ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದ 8 ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಮೂಲತಃ ತಾಲೂಕಿನ ಕುಮರಿನಾರಾಯಣಪುರದ ನಿವಾಸಿ, ಸಮಾಜ ಸೇವಕ ಎ. ಧಮೇಂದ್ರರವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಇದೀಗ ಇವರ ಸೇವಾಕಾರ್ಯಗಳನ್ನು ಗುರುತಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ನೀಡಲಾಗುವ ಬಾಲಿ ಇಂಡಿಯಾ ಇಂಟರ್‌ನ್ಯಾಷನಲ್ ಐಕಾನಿಕ್ ಆವಾರ್ಡ್-2025 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ಧಮೇಂದ್ರರವರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. 8 ವರ್ಷಗಳ ಹಿಂದೆ ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಇದೀಗ 5000 ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.
ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 13, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 12 ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 11 ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಪ್ರತಿ ವರ್ಷ ಸುಮಾರು 15 ರಿಂದ 16 ಸಾವಿರ ಪುಸ್ತಕಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳು ಜೀವನದಲ್ಲಿ ನನ್ನಂತೆ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ಆಲೋಚನೆಯಿಂದ ಕಳೆದ ೮ ವರ್ಷಗಳ ಹಿಂದೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುವ ಹಾಗು ಕಟ್ಟಡ ನಿರ್ಮಾಣ, ಸುಣ್ಣಬಣ್ಣ ಬಳಿಯುವ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಶಾಲೆಗಳಿಗೆ ಅಗತ್ಯವಿರುವ ಸಣ್ಣಪುಟ್ಟ ಕಾರ್ಯಗಳನ್ನು ಮಾಡಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿವೆ.
– ಎ. ಧರ್ಮೇಂದ್ರ, ಸಮಾಜ ಸೇವಕರು, ಭದ್ರಾವತಿ
ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಧಮೇಂದ್ರರವರು ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣ ಪಡೆಯಲು ನನ್ನಂತೆ ಸಂಕಷ್ಟಕ್ಕೆ ಒಳಗಾಗಬಾರದು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಪ್ರತಿ ವರ್ಷ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಳೆದ 8 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಶಾಲೆಗಳಿಗೆ ಕೇವಲ ನೋಟ್ ಪುಸ್ತಕಗಳ ವಿತರಣೆ ಮಾತ್ರವಲ್ಲದೆ ಸುಮಾರು 7-8 ಶಾಲೆಗಳಿಗೆ ಅಗತ್ಯವಿರುವ ಕಟ್ಟಡಗಳನ್ನು ಸಹ ನಿರ್ಮಿಸಿಕೊಟ್ಟಿದ್ದಾರೆ. ಜೊತೆಗೆ ಕೆಲವು ಶಾಲೆಗಳಿಗೆ ಮತ್ತು ದೇವಸ್ಥಾನಗಳಿಗೆ ಸುಣ್ಣಬಣ್ಣ ಸಹ ಮಾಡಿಸಿಕೊಟ್ಟಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸಹ ನಿರ್ಮಿಸಿ ಕೊಟ್ಟಿದ್ದಾರೆ.
ಇವರ ಸೇವಾ ಕಾರ್ಯ ಇಷ್ಟಕ್ಕೆ ಸೀಮಿಗೊಳ್ಳದೆ ಮಹಾಮಾರಿ ಕೋವಿಡ್-19ರ ಸಂದರ್ಭದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಮೇಂದ್ರರವರು ಮುಂದಾಗಿದ್ದಾರೆ. ಇವರ ಎಲ್ಲಾ ಸೇವಾ ಕಾರ್ಯಗಳು ತೆರೆಮರೆಯಲ್ಲಿಯೇ ನಡೆಯುತ್ತಿದ್ದು, ಎಂದಿಗೂ ಪ್ರಚಾರಕ್ಕೆ ಬಯಸಲಿಲ್ಲ. ಇದೀಗ ಇವರ ಸೇವಾಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಡತನ ಮೆಟ್ಟಿನಿಂದ ಯುವಕ ಎ. ಧರ್ಮೇಂದ್ರ
ಸಮಾಜ ಸೇವಕ ಎ. ಧರ್ಮೇದ್ರರವರು ತಾಲೂಕಿನ ಕುಮರಿನಾರಾಯಣಪುರದ ಅಂದಾನಪ್ಪ-ಚಿಕ್ಕಮ್ಮ ದಂಪತಿ 4ನೇ ಪುತ್ರರಾಗಿದ್ದು, ಕಡುಬಡಕುಟುಂಬದಲ್ಲಿ ಜನಿಸಿದ ಇವರು ಎಸ್‌ಎಸ್‌ಎಲ್‌ಸಿವರೆಗೂ ವಿದ್ಯಾಭ್ಯಾಸ ಪೂರೈಸಿ ನಂತರ ೨೫ ವಯಸ್ಸಿನಲ್ಲಿಯೇ ಉದ್ಯೋಗ ಹುಡುಕಿ ಬೆಂಗಳೂರಿಗೆ ಮುಖ ಮಾಡಿದರು. ಅಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಅಲ್ಲಿರಲು ಕಷ್ಟವಾಗಿ ಪುನಹ ಸ್ವಗ್ರಾಮದ ಕಡೆ ಮುಖ ಮಾಡಿದರು. ಈ ಸಂದರ್ಭದಲ್ಲಿ ಸ್ವ ಗ್ರಾಮದಲ್ಲೇ ಕೂಲಿ ಕೆಲಸಕ್ಕೆಂದು ಹೋದ ಧರ್ಮೇಂದ್ರರಿಗೆ ತಾವು ಏನಾದರೂ ಸಾಧಿಸಲೇಬೇಕೆಂಬ ಛಲ ಮೂಡಿತ್ತು. ಎಷ್ಟೇ ಕಷ್ಟವಾದರೂ ಸರಿ ಏನಾದರೂ ಜೀವನದಲ್ಲಿ ಸಾಧಿಸಿ ಪುನಃ ಸ್ವಗ್ರಾಮಕ್ಕೆ ಬರಬೇಕು. ತಂದೆ-ತಾಯಿಗೆ ಗೌರವ ಸಿಗುವಂತೆ ಮಾಡಬೇಕೆಂಬ ಛಲ ಹೊತ್ತು ಪುನಃ ಬೆಂಗಳೂರು ನಗರ ಸೇರಿದರು.
ಮೊದಮೊದಲು ಧರ್ಮೇಂದ್ರ ರವರು ಚಾಲಕನ ವೃತ್ತಿಯನ್ನು ಜೀವನೋಪಾಯಕ್ಕೆ ಆಯ್ಕೆ ಮಾಡಿಕೊಂಡರು. ನಂತರ ಸೊಸೈಟಿ, ಫೈನಾನ್ಸ್ ಹಾಗೂ ಕೈಗಡ ಸಾಲದ ಮೂಲಕ ತಮ್ಮದೇ ಆದ ಸ್ವಂತದೊಂದು ಕಾರು ಖರೀದಿಸಿ ಚಾಲಕನಿಂದ ಮಾಲೀಕನಾಗುವ ಮಟ್ಟಕ್ಕೆ ಬೆಳೆದರು. ಬೆಂಗಳೂರಿನ ನಾಗರಬಾವಿಯಲ್ಲಿ ವಂದನ ಟ್ರಾವೆಲ್ಸ್ ಹೆಸರಿನ ಸಂಸ್ಥೆ ಆರಂಭಿಸಿ ಕೇವಲ 3-4 ಕಾರುಗಳಿಂದ ಆರಂಭಿಸಿದ ವಾಹನ ಸಂಸ್ಥೆ ಇದೀಗ ನೂರಕ್ಕೂ ಹೆಚ್ಚು ಕಾರುಗಳನ್ನು ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಬಾಡಿಗೆಗೆ ನೀಡುವ ಮಟ್ಟಕ್ಕೆ ಬೆಳೆದಿದೆ. ಜೊತೆಗೆ ವಂದನ ಟ್ರಾವೆಲ್ಸ್ ಸಂಸ್ಥೆಯಲ್ಲಿ ನೂರಾರು ಸಂಖ್ಯೆಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಜೀವನಾಧಾರ ಕಲ್ಪಿಸಿಕೊಡಲಾಗಿದೆ. ಇಷ್ಟಾದ ಮೇಲೆ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಸದುದ್ದೇಶದಿಂದ ವಿನಾಯಕ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸೇವ ಕಾರ್ಯಗಳಲ್ಲೂ ತೊಡಗಿಸಿ ಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post