ಅಥಣಿ: ನೀವು ದಾರಿ ತಪ್ಪಿದ ಮಗ ಸಿನೆಮಾ ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಆದರೆ, ಇಲ್ಲೊಬ್ಬ ಗುತ್ತಿಗೆದಾರ ತನ್ನ ರಸ್ತೆ ಕಾಮಗಾರಿ ದಾರಿಯನ್ನೇ ತಪ್ಪಿ ಕಾಮಗಾರಿ ಮಾಡಿ ಮುಗಿಸಿದ್ದಾನೆ.
ರಸ್ತೆ ಮಧ್ಯೆ ವಿದ್ಯುತ್ ಕಂಬವನ್ನು ಲೆಕ್ಕಿಸದೆ ಗುತ್ತಿಗೆದಾರ ಕಾಮಗಾರಿ ಮಾಡಿ ಮುಗಿಸಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತ್’ಗೆ ಒಳಪಡುವ ಕೋನನವಾಡಿಯಿಂದ ಕಲ್ಲಾಳದವರೆಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು, ರಸ್ತೆ ಮಧ್ಯೆದಲ್ಲಿ ವಿದ್ಯುತ್ ಕಂಬವನ್ನು ಲೆಕ್ಕಿಸದೆ ರಸ್ತೆ ಕಾಮಗಾರಿ ಮಾಡಿ ಮುಗಿಸಿದ್ದಾನೆ.
ಈ ರಸ್ತೆ ಕಾಮಗಾರಿ ಅಪಹಾಸ್ಯಕ್ಕೀಡಾಗಿದ್ದು, ಗುತ್ತಿಗೆದಾರನಿಗೊಂದು ಸಲಾಂ ಎಂದು ಬರೆದ ಪೋಸ್ಟ್ ಈಗ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಸಂಬಂಧ ಅಧಿಕಾರಿಗಳಿಗೆ ತಿಳಿಸಿದರೆ, ಅವರು ತಮಗೆ ಸಂಬಂಧಿಸಿಲ್ಲ ಎಂದು ಉತ್ತರ ಕೊಡುತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಸ್ತೆ ಕಾಮಗಾರಿ ಕೂಡ ಕಳಪೆ ಮಟ್ಟದ್ದಾಗಿದ್ದು, ರಸ್ತೆ ಮಧ್ಯೆ ವಿದ್ಯುತ್ ಕಂಬ ಇರುವುದರಿಂದ ರಾತ್ರಿ ಅಪಘಾತ ಆಗುವ ಸಂಭವ ಹೆಚ್ಚಿದೆ.
ಹೊಸದಾಗಿ ಈ ದಾರಿಯಲ್ಲಿ ಬರುವ ಪ್ರಯಾಣಿಕರಿಗೆ ಅಪಘಾತ ಸಂಭವಿಸೋದು ಖಚಿತ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತು ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬವನ್ನ ತೆರವು ಇಲ್ಲವೇ ವಿದ್ಯುತ್ ಕಂಬದ ಬದಿಯಿಂದ ರಸ್ತೆ ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
Discussion about this post