ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ನಮಃ
ಎರಡನೆಯ ಮಂತ್ರಾಲಯ ಎಂದು ಪ್ರಸಿದ್ಧಿ ಹೊಂದಿದ ಬೆಂಗಳೂರಿನ ಜಯನಗರದ ಐದನೆಯ ಬಡಾವಣೆಯಲ್ಲಿರುವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ 349 ಆರಾಧನಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶ್ರೀಮಠದ ಪ್ರಧಾನ ಪುರೋಹಿತರಾದ ನಂದಕಿಶೋರ್ ಆಚಾರ್ ಇವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಲೋಕಾಭಿರಾಮವಾಗಿ ಮಾತುಕತೆ ನಡೆಸಿದ್ದು, ಈ ಕುರಿತಾಗಿ ಲೇಖನ ಇಲ್ಲಿದೆ.
ಕಲ್ಪ ನ್ಯೂಸ್: ಶ್ರೀ ಮಠದ ಹಿನ್ನೆಲೆ?
ನಂದಕಿಶೋರ್ ಆಚಾರ್: ಶ್ರೀಸುಯಮೀಂದ್ರ ತೀರ್ಥ ಶ್ರೀಪಾದಂಗಳವರ ಕಾಲದಲ್ಲಿ ಮಂಜೂರಾಗಿದ್ದ ಸ್ಥಳದಲ್ಲಿ ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರ ಮಾರ್ಗದರ್ಶನದಲ್ಲಿ 1982 ರಲ್ಲಿ ಕಟ್ಟಡ ಸಿದ್ಧವಾಯಿತು.
ಕಲ್ಪ ನ್ಯೂಸ್: ಬೆಂಗಳೂರಿಗೆ ದಿಗ್ವಿಜಯ?
ನಂದಕಿಶೋರ್ ಆಚಾರ್: 1983 ರ ಮೇ 4 ಅಕ್ಷಯ ತೃತೀಯ ದಿನದಂದು ಶ್ರೀಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಗಾಗಿ ಸಕಲವೂ ವ್ಯವಸ್ಥೆಯನ್ನು ಮಾಡಿದ್ದರು. 2-5-1983ರ ಸಂಜೆ ಸುಜಯೀಂದ್ರ ತೀರ್ಥ ಪಾದಂಗಳವರು ಶ್ರೀಗುರುರಾಜರ ಪವಿತ್ರ ಮೂಲಮೃತ್ತಿಕೆಯೊಂದಿಗೆ ಸಂಸ್ಥಾನ ಸಹಿತ ಮಂತ್ರಾಲಯದಿಂದ ಬೆಂಗಳೂರಿಗೆ ದಿಗ್ವಿಜಯ ಮಾಡಿದರು.
ಕಲ್ಪ ನ್ಯೂಸ್: ಶ್ರೀಮಠದ ಅವಿಸ್ಮರಣೀಯ ಕ್ಷಣ?
ನಂದಕಿಶೋರ್ ಆಚಾರ್: 3-5-1983 ರಂದು ಸಂಜೆ ಬೆಂಗಳೂರಿನ ಜಯನಗರದ ನಾಲ್ಕನೆಯ ಬಡಾವಣೆಯಲ್ಲಿರುವ ವಾಣಿಜ್ಯ ಸಂಕೀರ್ಣದಿಂದ ನೂತನವಾಗಿ ನಿರ್ಮಿತವಾಗಿದ್ದ ಕಟ್ಟಡದವರೆಗೆ ಸಾಲಂಕೃತ ಗಜವಾಹನದ ಮೇಲೆ ಶ್ರೀ ಮೂಲ ರಘುಪತಿ ವೇದವ್ಯಾಸದೇವರುಗಳ ಪೆಟ್ಟಿಗೆ, ಶ್ರೀಗುರುರಾಜರ ಮೂಲ ಮೃತ್ತಿಕೆಗಳನ್ನು ಇರಿಸಿ ವೈಭವದ ಮೆರವಣಿಗೆಯಲ್ಲಿ ಕರೆತರಲಾಯಿತು.
ಕಲ್ಪ ನ್ಯೂಸ್: ಶ್ರೀಮಠದಲ್ಲಿ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ?
ನಂದಕಿಶೋರ್ ಆಚಾರ್: 4-5-1983 ರ ಅಕ್ಷಯ ತೃತೀಯ ದಿನದಂದು ಪ್ರಾತಃಕಾಲದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪರಮಪೂಜ್ಯ ಶ್ರೀಶ್ರೀಸುಜಯೀಂದ್ರತೀರ್ಥ ಶ್ರೀಪಾದಂಗಳವರು ಮಂತ್ರಾಲಯದ ಮೂಲಬೃಂದಾವನದ ಮೃತ್ತಿಕೆಯಿಂದ ಬೃಂದಾವನವನ್ನು ವಿದ್ಯುಕ್ತವಾಗಿ ತಮ್ಮ ಅಮೃತಹಸ್ತಗಳಿಂದ ಪ್ರತಿಷ್ಠಾಪಿಸಿದರು.
ಕಲ್ಪ ನ್ಯೂಸ್: ಶ್ರೀಕ್ಷೇತ್ರಕ್ಕೆ ದ್ವಿತೀಯಾ ಮಂತ್ರಾಲಯ ಎನ್ನುವುದು ಏತಕ್ಕಾಗಿ?
ನಂದಕಿಶೋರ್ ಆಚಾರ್: ಶ್ರೀಕ್ಷೇತ್ರಕ್ಕೆ ನಂಬಿ ಬರುವ ಭಕ್ತರ ಅಭಿಷ್ಟವನ್ನು ಈಡೇರಿಸುತ್ತಾ, ಕಷ್ಟದಲ್ಲಿರುವ ಭಕ್ತರ ಅಪೇಕ್ಷೆಗಳನ್ನು ಈಡೇರಿಸುತ್ತಾ ಶ್ರೀಪಾದಂಗಳವರ ತಪಃಶಕ್ತಿ ಶ್ರೀಗುರುರಾಜರ ಮೃತ್ತಿಕೆಯ ಮಂತ್ರಸಿದ್ಧಿಯೊಂದಿಗೆ ಇಂದು ಜಯನಗರದ ಐದನೆಯ ಬಡಾವಣೆಯಲ್ಲಿರುವ ಶಾಖಾಮಠವು ಭಕ್ತರ ಪಾಲಿಗೆ ದ್ವಿತೀಯ ಮಂತ್ರಾಲಯ ಎಂದು ಪ್ರಸಿದ್ಧ ಕ್ಷೇತ್ರವಾಗಿದೆ.
ಕಲ್ಪ ನ್ಯೂಸ್: ಭೂಮಿ ಪೂಜೆ?
ನಂದಕಿಶೋರ್ ಆಚಾರ್: ಪರಮಪೂಜ್ಯ ಶ್ರೀ ಸುಶಮೀಂದ್ರತೀರ್ಥರ ಮಹದಾಸೆಯು ಶ್ರೀಮಠದ ಹಿಂಭಾಗದ ಜಾಗದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವನ್ನು ಮಾಡಬೇಕೆಂದು ಭೂಮಿ ಪೂಜೆಯನ್ನು ನೆರವೇರಿಸಿದರು.
ಕಲ್ಪ ನ್ಯೂಸ್: ಶ್ರೀ ಮಠದ ವಿಶೇಷ ನಿರ್ಮಾಣ?
ನಂದಕಿಶೋರ್ ಆಚಾರ್: ಪರಮಪೂಜ್ಯ ಶ್ರೀಸುಶಮೀಂದ್ರ ತೀರ್ಥರ ಕಾಲದಲ್ಲಿ ಬೃಹತೀ ಸಹಸ್ರ ಯಾಗ ಗರ್ಭಗುಡಿಯ ಬೆಳ್ಳಿಯ ಮಂಟಪದ ಭಾಗ ವಿಶೇಷವಾಗಿ ನಿರ್ಮಾಣಗೊಂಡವು.
ಕಲ್ಪ ನ್ಯೂಸ್: ಪರಮಪೂಜ್ಯ ಶ್ರೀಸುಶಮೀಂದ್ರ ತೀರ್ಥ ಮಹದಾಸೆ?
ನಂದಕಿಶೋರ್ ಆಚಾರ್: ಜ್ಞಾನ ಯಜ್ಞ ಪ್ರವಚನ ಪೂಜಾರಾಧನೆ ಕನಕಾಭಿಷೇಕ ನಡೆಯಬೇಕೆಂದು ಸಂಕಲ್ಪಿಸಿ ಮಹದಾಸೆ ಹೊಂದಿದ್ದರು. ಅವರು ಸಂಕಲ್ಪಿಸಿದ ಮಹದಾಸೆಯನ್ನು ಅವರ ಶಿಷ್ಯರಾದ ಪರಮಪೂಜ್ಯ ಶ್ರೀಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಕಾಲದಲ್ಲಿ ಗುರುಗಳ ಸಂಕಲ್ಪದಂತೆ ಆರ್.ಕೆ. ವಾದೀಂದ್ರ ಆಚಾರ್ಯ ನೇತೃತ್ವದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣಗೊಂಡು ಗುರುಗಳ ಅಪೇಕ್ಷೆಯ ಮಹದಾಸೆಯನ್ನು ಈಡೇರಿಸಿದರು.
ಕಲ್ಪ ನ್ಯೂಸ್: ಶ್ರೀಮಠದಲ್ಲಿ ನಡೆಯುವ ಉತ್ಸವಗಳು?
ನಂದಕಿಶೋರ್ ಆಚಾರ್: ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮಂತ್ರಾಲಯದಲ್ಲಿ ಯಾವ ರೀತಿಯಾಗಿ ಉತ್ಸವಗಳು ನೆರವೇರಿಸುತ್ತಾರೋ, ಅದೇ ರೀತಿಯಾಗಿ ಶ್ರೀಮಠದಲ್ಲಿಯೂ ನೆರವೇರಲಿ ಎಂಬುದಾಗಿ ಸಂಕಲ್ಪಿಸಿ ಶ್ರೀಪಾದಂಗಳವರು ಗುರುರಾಯರ ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು.
ಶ್ರೀಮಠದಲ್ಲಿ ವಿಶೇಷವಾಗಿ ಗುರುರಾಜರ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದಿಂದ ಕ್ಷೀರಾಭಿಷೇಕ ಮತ್ತು ಮುಖ್ಯಪ್ರಾಣ ದೇವರಿಗೆ ಜೇನುತುಪ್ಪದಿಂದ ಅಭಿಷೇಕ, ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಉತ್ಸವಗಳು ಅಲಂಕಾರಗಳು ಪ್ರವಚನಗಳು ನಿರಂತರವಾಗಿ ನೆರವೇರುತ್ತವೆ. ಪ್ರತಿ ಗುರುವಾರ ಅನ್ನದಾನ ನಡೆಯುತ್ತದೆ.
ಕಲ್ಪ ನ್ಯೂಸ್: ಶ್ರೀಮಠದ ವಿಶೇಷ?
ನಂದಕಿಶೋರ್ ಆಚಾರ್: ಗುರುಗಳ ಮಂತ್ರಾಕ್ಷತೆ ಶ್ರೀಪಾದರ ಅನುಗ್ರಹದೊಂದಿಗೆ ವಿಶೇಷವಾಗಿ ಶ್ರೀಮಠದಲ್ಲಿ ಸ್ವರ್ಣಲೇಪಿತವಾದ ಗಜವಾಹನ, ಸ್ವರ್ಣಲೇಪಿತವಾದ ಪಲ್ಲಕ್ಕಿ, ಸ್ವರ್ಣಲೇಪಿತವಾದ ತೊಟ್ಟಿಲು, ಮುಖ್ಯಪ್ರಾಣ ದೇವರಿಗೆ ನವರತ್ನ ಕವಚ, ಪ್ರಹ್ಲಾದರಾಜರ ನವರತ್ನ ಕವಚ, ಸುವರ್ಣ ಸಿಂಹಾಸನ, ಗೋಪುರದ ಮುಖದ್ವಾರ ಮಂಟಪ ಎಲ್ಲವೂ ಭಕ್ತರ ಸಹಕಾರದೊಂದಿಗೆ ಶ್ರೀರಾಘವೇಂದ್ರ ಸ್ವಾಮಿಗಳವರ ಮಂತ್ರಾಕ್ಷತೆಯ ಪ್ರಭಾವ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಸಾಕಾರವಾಗಿದೆ.
ಕಲ್ಪ ನ್ಯೂಸ್: ಶ್ರೀಮಠದಲ್ಲಿ ಪ್ರತಿನಿತ್ಯ ಕಾರ್ಯಕ್ರಮಗಳು?
ನಂದಕಿಶೋರ್ ಆಚಾರ್: ಸಿಲಿಕಾನ್ ಸಿಟಿಯಲ್ಲಿ ಸದ್ದು-ಗದ್ದಲವಿಲ್ಲದೆ ಶ್ರೀಮಠದಲ್ಲಿ ಪ್ರತಿನಿತ್ಯ ಹರಿಭಜನೆ ಉತ್ಸವ ಕಾರ್ಯಕ್ರಮ ನಡೆಯುತ್ತಿರುತ್ತದೆ. ಪ್ರತಿ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ದಾಸವಾಣಿ, ಭರತನಾಟ್ಯ ಇನ್ನು ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀಸುಧೀಂದ್ರ ದೇಸಾಯಿ ಅವರ ಸಹಕಾರದೊಂದಿಗೆ 3,500 ಭಜನಾ ಮಂಡಳಿಯವರು ಸೇವೆ ಸಲ್ಲಿಸಿದ್ದಾರೆ. ಇದರ ಉಸ್ತುವಾರಿಯನ್ನು ನಾನೇ ನೋಡಿ ಕೊಳ್ಳುತ್ತಿದ್ದೇನೆ.
ಅನ್ನಸಂತರ್ಪಣೆ ಇರುವುದಿಲ್ಲ
ಈ ಬಾರಿ ಅತ್ಯಂತ ಸರಳವಾಗಿ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತದೆ.ಭಕ್ತರ ಆರೋಗ್ಯ ಮತ್ತು ಶ್ರೀಮಠದ ಹಿತ ದೃಷ್ಟಿಯಿಂದ ಶ್ರೀಮಠದ ಪ್ರವೇಶದ್ವಾರದ ಬಳಿ ಭಕ್ತರ ಕೈಗಳಿಗೆ ಸ್ಯಾನಿಟೈಸರ್, ಎಲೆಕ್ಟ್ರಾನಿಕ್ ಡಿವೈಸರ್ ವ್ಯವಸ್ಥೆ ಮಾಡಲಾಗಿದೆ. ಶ್ರೀಮಠದ ಕಾವಲುಗಾರ ಬರುವ ಭಕ್ತರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದ ನಂತರ ಒಳಕ್ಕೆ ಬಿಡುತ್ತಾರೆ. ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಶ್ರೀಗುರುರಾಯರ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ. ಅನ್ನಸಂತರ್ಪಣೆ ಇರುವುದಿಲ್ಲ ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರ ಆಚಾರ್ಯರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9945429129-9448847586ಗೆ ಸಂಪರ್ಕಿಸಬಹುದು.
ಆರಾಧನೆಯ ವಿವರಗಳು:
ಗುರುರಾಯರ 349 ನೆಯ ಆರಾಧನೆ ಪ್ರಯುಕ್ತ ಆಗಸ್ಟ್ 3- 7 ರವರೆಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ಪಾದಪೂಜೆ, ಕನಕಾಭಿಷೇಕ, ಅಲಂಕಾರ ನಡೆಯಲಿದೆ.
ಪಂಚರಾತ್ರೋತ್ಸವ
ಶ್ರೀಮಠದಲ್ಲಿ ಪಂಚದಿನಗಳ ಕಾಲ ನಡೆಯುವ ರಾಯರ ಆರಾಧನೆ – ಪಂಚರಾತ್ರೋತ್ಸವದಲ್ಲಿ ಸೋಮವಾರ ಪ್ರಾರ್ಥನೋತ್ಸವ, ಯಜುರ್ವೇದಿ ನಿತ್ಯ-ನೂತನೋಪಾಕರ್ಮ, ಆರಾಧನೆ ಪಂಚರಾತ್ರೋತ್ಸವ ಉದ್ಘಾಟನೆ, ಮಂಗಳವಾರ ಋಗ್ವೇದಿ ನಿತ್ಯ-ನೂತನೋಪಾಕರ್ಮ, ಪೂರ್ವಾರಾಧನೆ, ಬುಧವಾರ ಪ್ರಧಾನವಾದ ಮಧ್ಯಾರಾಧನೆ ಹಾಗೂ ಗುರುವಾರ ಉತ್ತರಾರಾಧನೆ ಮತ್ತು ಶುಕ್ರವಾರ ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಗುರುರಾಯರ 349ನೆಯ ಆರಾಧನಾ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆದೇಶದೊಂದಿಗೆ ಹಾಗೂ ಆರೋಗ್ಯ ಇಲಾಖೆಯ ನಿಯಮಾವಳಿಯಂತೆ ಕೊರೋನಾ ಎಂಬ ವೈರಸ್ ಹಿಮ್ಮೆಟ್ಟಿಸಲು ಶ್ರೀಮಠದಲ್ಲಿ ಗುರು ರಾಯರ ಸನ್ನಿಧಾನದಲ್ಲಿ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶದಂತೆ ಪ್ರತಿನಿತ್ಯ ಕೋವಿಡ್19 ಕಾನೂನುಗಳನ್ನು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಲಾಗುತ್ತಿದೆ ಎನ್ನುತ್ತಾರೆ ಶ್ರೀಮಠದ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರ ಆಚಾರ್ಯರು.
ಶ್ರೀ ಸುಜ್ಞಾನೇಂದ್ರ ತೀರ್ಥರ ಬಗ್ಗೆ
ಶ್ರೀ ಸುಜ್ಞಾನೇಂದ್ರ ತೀರ್ಥರು ರಾಯರ ಪರಂಪರೆಯಲ್ಲಿ ಬರುವಂತಹ ಮಹಾಜ್ಞಾನಿಗಳು ಯತಿಗಳು. ಇವರು ತಮ್ಮ ದೇಹದ ಅಂತ್ಯಕಾಲದಲ್ಲಿ ತಮ್ಮ ಬೃಂದಾವನ ಮಂತ್ರಾಲಯದಲ್ಲಿ ಆಗಬೇಕೆಂಬುದು ಅವರ ಅಪೇಕ್ಷೆ ಇರುತ್ತದೆ. ಆದರೆ ರಾಯರು ಅವರ ಸ್ವಪ್ನದಲ್ಲಿ ಬಂದು ನಂಜನಗೂಡಲ್ಲಿ ತಮ್ಮ ಬೃಂದಾವನದ ಎಲ್ಲಾ ಕಾರ್ಯಕ್ರಮ ನಡೆಯಲಿ ಎಂಬುದಾಗಿ ಅನುಗ್ರಹಿಸುತ್ತಾರೆ.
ಆದ ಕಾರಣ ರಾಯರ ಆರಾಧನೆ ಆದ ನಂತರ ಸುಜ್ಞಾನೇಂದ್ರ ತೀರ್ಥರ ಆರಾಧನೆ ಬರುವುದರಿಂದ ವಿಶೇಷವಾಗಿ ಮಹತ್ವ ಕೊಟ್ಟು ಅವರ ಆರಾಧನೆ ನಡೆಸಲಾಗುತ್ತದೆ ಎನ್ನುತ್ತಾರೆ ಮಠದ ಪ್ರಧಾನ ಪುರೋಹಿತರಾದ ನಂದಕಿಶೋರ್ ಆಚಾರ್.
ಸಂದರ್ಶನ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಛಾಯಾಚಿತ್ರ ಕೃಪೆ: ಪ್ರಸನ್ನ ಮತು ಲಕ್ಷ್ಮೀನಾರಾಯಣ ಸ್ವಾಮಿ
Get In Touch With Us info@kalpa.news Whatsapp: 9481252093
Discussion about this post