ಕಲ್ಪ ಮೀಡಿಯಾ ಹೌಸ್ | ಬೇಲೂರು |
ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿಯ Beluru Channakeshawa swamy ಅದ್ಧೂರಿ ಬ್ರಹ್ಮ ರಥೋತ್ಸವ ಇಂದು ನೆರವೇರಿತು.
ಕೊರೋನಾ Corona ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರಥೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆದಿದ್ದು, ಇಂದು ನಸುಕಿನಿಂದಲೇ ಮೂಲದೇವತೆಗೆ ಅಭಿಷೇಕ, ಅಲಂಕಾರ ನಡೆಸಲಾಯಿತು. ಅನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ, ದೇವಾಲಯದ ಪ್ರಾಂಗಣ ಹಾಗೂ ರಾಜಬೀದಿ ಉತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.
ನಂತರ ದೇವರ ಮೂರ್ತಿಯನ್ನು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ನಂತರ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಬ್ರಹ್ಮರಥವನ್ನು ದೇವಾಲಯದ ಬಲಭಾಗದವರೆಗೂ ಎಳೆದು ನಿಲ್ಲಿಸಲಾಯಿತು. ಇದರೊಂದಿಗೆ ಇಂದಿನ ರಥೋತ್ಸವ ಸಂಪನ್ನಗೊಂಡಿದ್ದು, ನಾಳೆ ಪೂರ್ಣವಾಗಿ ರಥವನ್ನು ಎಳೆಯಲಾಗುತ್ತದೆ.
Also read: ಪಾರ್ಕಿಂಗ್ ಅವ್ಯವಸ್ಥೆಯಿಂದ ಸಂಚಾರ ಅಸ್ತವ್ಯಸ್ತ: ಸಾರ್ವಜನಿಕರ ಬವಣೆ ಕೇಳುವವರ್‍ಯಾರು?
ಹರಿದುಬಂದ ಜನಸಾಗರ:
ಕೋವಿಡ್ ಕರಿನೆರಳಿನಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರಥೋತ್ಸವ ಈ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಬಾರಿಗಿಂತಲೂ ಈ ವರ್ಷ ದೇಶವಿದೇಶಗಳಿಂದ ಹೆಚ್ಚಿನ ಜನರು ಆಗಮಿಸಿದ್ದರು. ನಸುಕಿನಿಂದಲೇ ಸಾಲುಗಟ್ಟಿದ್ದ ಜನರು ದೇವರ ದರ್ಶನ ಪಡೆದರು. ರಥೋತ್ಸವದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಗರುಡೋತ್ಸವವನ್ನು ಎಂದಿಗಿಂತಲೂ ಅದ್ಧೂರಿಯಾಗಿಯೇ ಆಚರಿಸಲಾಯಿತು.
ಪ್ರದಕ್ಷಿಣೆ ಹಾಕಿದ ಗರುಡ:
ಆದಿ ಕಾಲದಿಂದಲೂ ಇಲ್ಲಿನ ರಥೋತ್ಸವದ ಮುಹೂರ್ತದ ಸಮಯಕ್ಕೆ ಸರಿಯಾಗಿ ಗರುಡ ಕಾಣಿಸಿಕೊಳ್ಳುತ್ತಿದೆ. ಅದರಂತೆಯೇ ಈ ವರ್ಷವೂ ಸರಿಯಾಗಿ ಮುಹೂರ್ತದ ವೇಳೆ ಕಾಣಿಸಿಕೊಂಡ ಗರುಡ ಬ್ರಹ್ಮರಥಕ್ಕೆ ಮೂರು ಪ್ರಕಕ್ಷಿಣೆ ಹಾಕಿದ್ದು, ಒಂದು ರೀತಿಯಲ್ಲಿ ಪವಾಡದಂತೆಯೇ ಭಾಸವಾಗಿತ್ತು.
ಮೋಡ ಕವಿದ ವಾತಾವರಣ: ನಿಟ್ಟುಸಿರು ಬಿಟ್ಟ ಭಕ್ತರು
ಸಾಮಾನ್ಯವಾಗಿ ಪ್ರತಿವರ್ಷ ಇಲ್ಲಿನ ರಥೋತ್ಸವದ ವೇಳೆ ಬಿಸಿಲಬೇಗೆ ಭಕ್ತರನ್ನು ಕಾಡುತ್ತದೆ. ಆದರೆ, ಈ ಬಾರಿ ಬಿಸಿಲು ಕಾಣದೆ ಸಂಪೂರ್ಣ ಮೋಡ ಮುಸುಕಿದ ವಾತಾವರಣವಿದ್ದು, ಸೂರ್ಯನ ಜಳ ಹಾಗೂ ಸೆಕೆ ಇಲ್ಲದೆ ಭಕ್ತರು ಸಂಭ್ರಮದಿಂದ ರಥೋತ್ಸವದಲ್ಲಿ ಪಾಲ್ಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post