ಕಲ್ಪ ಮೀಡಿಯಾ ಹೌಸ್
ಬಳ್ಳಾರಿ: ಸ್ವಚ್ಛ ಭಾರತ ಮಿಷನ್(ಗ್ರಾಮೀಣ)ಯೋಜನೆ ಅಡಿಯಲ್ಲಿ ಗ್ರಾಪಂಗಳಿಗೆ ಖರೀದಿಸಲಾದ ಕಸ ವಿಲೇವಾರಿ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿತರಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 50ಗ್ರಾಪಂಗಳಿಗೆ ಕಸ ವಿಲೇವಾರಿ ವಾಹನಗಳನ್ನು ಸಚಿವ ಈಶ್ವರಪ್ಪ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ಅವರು ಸ್ವಚ್ಛ ಭಾರತ ಮಿಶನ್ ಅಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳು ಪ್ರಾರಂಭವಾಗಿವೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಒಟ್ಟು 237 ಗ್ರಾಮ ಪಂಚಾಯತಿಗಳಲ್ಲಿ ಘನ ಮತ್ತು ದ್ರವತ್ಯಾಜ್ಯ ನಿರ್ವಹಣಾ ಕ್ರಿಯಾ ಯೋಜನೆಯನ್ನು ಅನುಮೋದನೆ ಪಡೆಯಲಾಗಿದೆ.
ಇಂದಿನ 50ವಾಹನಗಳು ಸೇರಿ ಇದುವರೆಗೆ 172ಗ್ರಾಪಂಗಳಿಗೆ ಇನ್ನೂಳಿದ ಗ್ರಾಪಂಗಳಿಗೂ ಶೀಘ್ರ 8-10ದಿನಗಳಲ್ಲಿ ವಾಹನಗಳನ್ನು ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸದ್ಯ ಗ್ರಾಪಂಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯೂ 2ನೇ ಸ್ಥಾನದಲ್ಲಿದ್ದು, ಕೊಡಗು ಮೊದಲ ಜಿಲ್ಲೆಯಾಗಿದೆ. ಶೀಘ್ರದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಜಿಲ್ಲೆಯಾಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಮಾರ್ಗಸೂಚಿ ಪ್ರಕಾರ ಪ್ರತಿ ಗ್ರಾಮ ಪಂಚಾಯತಿಗೆ ಸರಾಸರಿ ರೂ.20 ಲಕ್ಷಗಳವರೆಗೆ ಸರ್ಕಾರದಿಂದ ನೀಡಲಾಗಿದೆ, ಅದರಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ, ಸಂಗ್ರಹಣ ವಾಹನ ಖರೀದಿಗೆ, ಮನೆ ಮನೆ ಕಸ ಬುಟ್ಟಿ ವಿತರಣೆಗೆ, ಹಾಗೂ ಕಸ ಸಂಗ್ರಹಕರಿಗೆ ವಿವಿಧ ರೀತಿಯ ಸುರಕ್ಷಿತ ಪರಿಕರಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, ಓಐಖಒ ಯೋಜನೆಯಡಿ ತರಬೇತಿಗಾಗಿ, 14ನೇ ಹಣಕಾಸು ಯೋಜನೆಯಡಿ ಹಾಗೂ ಗ್ರಾಮ ಪಂಚಾಯತಿ ಇತರ ಅನುದಾನವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಸುರಕ್ಷಿತ ಕಸ ಸಂಗ್ರಹಣೆಗೆ ಹೆಚ್ಚಿನ ಆಸಕ್ತಿ ತೋರಿಸಲಾಗುತ್ತಿದೆ ಎಂದರು.
ಮಾರ್ಗಸೂಚಿ-2 ಪ್ರಕಾರ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ಪ್ರತಿ ಗ್ರಾಮಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಘನ ತ್ಯಾಜ್ಯ ನಿರ್ವಹಣೆಗೆ 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ ರೂ.60ರಂತೆ, 5ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ ರೂ.45ಗಳಂತೆ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಗೆ 5ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ ರೂ.280ರಂತೆ, 5ಸಾವಿರ ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ ರೂ.660ಗಳಂತೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಭರಿಸಲಾಗಿದ್ದು ಶೇ. 30ರಷ್ಟು ಅನುದಾನವನ್ನು 15 ಹಣಕಾಸು ಯೋಜನೆಯಡಿ ಭರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಗ್ರಾಮಗಳಲ್ಲಿ ಇಳಿಕೆಯತ್ತ ಸೊಂಕು: ಕೋವಿಡ್‍ಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ ಹಾಗೂ ಗ್ರಾಮೀಣ ಟಾಸ್ಕ್‍ಫೋರ್ಸ್ ಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದರ ಪರಿಣಾಮ ಆರಂಭಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿದ್ದ ಕೊರೊನಾ ಸೊಂಕು ದಿನೇದಿನೇ ಇಳಿಕೆಯಾಗುತ್ತಿದೆ ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಲ, ಶಾಸಕರಾದ ಕರುಣಾಕರರೆಡ್ಡಿ, ಸೋಮಶೇಖರ್ ರೆಡ್ಡಿ, ಕೆ.ಸಿ.ಕೊಂಡಯ್ಯ, ಬಿ.ನಾಗೇಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್, ಜಿಪಂ ಯೋಜನಾಧಿಕಾರಿ ಜಾನಕಿರಾಂ ಸೇರಿದಂತೆ ಅನೇಕರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post