ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ಮಾತ್ರ ಬಾಕಿಯಿದೆ.
ಇಂದು ಬೆಳಗಿನ ಮಾಹಿತಿಯಂತೆ 183.3 ಅಡಿಗೆ ನೀರು ಸಂಗ್ರಹವಾಗಿದೆ. 23225 ಕ್ಯೂಸೆಕ್‌ಸ್ ಒಳ ಹರಿವಿದ್ದು, 3213 ಕ್ಯೂಸೆಕ್‌ಸ್ ಹೊರ ಹರಿವಿದೆ. 186 ಅಡಿ ಸಾಮರ್ಥ್ಯ ಅಣೆಕಟ್ಟೆಯಲ್ಲಿ ಇಂದು 183.3 ಅಡಿ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಇನ್ನು ಪೂರ್ಣ ತುಂಬಲು ಕೇವಲ 2.7 ಅಡಿ ಮಾತ್ರ ಬಾಕಿಯಿದೆ. ಹಿನ್ನೀರು ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಇನ್ನೊಂದು ಅಥವಾ ಎರಡು ದಿನದಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ.
ನೀರು 185 ಅಡಿಗೆ ಏರಿಕೆಯಾದ ನಂತರ ಹೊರ ಹರಿವನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಇನ್ನು, ಕಳೆದ ವರ್ಷ ಇದೇ ವೇಳೆ 138.8 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು.
ಸಾಮಾನ್ಯವಾಗಿ ಭದ್ರಾ ಅಣೆಕಟ್ಟು ತುಂಬಿ, ನೀರು ಹೊರ ಬಿಟ್ಟಾಗ ಭದ್ರಾವತಿಯ ಸರ್ಕಾರ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಹೊಸ ಸೇತುವೆ ಮುಳುಗಡೆಯಾಗುತ್ತದೆ. ಇಲ್ಲಿ ಸೇತುವೆ ಮುಳುಗಡೆಯಾಗಿದೆ ಎಂದರೆ, ಅಣೆಕಟ್ಟೆ ತುಂಬಿದೆ ಎಂದರ್ಥ.
ಅತಿ ಎತ್ತರ ಅಣೆಕಟ್ಟೆ ಇದಾದ್ದಾರಿಂದ ಪೂರ್ಣ ತುಂಬುವುದು ಕಷ್ಟ. ಕಳೆದ ನಾಲ್ಕು ವರ್ಷಗಳಿಂದ ಸೇತುವೆ ಮುಳುಗಡೆಯಾಗಿಲ್ಲ. ಅಂದರೆ ಅಣೆಕಟ್ಟೆ ಪೂರ್ಣ ತುಂಬಿಲ್ಲ ಎಂದರ್ಥ. ಈ ಹಿನ್ನೆಲೆಯಲ್ಲಿ ಈಬಾರಿಯಾದರೂ ಸೇತುವೆ ಮುಳಗುಡೆಯಾಗುವುದೇ ಎಂದು ಭದ್ರಾವತಿ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
Discussion about this post