ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
KIADB 2016–17ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿದ್ದರೂ, ಮೂಲಸೌಕರ್ಯ ಒದಗಿಸದೇ ಮತ್ತು ಪರಿಸರ ಅನುಮತಿ ಪಡೆಯದೇ ಕೈಗಾರಿಕೋದ್ಯಮಿಗಳನ್ನು ವರ್ಷಗಳ ಕಾಲ ಕಾಯುವಂತೆ ಮಾಡಿರುವುದು ದುರಂತಕರವಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಸ್ಥಾಪಿತವಾಗಿರುವ KIADB ಇಂದು ಕೈಗಾರಿಕೆಗಳ ಬದಲಾಗಿ ರಿಯಲ್ ಎಸ್ಟೇಟ್ ಏಜೆಂಟ್‌ಗಳ #Real estate agent ಅಡ್ಡೆಯಾಗಿದೆ ಎಂದು ಡಿ.ಎಸ್. ಅರುಣ್ #D S Arun ಕಿಡಿಕಾರಿದರು.
ವಿಧಾನಪರಿಷತ್ ಅಧಿವೇಶನದಲ್ಲಿ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ವಿಳಂಬ ಹಾಗೂ ಪರಿಸರ ಅನುಮತಿ ಇಲ್ಲದ ಸಮಸ್ಯೆಯನ್ನು ಗಂಭೀರವಾಗಿ ಸದನದ ಗಮನಕ್ಕೆ ತಂದರು.
ಒಟ್ಟು 250 ಎಕರೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ 180 ಕೈಗಾರಿಕೋದ್ಯಮಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ; ಕಾರ್ಯಾರಂಭ ಮಾಡಿದ 20 ಘಟಕಗಳಿಗೂ ಪರಿಸರ ಅನುಮತಿ ದೊರೆತಿಲ್ಲ, ಇದರಿಂದ ಕಳೆದ 10 ವರ್ಷಗಳಿಂದ ಕೈಗಾರಿಕೋದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ವಿವರಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪರಿಸರ ಅನುಮತಿ ಶೀಘ್ರ ನೀಡುವುದು ಸರ್ಕಾರದ ಹೊಣೆಗಾರಿಕೆ ಎಂದು ಉಲ್ಲೇಖಿಸಿದ ಡಿ.ಎಸ್. ಅರುಣ್, ಈಗಾಗಲೇ ಕಾರ್ಯಾರಂಭಿಸಿರುವ ಕೈಗಾರಿಕೆಗಳ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉದ್ಯಮ ಸಚಿವ ಎಂ.ಬಿ. ಪಾಟೀಲ್, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ಅನುಮತಿ ಶೀಘ್ರ ನೀಡಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















