಿ, ಗೋರೆ, ರಾಮತೀರ್ಥ ಮುಂತಾದ ಕ್ಷೇತ್ರಗಳಲ್ಲಿ ದತ್ತಜಯಂತಿ ಅದ್ದೂರಿಯಾಗಿ ನಡೆಯುತ್ತದೆ. ದತ್ತ ಕ್ಷೇತ್ರಗಳಲ್ಲೆಲ್ಲಾ ಅಖಂಡ ಭಜನೆ, ನಾಮಸಂಕೀರ್ತನೆಗಳು ನಡೆಯುತ್ತವೆ. ಅನೇಕ ದತ್ತ ಕ್ಷೇತ್ರಗಳಲ್ಲಿ ವೈದಿಕ ಪಾಠಶಾಲೆಗಳಿರುವುದು ಇನ್ನೊಂದು ವಿಶೇಷ!
ದತ್ತನ ಪರಮ ಭಕ್ತರೂ ಸಾಧಕರೂ ಆಗಿದ್ದ ಮೈಸೂರಿನ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ದತ್ತಾತ್ರೇಯ ಎಂಬ ಗ್ರಂಥರತ್ನವೊಂದನ್ನು ರಚಿಸಿದ್ದಾರೆ. ದತ್ತಾವತಾರದ ಸಂಕೇತ ಸಂದೇಶಗಳನ್ನು ಚಿತ್ರಿಸಿರುವ ಈ ಗ್ರಂಥದಲ್ಲಿ ದತ್ತಾತ್ರೇಯ ವಿರಚಿತ ಜೀವನ್ಮುಕ್ತ ಗೀತ ಮತ್ತು ಅವಧೂತ ಗೀತೆಗಳ ವ್ಯಾಖ್ಯಾನವೂ ಇದೆ. ಪ್ರತಿ ಮಾನವನ ಉದ್ದಾರವೂ ಯಾವ ಸತ್ಯ ದರ್ಶನದಿಂದ ಮತ್ತು ಯಾವ ತಿಳಿವಿನಿಂದ ಸಾಧ್ಯವೋ ಅದೇ ದತ್ತಾತ್ರೇಯ, ದತ್ತಾತ್ರೇಯ ಅಂತಹ ಸತ್ಯ ಮಾತ್ರ, ತಿಳಿವು ಮಾತ್ರವಲ್ಲ ಅದನ್ನರಿಯಲು ಮಾರ್ಗದರ್ಶನ ಮಾಡಬಲ್ಲ ಗುರುವೂ ಹೌದು ಅರ್ಥಾತ್ ಅವನೇ ಗುರಿ ಮತ್ತು ಗಮ್ಯ ಎಂಬ ತತ್ವ ಈ ಗ್ರಂಥದಲ್ಲಿ ಪ್ರತಿಪಾದಿಸಲ್ಪಟ್ಟಿದೆ.
Get in Touch With Us info@kalpa.news Whatsapp: 9481252093
Discussion about this post