ಶಿವಮೊಗ್ಗ: ರಾಮೋತ್ಸವದ ಅಂಗವಾಗಿ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ಎಂ ರಾಘವೇಂದ್ರ ಅವರ ಗಾನಮಾಧುರ್ಯಕ್ಕೆ ಮಲೆನಾಡು ಭಕ್ತಸಮೂಹ ಮನಸೋತಿತು.
ಶ್ರೀಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಘವೇಂದ್ರ ಅವರ ಶಾಸ್ತ್ರೀಯ ಹಾಡುಗಾರಿಕೆಗೆ ವಿದ್ವಾನ್ ವೈಭವ್ ರಮಣಿ ಪಿಟೀಲಿನಲ್ಲಿ, ವಿ.ಪಲ್ಲವಂ ರವಿ ಮೃದಂಗದಲ್ಲಿ, ವಿ.ಎಸ್.ವಿ. ಬಾಲಕೃಷ್ಣ ಮೋರ್ಸಿಂಗ್’ನಲ್ಲಿ ಸಾಥ್ ನೀಡಿದ್ದರು. ಕಾರ್ಯಕ್ರಮದ ನಂತರ ರಾಘವೇಂದ್ರ ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ಲೇಖ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಳ್ಳಾರಿ ರಾಘವೇಂದ್ರರ ಕಿರು ಪರಿಚಯ:
ಇವರ ತಂದೆ ಕೀರ್ತಿಶೇಷ ವೆಂಕಟೇಶಾಚಾರ್ ಮತ್ತು ಚಿಕ್ಕಪ್ಪನವರಾದ ಕೀರ್ತಿಶೇಷ ಶೇಷಗಿರಿ ಆಚಾರ್ ಅವರು ಸಂಗೀತ ಹಾಡುಗಾರಿಕೆ ಕ್ಷೇತ್ರದಲ್ಲಿ
ಬಳ್ಳಾರಿ ಬ್ರದರ್ಸ್ ಎಂದೇ ಖ್ಯಾತರಾಗಿದ್ದರು.
ಆಕಾಶವಾಣಿಯಲ್ಲಿ ಸಂಗೀತ ವಿಭಾಗದಲ್ಲಿ ಸಂಗೀತ ಹಾಡುಗಾರರಾಗಿ ಸೇವೆ ಸಲ್ಲಿಸಿರುವ ರಾಘವೇಂದ್ರ ಅವರು, ನಂತರ ಕಾರ್ಯಕ್ರಮ ನಿರ್ವಾಹಕರಾಗಿ ಯಪಿಎಸ್’ಸಿ ಮೂಲಕ ನೇಮಕಾತಿ ಪಡೆದರು.
ಸೇವಾ ಜ್ಯೇಷ್ಠತೆಯ ಮೇಲೆ ಸಹಾಯಕ ನಿರ್ದೇಶಕರಾಗಿ ಮಡಿಕೇರಿ ಬಾನುಲಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ವಿಶ್ರಾಂತರಾಗಿದ್ದಾರೆ.
ಆಕಾಶವಾಣಿಯಲ್ಲಿ ಸಂಗೀತ ವಿಭಾಗವನ್ನು ಸಮರ್ಥವಾಗಿ ನಿರ್ವಹಿಸಿ ಶ್ರೋತೃಗಳ ಮೆಚ್ಚುಗೆ ಪಡೆದಿದ್ದಾರೆ. ಆಕಾಶವಾಣಿಯ ಎ ಶ್ರೇಣಿ ಪಡೆದಿರುವ ಹಾಡುಗಾರರಾಗಿದ್ದು, ಪ್ರತೀವರ್ಷ ಆಕಾಶವಾಣಿ ಏರ್ಪಡಿಸುವ ರಾಷ್ಟ್ರೀಯ ಸಂಗೀತ ಸಮ್ಮೇಳನದ ಅಂಗವಾಗಿ ಕೊಯಮತ್ತೂರಿನಲ್ಲಿ ಸಂಗೀತ ಕಚೇರಿ ಪ್ರಸ್ತುತ ಪಡಿಸಿದ್ದಾರೆ. ಆಕಾಶವಾಣಿಯಲ್ಲಿ ಸಂಗೀತ ಅಭಿರುಚಿ ಬೆಳೆಸುವ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post