ಭದ್ರಾವತಿ: ಭದ್ರಾ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ಹರಿವು ಹೆಚ್ಚಾಗಿದ್ದು, ಭದ್ರಾವತಿ ನಗರದ ಹಲವು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.
ಭದ್ರಾ ಜಲಾಶಯದ ಅಧಿಕಾರಿಗಳ ಮಾಹಿತಿಯಂತೆ ಇಂದು ಒಟ್ಟು 80 ಸಾವಿರ ಕ್ಯೂಸೆಕ್‌ಸ್ ನೀರು ಹೊರಬಿಡಲಾಗಿದ್ದು, ಭದ್ರಾವತಿ ನಗರ ಪ್ರದೇಶದ ನದಿ ಪಾತ್ರದ ಜನವಸತಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ.
ಖಾಸಗಿ ಬಸ್ ನಿಲ್ದಾಣದ ಹಿಂಬದಿಯ ಬಡಾವಣೆಯಲ್ಲಿ ಸುಮಾರು ಮೂರು ಅಡಿಗೂ ಅಧಿಕ ನೀರು ಆವರಿಸಿದ್ದು, ಇದರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಪರಿಣಾಮವಾಗಿ ಇಲ್ಲಿನ ನಿವಾಸಿಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಬಿಎಚ್ ರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ನಿಂತಿದೆ. ಈ ಭಾಗದಲ್ಲಿ ಬಿಎಚ್ ರಸ್ತೆಯಲ್ಲೂ ಸಹ ನೀರು ನಿಂತಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇನ್ನು, ಹಳೇನಗರದ ಪೊಲೀಸ್ ಠಾಣೆ ಎದುರಿನ ಪ್ರದೇಶದಲ್ಲಿ ಅಂದರೆ ಎನ್‌ಎಸ್‌ಟಿ ರಸ್ತೆಯವರೆಗೂ ನೀರು ನುಗ್ಗಿದ್ದು, ಇಲ್ಲಿನ ನಿವಾಸಿಗಳನ್ನೂ ಸಹ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ, ರಾಮೇಶ್ವರ ದೇವಾಲಯದ ಅಡುಗೆ ಹಿಂಬದಿಯ ಹಳೆಯ ಕಟ್ಟಡದವರೆಗೂ ನೀರು ಆವೃತ್ತವಾಗಿದೆ.
ಗಂಜಿ ಕೇಂದ್ರ ಆರಂಭ
ನದಿ ಪಾತ್ರದ ಹಲವು ಪ್ರದೇಶಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಹಳೇನಗರದ ಉರ್ದು ಶಾಲೆ ಹಾಗೂ ಹಾಗೂ ಇನ್ನಿತರ ಕಡೆಗಳಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ.
ನಗರದಲ್ಲಿ ಜನವೋಜನ
ಭಾರೀ ಪ್ರಮಾಣದಲ್ಲಿ ನೀರಿನಿಂದ ಆವೃತ್ತವಾಗಿ ಪ್ರವಾಹದಂತಹ ಪರಿಸ್ಥಿತಿ ಸೃಷ್ಠಿಯಾಗಿರುವ ಹಿನ್ನೆಲೆಯಲ್ಲಿ ಭದ್ರಾವತಿ ಸ್ಥಳೀಯರು ಮಾತ್ರವಲ್ಲದೇ, ಅಕ್ಕಪಕ್ಕದ ಗ್ರಾಮಸ್ಥರೂ ಸಹ ನದಿ ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಕತ್ತಲಾದರೂ ಜನರ ಸಂಖ್ಯೆ ಕಡಿಮೆಯಾಗಿರಲಿಲ್ಲ.
ಟ್ರಾಫಿಕ್ ಜಾಮ್ ಕಿರಿಕಿರಿ
ಹೊಸ ಸೇತುವೆ ಮುಳುಗಡೆಯಾಗಿರುವ ಕಾರಣ ನಗರದ ಎರಡೂ ಭಾಗಗಳಿಗೆ ನಗರ ವ್ಯಾಪ್ತಿಯಲ್ಲಿರುವ ಏಕೈಕ ಸಂಪರ್ಕ ಕಲ್ಪಿಸುತ್ತಿರುವುದು ಹಳೆಯ ಸೇತುವೆ. ಹೀಗಾಗಿ, ಈ ಭಾಗದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.
ಬಸ್ ನಿಲ್ದಾಣದಿಂದ ಆರಂಭವಾಗಿದ್ದ ಸಂಚಾರ ದಟ್ಟಣೆ ಶಿವಮೊಗ್ಗ ರಸ್ತೆ ಹಾಗೂ ಹಳೆ ಸೇತುವೆ ಕಡೆಯಲ್ಲಿ ಸಂಪೂರ್ಣ ಜಾಮ್ ಆಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.
Discussion about this post