ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಪಿಎಸ್ಐ ಅಕ್ರಮ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತಂದು ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು Home Minister Araga Gnanendra ಗುಡುಗಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಇಂದು ನೂತನವಾಗಿ ನಿರ್ಮಿಸಲಾದ ನಿಪ್ಪಾಣಿ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣೆ ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಿಎಸ್ಐ ಹಗರಣದ ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲದೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಹತಾಶರಾಗಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಸಿಐಡಿ ತನಿಖೆಗೆ ವಹಿಸಲಾದ ಹಲವಾರು ದೂರುಗಳ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ, ಎಫ್ಐಆರ್ ಆದ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ, ಆದರೆ ಪ್ರಾಮಾಣಿಕವಾಗಿ ತನಿಖೆ ಆಗುತ್ತಿರುವ PSI ವಿಷಯದಲ್ಲಿ ನಮ್ಮ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಎಂದರು.
Also read: ಭದ್ರಾವತಿ: ಬಿಜೆಪಿ ಮಂಡಲ ನೂತನ ಅಧ್ಯಕ್ಷರಾಗಿ ಧರ್ಮಪ್ರಸಾದ್ ಆಯ್ಕೆ
ಬಿಜೆಪಿ ವಿರೋಧ ಪಕ್ಷವಾಗಿ ಕಡ್ಲೆಪುರಿ ತಿನ್ನುತ್ತಾ ಇದ್ದರಾ? ಎಂದ ಸಿದ್ದರಾಮಯ್ಯನವರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು, ನಾವು ಕೇಳಿದ್ದೆವು, ಆದರೆ ಅವರು ಸ್ಪಂದಿಸಿರಲಿಲ್ಲ”. ನಾವುಗಳು ಕೇಳದೇ ಇರುವುದನ್ನು, ಅವರು (ಸಿದ್ದರಾಮಯ್ಯ) ಕೇಸುಗಳನ್ನು ಮುಚ್ಚಿ ಹಾಕುವುದಕ್ಕೆ ಸಿಕ್ಕಿದ ಪರವಾನಿಗೆ ಎಂದು ತಿಳಿದಿದ್ದರೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಸಿಐಡಿ ತನಿಖೆಯ ಹಳಿ ತಪ್ಪಿಸಿ, ಭ್ರಷ್ಟರ ರಕ್ಷಣೆಗೆ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಹಾಗೂ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ?” ಎಂದು ಸಚಿವರು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post