ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ವಿಶೇಷ ವರದಿ |
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅಕ್ರಮಗಳ ಮಹಾ ಕರ್ಮಕಾಂಡವೇ ನಡೆಯುತ್ತಿದ್ದು, ಹಣ ಪಡೆದು Bengaluru ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ರಾಜಾರೋಷವಾಗಿ ನಕಲು ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು ನಗರದ ಬೈಯಂಡಳ್ಳಿಯಲ್ಲಿರುವ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಈ ಅಕ್ರಮಗಳ ಸರಮಾಸೆಯೇ ನಡೆಯುತ್ತಿದ್ದು, ಇದರ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಣವಿದ್ದವರಿಗೆ ಮೊಬೈಲ್, ಪ್ರತ್ಯೇಕ ಕೊಠಡಿ ಭಾಗ್ಯ
ಮೂಲಗಳ ಪ್ರಕಾರ, ಕೆಎಸ್ಒಯು ಪರೀಕ್ಷೆಯಲ್ಲಿ ಸುಲಭವಾಗಿ ಪಾಸ್ ಮಾಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಪ್ರತಿ ಪರೀಕ್ಷೆಗೆ 8 ರಿಂದ 10 ಸಾವಿರ ರೂಪಾಯಿ ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಹೀಗೆ ಹಣ ಪಾವತಿಸಿದ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಅಲ್ಲಿಯೂ ಯಾವುದೇ ಭಯವಿಲ್ಲದೆ ಮೊಬೈಲ್ ಬಳಸಿ ಮುಕ್ತವಾಗಿ ಕಾಪಿ ಮಾಡಲು (ನಕಲು ಮಾಡಲು) ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೈಕಟ್ಟಿ ಕುಳಿತ ವಿಶ್ವವಿದ್ಯಾನಿಲಯ ಆಡಳಿತ
ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಈ ರೀತಿಯ ನಕಲು ದಂಧೆ ಹಾಗೂ ಅಕ್ರಮಗಳ ಕುರಿತು ಕಳೆದ ಬಾರಿಯೂ ವ್ಯಾಪಕ ಸುದ್ದಿಯಾಗಿತ್ತು ಮತ್ತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೂ, ಕೆಎಸ್ಒಯು ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ವಿಶ್ವವಿದ್ಯಾನಿಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇಲ್ಲದಿರುವುದೇ ಇಂತಹ ಅಕ್ರಮಗಳಿಗೆ ಪ್ರಮುಖ ಕಾರಣ ಎಂಬ ಆಕ್ರೋಶ ವ್ಯಕ್ತವಾಗಿದೆ.
ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯ
ಯಾವಿಧವಾದ ಅಕ್ರಮಗಳಿಗೂ ಕೈಹಾಕದೆ, ಕಷ್ಟಪಟ್ಟು ರಾತ್ರಿ-ಹಗಲು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವ ನಿಷ್ಠಾವಂತ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯಿಂದ ತೀವ್ರ ಅನ್ಯಾಯವಾಗುತ್ತಿದೆ. ಹಣವಿದ್ದವರು ಸುಲಭವಾಗಿ ಉತ್ತೀರ್ಣರಾಗುತ್ತಿದ್ದರೆ, ಕಷ್ಟಪಟ್ಟು ಓದುವ ಬಡ ವಿದ್ಯಾರ್ಥಿಗಳು ಮಾತ್ರ ಅಸಹಾಯಕರಾಗುವಂತಾಗಿದೆ ಎಂದು ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
Also Read>> ಸಿಂಗಾಪೂರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಮೀರ್ ಖಾನ್ ಭಾವುಕರಾಗಿದ್ದು ಏಕೆ?
Bengaluru : ಕ್ರಮಕ್ಕೆ ಆಗ್ರಹ
ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಗೆ ಮಸಿ ಬಳಿಯುತ್ತಿರುವ ಈ ವಾಣಿಜ್ಯೀಕರಣ ಹಾಗೂ ಅಕ್ರಮಗಳ ಕುರಿತು ಕೆಎಸ್ಒಯು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಕ್ಷಣವೇ ಸದರಿ ಖಾಸಗಿ ಕಾಲೇಜು ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿ ಹಾಗೂ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









