ಲಕ್ಕವಳ್ಳಿ: ಇಂದು ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಸಂಭ್ರಮವೋ ಸಂಭ್ರಮ… ಎಲ್ಲೆಲ್ಲು ಜನಸಾಗರ… ಅಧಿಕಾರಿಗಳಿಂದ ಭದ್ರೆಗೆ ಬಾಗಿನ ಅರ್ಪಣೆ.. ಇದು ಇಂದು ಭದ್ರಾ ಅಣೆಕಟ್ಟೆ ಬಳಿ ಕಂಡುಬಂದ ದೃಶ್ಯಗಳು.
186 ಅಡಿಯ ಭದ್ರಾ ಡ್ಯಾಂ ಸಾಮಾನ್ಯ ಮಳೆಗೆಲ್ಲಾ ತುಂಬುವುದಲ್ಲ. ಅದಕ್ಕೇನಿದ್ದರೂ ತಿಂಗಳುಗಟ್ಟಲೆ ನಿರಂತರ ಮಳೆಯೇ ಬೇಕು. ಇಂತಹ ಡ್ಯಾಂ ಕಳೆದ ಮೂರು ವರ್ಷಗಳಿಂದ ತುಂಬಿಯೇ ಇಲ್ಲ.
ಸತತ ಮೂರು ವರ್ಷಗಳ ನಂತರ ಈ ಬಾರಿ ಉತ್ತಮ ಮಳೆಯಿಂದಾಗಿ ಭದ್ರೆಯ ಒಡಲು ತುಂಬಿದ್ದು, ಇಂದು ನಾಲ್ಕು ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲು ಆರಂಭಿಸಲಾಗಿದೆ.
ಇದಕ್ಕೂ ಮುನ್ನ, ತುಂಬಿನ ಭದ್ರತೆ ಅಧಿಕಾರಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮೊಗದಲ್ಲಿ ಏನೋ ಸಂತಸ, ಸಂಭ್ರಮ ಕಾಣುತ್ತಿತ್ತು. ಮೂರು ವರ್ಷಗಳ ನಂತರ ಭದ್ರೆ ತುಂಬಿರುವುದಕ್ಕೆ ಇವರು ಪಟ್ಟ ಸಂತಸ, ಭದ್ರೆ ಕೇವಲ ಹರಿಯುವ ನದಿಯಾಗಿರದೇ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ ಎನ್ನುವುದನ್ನು ಸಾರುತ್ತಿತ್ತು.
Discussion about this post