ಭದ್ರಾವತಿ: ನ್ಯೂಟೌನ್ ಗಾಂಧಿ ಪಾರ್ಕಿನಲ್ಲಿ ನಗರಸಭೆಯು ಕೇಂದ್ರ ಸರಕಾರದ ಅಮೃತ್ ಯೋಜನೆಯಡಿ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಕ್ಕಳ ಆಟಿಕೆಗಳು ಲೋಕಾರ್ಪಣೆಗೊಳ್ಳದೆ ನಿರಾಶೆ ಉಂಟು ಮಾಡಿದೆ.
ದಸರಾ ಹಬ್ಬ ಪ್ರಯುಕ್ತ ಶಾಲಾ ಮಕ್ಕಳಿಗೆ ಶಾಲೆಗಳಿಗೆ ರಜಾ ಘೋಷಣೆಯಾಗಿ ಪ್ರತಿನಿತ್ಯ ಪೋಷಕರೊಂದಿಗೆ ಮಕ್ಕಳು ಪಾರ್ಕಿನಲ್ಲಿ ಅಳವಡಿಸಿರುವ ಆಟಿಕೆಗಳಲ್ಲಿ ಆಟವಾಡಲು ಬಂದು ರಜಾ-ಮಜಾ ಮಾಡಲಾಗದೆ ನಿರಾಶೆಗೊಳ್ಳುತ್ತಿದ್ದಾರೆ. ರೂ. 50 ಲಕ್ಷ ವೆಚ್ಚದಲ್ಲಿ ಬೆಂಗಳೂರಿನ ಗುತ್ತಿಗೆದಾರ ರಮೇಶ್ ಎಂಬುವರು ಪಾರ್ಕ್ ಅಭಿವೃದ್ದಿ ಕಾಮಗಾರಿ ಗುತ್ತಿಗೆ ಪಡೆದು ಮಕ್ಕಳ ಆಟಿಕೆಗಳನ್ನು ನಿರ್ಮಿಸಿದ್ದಾರೆ. ಜೋಕಾಲಿಗಳನ್ನು ಅಳವಡಿಸದೆ ಬಿಚ್ಚಿಟ್ಟಿದ್ದಾರೆ. ಪಾರ್ಕಿನ ಒಳಭಾಗದ ಸುತ್ತಲು ಲೈಟ್ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕ ನೆನೆಗುದಿಗೆ ಬಿದ್ದಿದೆ. ವಾಯು ವಿಹಾರಿಗಳಿಗಾಗಿ ಸಿಮೆಂಟಿನ ಆಸನ ವ್ಯವಸ್ಥೆಗಳನ್ನು ಮಾಡಿದ್ದಾರಾದರು ಅನೇಕ ಆಸನಗಳು ಉದ್ಘಾಟನೆ ಮುನ್ನವೇ ಬೆಂಡಾಗಿ ನಿಂತಿವೆ.
ಪಾರ್ಕಿನ ಎರಡು ಬದಿಯಲ್ಲಿ ಬೃಹತ್ ಗೇಟ್ ಮತ್ತು ಕಮಾನುಗಳನ್ನು ನಿರ್ಮಿಸಲಾಗಿದೆ. ಆದರೆ ನಾಮಫಲಕ ಬರವಣಿಗೆ ಮಾಡದೆ ತಾತ್ಸಾರ ತಾಳಲಾಗಿದೆ. ನಿರ್ಮಿಸಿರುವ ಅವೈಜ್ಞಾನಿಕ ಗೇಟಿನಿಂದ ಪ್ರತಿನಿತ್ಯ 40-50 ರಾಸುಗಳು ಪಾರ್ಕಿನ ಒಳಹೊಕ್ಕು ವಾಯು ವಿಹಾರಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಆತಂಕ ಉಂಟು ಮಾಡುತ್ತಿವೆ.
ಪ್ರತಿದಿನ ಬೆಳಿಗ್ಗೆ ಪಾರ್ಕಿನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಹಸುಗಳನ್ನು ಹೊರ ಓಡಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ಆ ಸಮಯದಲ್ಲಿ ವಾಯು ವಿಹಾರಿಗಳು ಪ್ರಾಣ ಕೈಯಲ್ಲಿ ಹಿಡಿದು ಭಯ ಭೀತಿಯಿಂದ ಸಂಚರಿಸುವಂತಾಗಿದೆ. ಸಂಜೆಯಾಗುತ್ತಲೆ ಹೊರ ಹೋದ ರಾಸುಗಳು ಪುನಃ ಪಾರ್ಕಿನ ಒಳಭಾಗಕ್ಕೆ ಬಂದು ಸೇರ್ಪಡೆಗೊಳ್ಳುತ್ತವೆ. ಆ ಸಮಯದಲ್ಲಿ ಪೋಷಕರು ಮಕ್ಕಳನ್ನು ಆಟವಾಡಿಸಲು ಕರೆ ತಂದು ಆತಂಕಕ್ಕೊಳಗಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಪಾರ್ಕಿನ ಒಳಭಾಗದಲ್ಲಿ ರಾಸುಗಳು ಬಾರದಂತೆ ಗೇಟ್ ನಿರ್ಮಿಸಬೇಕು. ಅಪೂರ್ಣಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಕ್ಕಳಿಗೆ ಆಟಿಕೆಗಳನ್ನು ಲೋಕಾರ್ಪಣೆ ಮಾಡಿ ರಜಾ-ಮಜಾ ಎಂಬ ಪದಕ್ಕೆ ಅರ್ಥ ಬರುವಂತೆ ಮಾಡಬೇಕೆಂದು ವಾಯು ವಿಹಾರಿಗಳು, ಪೋಷಕರು, ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.
ಸ್ಪಷ್ಟೀಕರಣ
ನಗರಸಭೆಯು ಕೇಂದ್ರ ಸರಕಾರದ ಅಮೃತ್ ಯೋಜನೆಯಡಿ ರೂ. 50 ಲಕ್ಷ ವೆಚ್ಚದಲ್ಲಿ ಪಾರ್ಕ್ ಅಭಿವೃದ್ದಿ ಮತ್ತು ಮಕ್ಕಳ ಆಟಿಕೆಗಳ ನಿರ್ಮಾಣ ಹಾಗೂ ವಾಯು ವಿಹಾರಿಗಳಿಗೆ ಆಸನ ವ್ಯವಸ್ಥೆ, ವಿದ್ಯುತ್ ದೀಪಗಳು ನಿರ್ಮಿಸಲಾಗಿದೆ. ಗುತ್ತಿಗೆದಾರ ಸಣ್ಣಪುಟ್ಟ ಕೆಲಸಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಆದರೂ ಕಳೆದ ವಿಧಾನಸಭಾ ಚುನಾವಣೆ ಮತ್ತೀಗ ಲೋಕಸಭಾ ಚುನಾವಣೆಗಳ ನೀತಿ ಸಂಹಿತೆಯಿಂದಾಗಿ ಉದ್ಘಾಟನೆಗೊಳ್ಳದೆ ವಿಳಂಬಗೊಂಡಿದೆ. ಪಾರ್ಕಿನ ಸುತ್ತಲು ಅಳವಡಿಸಿರುವ ವಿದ್ಯುತ್ ಕಂಬಗಳಿಗೆ ಹೆಚ್ಚುವರಿ ವಿದ್ಯುತ್ ಬೇಕಾಗಿರುವುದರಿಂದ ವಿಐಎಸ್‌ಎಲ್ ನಗರಾಡಳಿತಕ್ಕೆ ಕೋರಲಾಗಿದೆ. ನೀತಿ ಸಂಹಿತೆ ಮುಗಿದ ಕೂಡಲೆ ನಗರಸಭೆ ಮತ್ತು ವಿಐಎಸ್‌ಎಲ್ ಆಡಳಿತ ಒಗ್ಗೂಡಿ ಮಕ್ಕಳ ಆಟಿಕೆಗಳನ್ನು ಸಂಪೂರ್ಣವಾಗಿ ಅಳವಡಿಸಿ ನಾಮಫಲಕ ಮತ್ತು ಅವೈಜ್ಞಾನಿಕ ಗೇಟ್ ಸರಿಪಡಿಸಿ ರಾಸುಗಳು ಒಳಬಾರದಂತೆ ಕ್ರಮ ಕೈಗೊಂಡು ಲೋಕಾರ್ಪಣೆ ಮಾಡಲಾಗುವುದು.
-ಶಿವಲಿಂಗಸ್ವಾಮಿ, ನಗರಸಭೆ ಇಂಜಿನಿಯರ್
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post