ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸುಮಾರು 2 ತಿಂಗಳ ಕೆಳಗಿನ ಮಾತು ಸಿಲಿಕಾನ್ ಸಿಟಿಯ ಬನಶಂಕರಿ 3ನೆಯ ಹಂತದ ಜನತಾ ಬಜಾರ್’ನಲ್ಲಿ ಕೈಯಲ್ಲಿ ಬೆಂಡಿನ ತುಂಡು ಅದರ ಮೇಲೆ ಒಂದಿಷ್ಟು ಪ್ಲಾಸ್ಟಿಕ್ ಹಕ್ಕಿ ಹಿಡಿದು, ರಸ್ತೆಯ ಉದ್ದಕ್ಕೂ ರಟ್ಟಿನ ಡಬ್ಬಕ್ಕೆ ಹಗ್ಗ ಕಟ್ಟಿ ಹಾಕಿ ಹಕ್ಕಿ ಬೇಕೇ ಹಕ್ಕಿ ಎನ್ನುತ್ತಾ ಸಾಗುತ್ತಾ ಇದ್ದರು ಓರ್ವ ವ್ಯಕ್ತಿ. ಕುತೂಹಲ ಮೂಡಿ ಆ ವ್ಯಕ್ತಿಯ ಬಳಿ ಹೋಗಿ ಮಾತನಾಡಿದಾಗ ನನಗೆ ತಿಳಿದ ಅಂಶ ಅವರು ಎರಡೂ ಕಣ್ಣಿಲ್ಲದ ಅಂಧರು ಎಂಬುದು.
ಅವರ ಜೊತೆ ನನ್ನ ಮಾತು ಆರಂಭವಾಗಿತ್ತು. ಅವರ ಹೆಸರು ಹನುಮಂತ ರೆಡ್ಡಿ, ಸರ್ಜಾಪುರದ ಕನ್ನಳ್ಳಿ ಎಂಬ ಊರಿನವರು. ಇಬ್ಬರು ಮಕ್ಕಳು, ಬದುಕಿನ ಬಂಡಿ ಸಾಗಿಸಲು ಪ್ಲಾಸ್ಟಿಕ್ ಹಕ್ಕಿ ವ್ಯಾಪಾರ ವಹಿವಾಟು ನಮಗೆ ಆಧಾರ ಎಂದು ಒಂದೇ ಉಸಿರಿಗೆ ನನ್ನ ಮಾತಿಗೆ ಧ್ವನಿಯಾಗಿದ್ದರು.
ಹನುಮಂತ ರೆಡ್ಡಿ ಅವರು ಹುಟ್ಟಿನಿಂದ ಅಂಧರು. ಆದರೆ ಅವರು ಸಿಲಿಕಾನ್ ಸಿಟಿ ತುಂಬಾ ಬಸ್ಸಿನಲ್ಲಿ ಸುತ್ತಿ ದಿನಕ್ಕೆ ಒಂದರಂತೆ ನಗರದ ಹಲವು ವರ್ಷಗಳಿಂದ ಪ್ಲಾಸ್ಟಿಕ್ ಹಕ್ಕಿ ವ್ಯಾಪಾರ ವಹಿವಾಟು ಮಾಡುತ್ತಾ ಕೈಯಲ್ಲಿ ರಟ್ಟಿನ ಡಬ್ಬಿಗೆ ಹಗ್ಗ ಕಟ್ಟಿ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಾಗುತ್ತಾ ಹೊಟ್ಟೆ ಹೊರೆಯಲು ಸಾಗುವ ಇವರ ಸ್ವಾಭಿಮಾನದ ಬದುಕು ನಾಡಿನ ಜನತೆಗೆ ಮಾದರಿ!
ಕಣ್ಣಿನ ದೃಷ್ಟಿ ಎಷ್ಟು ಮುಖ್ಯ ಎಂದು ಕಣ್ಣುಗಳನ್ನು ಕಳೆದುಕೊಂಡವರಿಗೆ ಮಾತ್ರ ಗೊತ್ತು. ಒಮ್ಮೆ ನಮಗೆ ಕಣ್ಣುಗಳೇ ಇಲ್ಲದಿದ್ದರೆ ಏನಾಗುತ್ತಿತ್ತು ಮತ್ತು ನಮ್ಮ ಜೀವನ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿಕೊಂಡು ನೋಡಿ. ನಿಜಕ್ಕೂ ಎದೆ ಝಲ್ಲೆನ್ನುತ್ತದೆ. ಕಣ್ಣಿಲ್ಲದೆ ಜೀವನ ಮಾಡುತ್ತಿರುವವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.
ನೇತ್ರದ ಅಮೂಲ್ಯತೆ ಕುರಿತಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ನೇತ್ರ ತಜ್ಞ ಡಾ.ಎನ್. ವೀರಭದ್ರ ರಾವ್, ಪ್ರಜ್ಞಾತ್ಮಕ ಜ್ಞಾನೇಂದ್ರಿಯವಾಗಿರುವ ಕಣ್ಣು, ದೃಷ್ಟಿಗೆ ಅವಕಾಶ ನೀಡುತ್ತದೆ. ಅಕ್ಷಿಪಟದಲ್ಲಿರುವ ರಾಡ್(ಕಣ್ಣಿನ ಪಾಪೆಯ ದಂಡ) ಮತ್ತು ಕೋನ್ (ಅಕ್ಷಿಪಟದಲ್ಲಿರುವ ಶಂಕುವಿನಾಕಾರದ ರಚನೆ) ಕೋಶಗಳು, ವಿವಿಧ ಬಣ್ಣಗಳು ಮತ್ತು ಅವುಗಳ ಗಾಢತೆಯನ್ನು ಗ್ರಹಿಸುವುದು ಸೇರಿದಂತೆ ಜಾಗೃತ ಬೆಳಕಿನ ಗ್ರಹಿಕೆ ಮತ್ತು ದೃಷ್ಟಿಗೆ ಅವಕಾಶ ಕಲ್ಪಿಸುತ್ತದೆ ಎಂದರು.
ವಿಶ್ವದಲ್ಲಿ 2.2 ಶತ ಕೋಟಿ ಜನರಿಗೆ ವಿವಿಧ ಕಾರಣಗಳಿಂದ ಕಣ್ಣುಗಳು ಹಾಳಾಗಿವೆ. ಇದರಲ್ಲಿ 36 ದಶಲಕ್ಷ ಜನರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. 217 ದಶ ಲಕ್ಷ ಜನರು ಮಧ್ಯಮ ದೃಷ್ಟಿ ನ್ಯೂನತೆಯಿಂದ ಬಳಲುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದಲ್ಲಿ 60 ವರುಷಕ್ಕಿಂತ ಮೇಲ್ಪಟ್ಟ ಶೇ.89 ಮಂದಿ ಕಣ್ಣಿನ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.
ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿದರೆ ಮುಂದೆ ಆಗುವ ಅನಾಹುತಾ ತಪ್ಪಿಸಬಹುದು. ಪ್ರಮುಖವಾಗಿ, ನಿಮ್ಮ ಮಗುವಿನ ಪಾಲನೆ ಪೋಷಣೆಯ ಜೊತೆಗೆ ಕಣ್ಣಿನ ಬಗ್ಗೆ ಕಾಳಜಿ ಮತ್ತು ಜಾಗೃತಿ ನಿಮ್ಮಲ್ಲಿ ಹೆಚ್ಚಿರಬೇಕು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇರಲಿ, ಕಾಲಕಾಲಕ್ಕೆ ಮಗುವಿನ ಕಣ್ಣಿನ ಪರೀಕ್ಷೆ ದೃಷ್ಟಿ ದೋಷ ನಿವಾರಣೆ ಇತ್ಯಾದಿಗಳನ್ನು ಮಾಡಿಸಿ ಮಗುವಿಗೆ ಕಣ್ಣಿಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಕಾಡದಂತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ವಂಶ ಪರಾಂಪರ್ಯವಾಗಿ ಗ್ಲುಕೋಮಾ, ಅಕ್ಷಿಪಟಲದ ತೊಂದರೆ, ಇರಳುಗಣ್ಣು ಇವುಗಳು ಹತ್ತಿರ ಸಂಬಂಧಗಳಲ್ಲಿ ಮದುವೆ ಆದರೆ (ಉದಾಹರಣೆಗೆ-ಮಾವನ ಮಗ, ಅತ್ತೆ ಮಗಳು) ಬರುವ ಸಾಧ್ಯತೆ ಹೆಚ್ಚು ಇರುತ್ತದೆ ಹಾಗೂ ಇವುಗಳು ಕಣ್ಣಿನ ದೃಷ್ಟಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
40 ವರುಷ ದಾಟಿದ ನಂತರ ಕಣ್ಣಿನ ಪರೀಕ್ಷೆ ಅಗತ್ಯವಾಗಿ ಮಾಡಿಸಿಕೊಳ್ಳಿ, 40 ವರುಷ ದಾಟಿದ ನಂತರ ಸಣ್ಣ ಸಣ್ಣ ಅಕ್ಷರಗಳು ಓದಲು ಕಾಣಿಸದೆ ಇರುವ ಹಾಗೂ ಅನೇಕ ರೀತಿಯ ಕಣ್ಣಿನ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕ ಮಾಡಿ ತಪಾಸಣೆ ಮಾಡಿಸಿಕೊಂಡರೆ ಕಣ್ಣಿನ ದೃಷ್ಟಿ ಹೋಗದಂತೆ ತಡೆಯಬಹುದು. ಧೂಮಪಾನ ಹಾಗೂ ಮದ್ಯಪಾನದಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತದೆ, ಪೋಷಕಾಂಶಗಳು ಇರುವ ಆಹಾರ ಸೇವಿಸಬೇಕು, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಡಾ. ರಾಜ್’ಕುಮಾರ್ ಅವರ ಮರಣದ ನಂತರ ಅವರ ಇಚ್ಛೆಯಂತೆ ಅವರ ಮಕ್ಕಳು ರಾಜಣ್ಣನವರ ನೇತ್ರವನ್ನು ದಾನ ಮಾಡಿದ್ದ ಹಾಗೇ ರಾಜ್ಯದ ನಾಗರೀಕರು ನೇತ್ರದಾನಕ್ಕೆ ಮುಂದೆ ಬಂದರೆ ಅನೇಕ ಅಂಧರ ಬಾಳಿಗೆ ಬೆಳಕು ಸಿಗುವ ಸಾಧ್ಯತೆ ಹೆಚ್ಚು. ತಪಾಸಣೆ ಮಾಡಿಸಿಕೊಂಡು ಕಣ್ಣುಗಳನ್ನು ರಕ್ಷಣೆ ಮಾಡಿ ಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುತ್ತಾರೆ.
ನಾಡಿನ ದೊರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದಿಂದ ಇಂತಹ ಅನೇಕ ಅಂಧರ ಬದುಕಿಗೆ ಬೆಳಕು ಚೆಲ್ಲುವ ಯೋಜನೆಗಳನ್ನು ಜಾರಿಗೆ ತರಲಿ ಎಂಬುದು ಈ ಲೇಖನದ ಆಶಯ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post