ಕಲ್ಪ ಮೀಡಿಯಾ ಹೌಸ್ | ಬೇಲೂರು, ಹಾಸನ ಜಿಲ್ಲೆ | ರಘುನಂದನ್ ಎಸ್.ಎ
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಪ್ರರ ಸಂಘಟನೆ ವಿಕಾಸ ವೇದಿಕೆ ವತಿಯಿಂದ ಆಯೋಜಿಸಿದ್ದ “ಬೇಲೂರು ಹಬ್ಬ – 2025” ಕಾರ್ಯಕ್ರಮವು ಸಾಂಸ್ಕೃತಿಕ ಮೆರುಗು ಹಾಗೂ ಗಹನ ಚರ್ಚೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ಸಮಾಜದ ಸವಾಲುಗಳು ಮತ್ತು ಮಾಧ್ಯಮ ಕ್ಷೇತ್ರದ ಪಾತ್ರದ ಕುರಿತು ಇಲ್ಲಿ ಬೆಳಕು ಚೆಲ್ಲಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಹಿಂದೂ ಧರ್ಮ ಮತ್ತು ಬ್ರಾಹ್ಮಣ ಸಮುದಾಯಗಳನ್ನು ಹೀಗಳೆಯುವ ಇತ್ತೀಚಿನ ಪ್ರವೃತ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. “ದಸರಾ ಮಾಡಬೇಕು ಎಂದರೆ ಮಹಿಷ ದಸರಾ ಮಾಡಬೇಕು ಎನ್ನುತ್ತಾರೆ” ಎಂಬ ಹೇಳಿಕೆಗಳನ್ನು ಪ್ರಸ್ತಾಪಿಸಿ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಚಿಂತಕ ಭಗವಾನ್ ಅವರ ಸನಾತನ ಧರ್ಮ ಹಾಗೂ ಬ್ರಾಹ್ಮಣರ ಕುರಿತ ಹೇಳಿಕೆಗಳನ್ನು ಬಲವಾಗಿ ಖಂಡಿಸಿದರು. ಶಿಕ್ಷಣದೊಂದಿಗೆ ಸಂಸ್ಕಾರದ ಮಹತ್ವವನ್ನು ಒತ್ತಿ ಹೇಳಿದ ಅವರು, ಬ್ರಾಹ್ಮಣ ಪತ್ರಕರ್ತರ ಮೇಲಿನ ಸವಾಲುಗಳತ್ತಲೂ ಗಮನ ಸೆಳೆದರು.
ವಿಕಾಸ ವೇದಿಕೆಯ ಅಧ್ಯಕ್ಷ ಶ್ರೀನಾಥ್ ಜೋಶಿ, 2017ರವರೆಗೆ ಅಸಂಘಟಿತರಾಗಿದ್ದ ಬ್ರಾಹ್ಮಣ ಪತ್ರಕರ್ತರು ‘ವಿಕಾಸ’ (ವಿಪ್ರ ಪತ್ರಕರ್ತರ ಸಂಘ) ಮೂಲಕ ಸಂಘಟಿತರಾದ ಬಗೆಯನ್ನು ವಿವರಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ, ಯುವ ಪತ್ರಕರ್ತರಿಗೆ ಮಾರ್ಗದರ್ಶನ ಹಾಗೂ ಮಾಧ್ಯಮದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಈ ವೇಳೆ ‘ವಿಕಾಸ ಮಹಿಳಾ ವೇದಿಕೆ’ ಸ್ಥಾಪನೆಯನ್ನೂ ಘೋಷಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸ್ಪೂರ್ತಿ ಎಸ್. ಅವರ ಕಥಕ್ ನೃತ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹನುಮೇಶ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡಪ್ರಭ ಪ್ರಸಾರಣ ವಿಭಾಗದ ಮುಖ್ಯಸ್ಥರಾದ ಅನಂತಮೂರ್ತಿ, ಜನಮಿತ್ರ ಪತ್ರಿಕೆಯ ಗಿರಿಜಾ ಶಂಕರ್, ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷರು, ಬೇಲೂರು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ರಘುನಾಥ್, ಸುಬ್ರಮಣ್ಯ, ವಿಜಯ್ ಕೇಶವ್, ಮಂಜುನಾಧ ಮೂರ್ತಿ. ಕೆಪಿಎಸ್ ಪ್ರಮೋದ್ ಸೇರಿದಂತೆ ಹಲವು ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಪ್ರ ವಾರ್ತೆ ಡಿಜಿಟಲ್ ಮೀಡಿಯಾ ಎಂಬ ಹೊಸ ಡಿಜಿಟಲ್ ಮಾಧ್ಯಮ ಉದ್ಘಾಟನೆಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post