ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜಧಾನಿ ಬೆಂಗಳೂರು #Bengaluru ಸೇರಿದಂತೆ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿದಾಗ ಮಾತ್ರ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ವಾಗ್ಮಿ, ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ನಿರ್ದೇಶಕ ಡಾ.ಕೆ.ಪಿ. ಪುತ್ತೂರಾಯ ಅಭಿಪ್ರಾಯಪಟ್ಟರು.
ಬೆಂಗಳೂರು ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ `ವಿಕಾಸ’ ವತಿಯಿಂದ ಸುವರ್ಣ ಸಂಭ್ರಮ ರಾಜ್ಯೋತ್ಸವ 2024 ಪ್ರಶಸ್ತಿ #RajyotsavaAward ಪ್ರದಾನ ಮಾಡಿ ಅವರು ಮಾತನಾಡಿದರು.
ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದ ಹಿರಿಮೆಗರಿಮೆಗಳ ಬಗ್ಗೆ ತಿಳಿಸಿದ ಅವರು, ಸಿರಿಗನ್ನಡ ನುಡಿಯ ಬಳಕೆಯನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಉಪಯೋಗಿಸುವ ಮೂಲಕ ಜೀವಂತವಾಗಿಡಬಹುದು ಎಂದು ಅಭಿಪ್ರಾಯಪಟ್ಟರು.
ಜೆಕ್ ಗಣರಾಜ್ಯದ ಗೌರವ ರಾಯಭಾರಿ, ಪುಷ್ಪಕ್ ಏರೋನಾಟಿಕ್ಸ್ ಕಂಪೆನಿಯ ಮುಖ್ಯಸ್ಥ ಪುಷ್ಪಕ್ ಪ್ರಕಾಶ್ ಮಾತನಾಡಿ, ಬಹಳಷ್ಟು ಮಂದಿಯ ಜೀವನ ಸಣ್ಣ ಬಿಂದುವಿನಿಂದಲೇ ಆರಂಭವಾಗುತ್ತದೆ. ಆದರೆ, ಗುರಿಯ ಕಡೆ ಮಾತ್ರ ಗಮನ ಹರಿಸಿ ಬುದ್ದಿವಂತಿಕೆಯಿಂದ ಶ್ರಮ ವಹಿಸಿದಾಗ ಯಶಸ್ಸು ಸಾಧ್ಯ ಎಂದು ತಿಳಿಸಿ, ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊಂಡರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ , ವಿಕಾಸದ ಗೌರವಾಧ್ಯಕ್ಷ ಡಾ.ಎಚ್.ಎಸ್. ಸುಧೀಂದ್ರ ಕುಮಾರ್ ಅಧ್ಯಕ್ಷ ತೆ ವಹಿಸಿದ್ದರು. ಅಬಲಾಶ್ರಮದ ಅಧ್ಯಕ್ಷೆ ಹಿರಿಯ ವೈದ್ಯೆ ಡಾ. ವಿಜಯಲಕ್ಷ್ಮೀ ದೇಶಮಾನೆ, ನಳಂದ ಶಿಕ್ಷ ಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಂ.ಆರ್. ಶಿವಶಂಕರ್ ಭಾಗವಹಿಸಿದ್ದರು.
ಪತ್ರಿಕಾರಂಗದಲ್ಲಿ ಅವಿರತ ಸಾಧನೆ ಮಾಡಿರುವ ಸಾಧಕೋತ್ತಮರಾದ ಕೋಲಾರ ವಾಣಿ ದಿನಪತ್ರಿಕೆಯ ಸಂಪಾದಕ ಬಿಎನ್ ಮುರಳಿ ಪ್ರಸಾದ್, ಅಂಕಣಕಾರ್ತಿ ಅನುವಾದಕಿ ಮಾಧುರಿ ದೇಶಪಾಂಡೆ, ಸಂಯುಕ್ತ ಕರ್ನಾಟಕ ವರದಿಗಾರ ಗುರುರಾಜ್ ಕುಲಕರ್ಣಿ, ಸತ್ಯ ಕ್ರಾಂತಿಯ ಸಂಪಾದಕ ಮೋಹನ್ ಕುಲಕರ್ಣಿ ಮತ್ತು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಂಪಾದಕ ಅನಿರುದ್ಧ ವಸಿಷ್ಠ ಅವರುಗಳಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಆರೋಹಣ ಸಂಸ್ಥೆಯ ಗಾಯಕ ಸುಧೀಂದ್ರ ಮತ್ತು ಸಂಪದ ಸಾಂಸ್ಕೃತಿಕ ವೇದಿಕೆಯ ಅಚ್ಯುತಾ ಸಂಕೇತಿ ಅವರಿಂದ ವೈವಿಧ್ಯಮಯ ಗಾಯನ ಪ್ರಸ್ತುತಿ ಮತ್ತು ಸ್ಪೂರ್ತಿ ಎಚ್. ಯಾವಗಲ್ ಅವರಿಂದ ಕಥಕ್ ನೃತ್ಯ ಆಯೋಜಿಸಲಾಗಿತ್ತು.
ಪತ್ರಕರ್ತ ಎಚ್.ಎಸ್. ದ್ವಾರಕಾನಾಥ್, ಹಿರಿಯ ಪತ್ರಿಕಾ ಛಾಯಾಗ್ರಹಾಕ ಶ್ರೀನಿವಾಸ ವೈ.ಕೆ. ಅವರಿಗೆ ಸನ್ಮಾನ, ವಿಕಾಸ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ನಡೆಯಿತು.
ವಿಕಾಸದ ಅಧ್ಯಕ್ಷ ಶ್ರೀನಾಥ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಧ್ಯಮದ ವಿವಿಧ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಡುತ್ತಿರುವ ಸಮಾನ ಮನಸ್ಕರನ್ನು ಒಂದುಗೂಡಿಸಿ ಅವರ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದು ವೇದಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಹನುಮೇಶ ಯಾವಗಲ್ ಮತ್ತು ವಿಕಾಸ ಸದಸ್ಯ ಅಧ್ಯಾತ್ಮಿಕ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post