ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಮ್ಮ ಕಚೇರಿಯ ಸಿಬ್ಬಂದಿಯಿಂದಲೇ 1 ಲಕ್ಷ ರೂ. ಲಂಚ ಪಡೆದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಅವರು ಮಧ್ಯವರ್ತಿ ಮಂಜುನಾಥ್ ಜೊತೆಗೆ ಲೋಕಾಯುಕ್ತ #Lokayuktha ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತಮ್ಮದೇ ಕಛೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗರಾಜು ಅವರಿಗೆ 2011 ನೇ ಸಾಲಿ ನಿಂದ 2023 ನೇ ಸಾಲಿನ ಅವಧಿಯಲ್ಲಿ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆ ಗಳು ಸೇರಿ ಎಲ್ಲಾ ಆರ್ಥಿಕ ಸೌಲಭ್ಯ ಗಳನ್ನು ನೀಡಲು 4 ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟಿದ್ದು, ಈ ಪೈಕಿ ಇಂದು 1 ಲಕ್ಷ ರೂ,ಹಣ ಪಡೆಯುವಾಗ ದಾಳಿ ನಡೆಸಲಾಗಿದೆ.
ಲಿಂಗರಾಜು ಅವರು ಹಲವು ಬಾರಿ ಬಿಇಓ ಹಾಗು ಜಿಲ್ಲಾ ಉಪನಿರ್ದೇಶಕ ರಿಗೆ ಮತ್ತು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಬಿಇಓ ಎ.ಕೆ. ನಾಗೇಂದ್ರಪ್ಪ ಖಾಸಗಿ ವ್ಯಕ್ತಿ ಮಂಜುನಾಥ್ ನೆರವಿನೊಂದಿಗೆ ಒಟ್ಟು 4 ಲಕ್ಷ ರೂ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಸಂಜೆ 7 ರ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಛೇರಿಯ ಕೊಠಡಿಯಲ್ಲಿ ಎ.ಕೆ ನಾಗೇಂದ್ರಪ್ಪ ಮತ್ತು ಮಂಜುನಾಥ್ ರವರು 1 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಲೋಕಾ ಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಂಚದ ಮೊತ್ತದಲ್ಲಿ ಮೊದಲ ಕಂತು 1 ಲಕ್ಷ ರೂ ವನ್ನು ಕಚೇರಿಯಲ್ಲಿ ಸ್ವೀಕರಿ ಸುವಾಗ ದಾಳಿ ನಡೆಸಿದ ಲೋಕಾ ಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದ ತಂಡ ಹಣದ ಸಮೇತ ಬಂಧಿಸಿದೆ. ಮಂಜುನಾಥ ಆರ್‌ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಂಡಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಮ್.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಬಿ.ಪಿ.ಚಂದ್ರಶೇಖರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ ಎಲ್ ಕುಸಲಾಪುರ, ಗುರುರಾಜ್.ಎನ್ ಮೈಲಾರಿ, ಸಿಬ್ಬಂದಿಗಳಾದ ಜಿ.ಸಿ ಯೋಗೇಶ್, ಎಂ. ಮಂಜುನಾಥ್, ಟೀಕಪ್ಪ, ಎಚ್.ಜಿ ಸುರೇಂದ್ರ, ಎಚ್.ಪ್ರಶಾಂತ್ ಕುಮಾರ್, ಚನ್ನೇಶ,ಅರುಣ್ ಕುಮಾರ್, ವಿ.ದೇವರಾಜ್, ಪ್ರಕಾಶ್ ಬಾರಿಮರದ, ಆದರ್ಶ್, ಎಸ್. ಚಂದ್ರಿಬಾಯಿ, ಪ್ರದೀಪ, ಚೇತನ್, ತರುಣ್ ಕುಮಾರ್, ಡಿ.ಎಚ್ ಆಂಜನೇಯ,ಆನಂದ ಮತ್ತು ಗೋಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















