ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ಬದಲು, ಹಳೆಯ ‘ಮತಪತ್ರ’ (Ballot Paper) ಪದ್ಧತಿಯನ್ನು ಮರಳಿ ಜಾರಿಗೆ ತರಲು ಸರ್ಕಾರವು ವಿಧೇಯಕ ತಿದ್ದುಪಡಿ ಮಾಡುತ್ತಿರುವುದನ್ನು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಅವರು ಇಂದು ವಿಧಾನಸಭೆಯಲ್ಲಿ ತೀವ್ರವಾಗಿ ವಿರೋಧಿಸಿ, ಸರ್ಕಾರದ ಗಮನ ಸೆಳೆದರು.
ಈ ಕುರಿತು ಸದನದಲ್ಲಿ ಮಾತನಾಡಿದ ಶಾಸಕರು, “ಜಗತ್ತು ತಂತ್ರಜ್ಞಾನದಲ್ಲಿ ಅಸಾಧಾರಣ ಪ್ರಗತಿ ಸಾಧಿಸುತ್ತಿದೆ. ಇಡೀ ವಿಶ್ವವೇ ಭಾರತದ ಡಿಜಿಟಲ್ ಕ್ರಾಂತಿಯನ್ನು ಮಾದರಿಯಾಗಿ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ, ನಾವು ಮತಯಂತ್ರಗಳ (EVM) ಮೇಲೆ ಅನಗತ್ಯ ಅನುಮಾನ ವ್ಯಕ್ತಪಡಿಸಿ ದಶಕಗಳ ಹಿಂದಿನ ಹಳೆಯ ಪದ್ಧತಿಗೆ ಮರಳುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಗತಿಯತ್ತ ಸಾಗುವ ಬದಲು ಹಿನ್ನಡೆ ಅನುಭವಿಸುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಮತಯಂತ್ರಗಳ ಬಳಕೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆಯನ್ನು ತಂದಿದೆ. ಇದನ್ನು ಕೈಬಿಟ್ಟು ಮತ್ತೆ ಮತಪತ್ರಗಳ ಕಾಲಕ್ಕೆ ಹೋಗುವುದು ಚುನಾವಣಾ ಅಕ್ರಮಗಳಿಗೆ ಎಡೆಮಾಡಿಕೊಟ್ಟಂತೆ ಎಂಬ ಆಕ್ಷೇಪವನ್ನು ವ್ಯಕ್ತಪಡಿಸಿದ ಅವರು, ಸರ್ಕಾರವು ಈ ತಿದ್ದುಪಡಿ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















