ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜೀವನವೆಂಬ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ತಮ್ಮನ್ನು ತಾವು ಸದಾ ಬಲಿಷ್ಠರಾಗಿರಿಸಿಕೊಳ್ಳಬೇಕು. ಸ್ಪರ್ಧಾ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು. ಬೆಂಗಳೂರಿನ (Bengaluru) ಮಲ್ಲೇಶ್ವರದ ಹವ್ಯಕ ಭವನದಲ್ಲಿ ಅಕ್ಟೋಬರ್ 25ರಂದು ನಡೆದ ‘ಪ್ರತಿಬಿಂಬ’ ಸ್ಪರ್ಧಾ (Pratibimba spardhe) ಸೌರಭ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಅದನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಆಶಾದಾಯಕ ಬೆಳವಣಿಗೆ. ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು.
ಭವಿಷ್ಯ ಸುಲಭದ ಹೂವಿನ ಹಾದಿಯಲ್ಲ
ಭಾರತೀಯರ ಸರಾಸರಿ ವಯಸ್ಸು 29.2 ವರ್ಷಗಳಾಗಿದ್ದು, ಇದರ ಮಹತ್ವವನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ಕರ್ನಾಟಕದಲ್ಲಿ 15ರಿಂದ 29 ವರ್ಷದೊಳಗಿನ ಸುಮಾರು 2.1 ಕೋಟಿ ಜನರಿದ್ದಾರೆ. ಇಂದಿನ ಮಧ್ಯವಯಸ್ಕರು ಶಿಕ್ಷಣ, ವೃತ್ತಿ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ತಮ್ಮ ಸಮಾನ ವಯಸ್ಕರಿಂದ ಸಾಕಷ್ಟು ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ ಎಂದು ಡಾ. ಕಜೆ ಹೇಳಿದರು.
ಮುಂದಿನ ಹತ್ತು ವರ್ಷಗಳಲ್ಲಿ ಇಂದಿನ ಯುವಪೀಳಿಗೆ ತಮ್ಮದೇ ವಯಸ್ಸಿನವರಿಂದ ಈಗಿರುವುದಕ್ಕಿಂತ ಹಲವು ಪಟ್ಟು ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಭವಿಷ್ಯ ಸುಲಭದ ಹೂವಿನ ಹಾದಿಯಲ್ಲ. ತೀವ್ರ ಸ್ಪರ್ಧೆ ಎದುರಾಗುವುದು ನಿಶ್ಚಿತವಾಗಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ಯುವಜನತೆ ಈಗಿನಿಂದಲೇ ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.
Bengaluru: ಡಿ.20ರಂದು ಬೃಹತ್ ‘ಮಾತೃ ಸಂಗಮ’
ಮಹಿಳಾ ಸಂಘಟನೆ ಎಂದರೆ ಸಮಗ್ರ ಸಮಾಜವನ್ನು ಸಂಘಟಿಸಿದಂತೆ. ಈ ಹಿನ್ನೆಲೆಯಲ್ಲಿ ದೇಶ-ವಿದೇಶಗಳ 83 ವಿವಿಧ ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಗಳ ರಚನೆ ನಡೆಯುತ್ತಿದೆ. ಡಿಸೆಂಬರ್ 20ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ‘ಮಾತೃ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಡಾ. ಗಿರಿಧರ ಕಜೆ ತಿಳಿಸಿದರು.
ಮಹಿಳೆಯರ ಸಾಧನೆಯನ್ನು ಸಮಾಜದೊಂದಿಗೆ ಸಂಭ್ರಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸ್ತ್ರೀಶಕ್ತಿಯನ್ನು ಗೌರವಿಸುವ ಹಲವು ವಿಶೇಷ ಕಾರ್ಯಕ್ರಮಗಳು ಮಾತೃ ಸಂಗಮದಲ್ಲಿ ಇರಲಿವೆ ಎಂದರು.
ಬದುಕಿನ ಸ್ಪರ್ಧೆಗಳಿಗೆ ಇಂತಹ ಕಾರ್ಯಕ್ರಮಗಳು ಸ್ಫೂರ್ತಿ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ರಾಮಕೃಷ್ಣ ಭಟ್ ಕೂಟೇಲು ಮಾತನಾಡಿ, ಬಿಂಬ-ಪ್ರತಿಬಿಂಬ ವಾದವು ಅದ್ವೈತ ವೇದಾಂತದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾಗಿದೆ. ಒಂದೇ ಮೂಲ ಬ್ರಹ್ಮನು ಬೇರೆ ಬೇರೆ ರೂಪಗಳಲ್ಲಿ ಪ್ರತಿಬಿಂಬಗೊಂಡು ಅನೇಕ ಜೀವಿಗಳಾಗಿ ಕಾಣಿಸಿಕೊಳ್ಳುತ್ತಾನೆ ಎಂಬುದು ಈ ಸಿದ್ಧಾಂತದ ಆಶಯವಾಗಿದೆ ಎಂದರು.
ಮನುಷ್ಯನ ಹುಟ್ಟು-ಸಾವುಗಳ ಬದುಕಿನ ಚಕ್ರವನ್ನು ಭಗವಂತನ ಆಟವೆಂದು ಭಾರತೀಯ ತತ್ತ್ವಶಾಸ್ತ್ರಗಳು ವಿವರಿಸುತ್ತವೆ. ‘ಪ್ರತಿಬಿಂಬ’ ಸ್ಪರ್ಧಾ ಕಾರ್ಯಕ್ರಮದ ಮೂಲಕವೂ ಭಗವಂತನನ್ನು ಸ್ಮರಿಸಲು ಸಾಧ್ಯವಿದ್ದು, ಜೀವನದಲ್ಲಿ ಎದುರಾಗುವ ವಿವಿಧ ಸ್ಪರ್ಧೆಗಳನ್ನು ಎದುರಿಸಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿ ತುಂಬುತ್ತವೆ ಎಂದು ಹೇಳಿದರು.
ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯಕ್ರಮ
ರಾಜ್ಯ ಹೈಕೋರ್ಟ್ನ ಹಿರಿಯ ನ್ಯಾಯವಾದಿ ವಿಘ್ನೇಶ್ವರ ಶಾಸ್ತ್ರಿ ಮಾತನಾಡಿ, ಹವ್ಯಕ ಮಹಾಸಭೆಯು ಕಳೆದ ಕೆಲವು ವರ್ಷಗಳಿಂದ ಸಮಾಜ ಸಂಘಟನೆಗೆ ವಿಶೇಷ ಒತ್ತು ನೀಡುತ್ತಿದೆ. ಸಮಾಜದ ಸಂಸ್ಕಾರ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
‘ಹಳೆ ಬೇರು, ಹೊಸ ಚಿಗುರು ಸೇರಿದರೆ ಮರ ಸೊಗಸು’ ಎಂಬಂತೆ ಕಾರ್ಯಕ್ರಮದಲ್ಲಿ ಹಿರಿಯರೊಂದಿಗೆ ಯುವಜನರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಮಾಜದ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
Also Read>> ನ.1ರಂದು ಬಿ.ವಿ.ಎಂ. ಗ್ಲೋಬಲ್ ಶಾಲೆಯಲ್ಲಿ ರಾಜ್ಯೋತ್ಸವ
20 ಹವ್ಯಕ ಮಹಿಳಾ ವೇದಿಕೆಗಳ ಉದ್ಘಾಟನೆ
ಇದೇ ಸಂದರ್ಭದಲ್ಲಿ ಬೆಂಗಳೂರು ನಗರದ 20 ಪ್ರಾಂತ್ಯಗಳ ಹವ್ಯಕ ಮಹಿಳಾ ವೇದಿಕೆಗಳನ್ನು ಉದ್ಘಾಟಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ‘ಪಲ್ಲವ’ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ವಿವಿಧ ವಯೋಮಾನದ ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ‘ಪ್ರತಿಬಿಂಬ’ ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ದೀಪಕ ಹೆಗಡೆ ಗೋಳಿಕೈ, ಹರ್ಷ ಹೆಗಡೆ ಕೊಂಡದಕುಳಿ, ಮಧುರಾ ಗಾಂವ್ಕಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








