ಭದ್ರಾವತಿ: ಮಿಸ್ ಸುಪ್ರ ಇಂಟರ್’ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಭದ್ರಾವತಿಯ ಹೆಸರನ್ನು ವಿಶ್ವ ಮಟ್ಟದಲ್ಲಿ ವಿಜೃಂಭಿಸಿದ್ದ ಆಶಾ ಭಟ್, ಈಗ ಹಾಲಿವುಡ್ ಮೂಲಕ ಬಾಲಿವುಡ್ ಪ್ರವೇಶಕ್ಕೆ ಅಣಿಯಾಗುತ್ತಿದ್ದಾರೆ.
ರೂಪದರ್ಶಿಯಾಗಿ ಗ್ಲಾಮರ್ ಲೋಕಕ್ಕೆ ಕಾಲಿಟ್ಟಿದ್ದ ಆಶಾ ಅವರ ಪ್ರತಿಭೆಯನ್ನು ಅರಸಿ ಬಾಲಿವುಡ್ ಬಾಗಿಲು ತೆರೆದಿದ್ದು, ಈ ಮೂಲಕ ಮುಂಬೈನಲ್ಲೂ ಭದ್ರಾವತಿಯ ಹೆಸರು ಮೂಡಲಿದೆ.
ಜಂಗ್ಲಿ ಎಂಬ ಚಿತ್ರದ ಮೂಲಕ ಬಾಲಿವುಡ್’ಗೆ ಕಾಲಿಡಲಿರುವ ಆಶಾ, ವಿದ್ವತ್ ಜಮ್ಮವಾಲ್’ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಂಗ್ಲಿ ಪಿಕ್ಚರ್ಸ್ ನಡಿ ತಯಾರಾಗುತ್ತಿರುವ ಚಿತ್ರವನ್ನು ಅಮೆರಿಕಾ ಮೂಲದ ಚುಕ್ ರುಸ್ಸೆಲ್ಲ್ ನಿರ್ದೇಶಿಸುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಆಶಾ, ಬಾಲಿವುಡ್ ಪ್ರವೇಶಿಸುವ ಕುರಿತಾಗಿ, ತಮ್ಮ ಪೋಷಕರು, ಸೋದರಿ ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ಬಾಲಿವುಡ್ ಪ್ರವೇಶಿಸುವ ಬಗ್ಗೆ ನಿರ್ಧಾರ ಮಾಡಿದೆವು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದರ ಜೊತೆಗೆ ಟಿವಿ ಜಾಹಿರಾತುಗಳಿಗೆ ಆಡಿಷನ್ ನಲ್ಲಿ ಕೂಡ ಭಾಗಿಯಾದೆ. ನೃತ್ಯಗಾರ್ತಿಯಾಗಿ, ಹಾಡುಗಾರ್ತಿಯಾಗಿ ಮತ್ತು ರಂಗಭೂಮಿ ಹಿನ್ನೆಲೆಯಿರುವ ಕಾರಣ ಚಿತ್ರದಲ್ಲಿ ಯಾಕೆ ಪ್ರಯತ್ನಿಸಬಾರದು ಎಂದು ನನ್ನ ಕುಟುಂಬದವರಿಗೆ ಕೂಡ ಅನಿಸಿತು ಎಂದಿದ್ದಾರೆ.
ಇನ್ನು, ಬಾಲಿವುಡ್ ಪ್ರವೇಶದ ಹಂತದಲ್ಲಿರುವ ಇವರು ಇದಕ್ಕಾಗಿ ಡ್ಯಾನ್ಸಿಂಗ್, ಮಾರ್ಷಲ್ ಆರ್ಟ್ಸ್ ಸೇರಿದಂತೆ ವಿವಿಧ ರೀತಿಯ ಕಲೆಗಳಲ್ಲಿ ಕಲಿತಿದ್ದಾರೆ. ಶಾಲಾ ಕಾಲೇಜು ಜೀವನದಲ್ಲಿ ಓದು, ಸಾಂಸ್ಕೃತಿಕ ಚಟುವಟಿಕೆ ಎಂದು ತೊಡಗಿಸಿಕೊಂಡಿದ್ದ ಆಶಾ, ಯಾವುದೇ ಕೆಲಸ ಮಾಡುವುದಿದ್ದರೂ ಕೂಡ ಶೇ.100ರಷ್ಟು ಶ್ರದ್ಧೆ, ಆಸಕ್ತಿ ತೋರುವ ಅಭ್ಯಾಸ ಹೊಂದಿದ್ದವರು. ಎನ್’ಸಿಸಿ, ಚರ್ಚೆ, ವೇದಿಕೆ ಪ್ರದರ್ಶನ, ಭಾಷಣದಲ್ಲಿ ಕೂಡ ತಮ್ಮ ಚಾಕಚಕ್ಯತೆ ತೋರಿಸುತ್ತಿದ್ದರು.
ಇಂತಹ ಭದ್ರಾವತಿಯ ಈಕೆ ಈಗ ಬಾಲಿವುಡ್ ಪ್ರವೇಶಿಸುತ್ತಿರುವುದು ಇಡಿಯ ಭದ್ರಾವತಿಯನ್ನು ಸಂತಸದಲ್ಲಿ ಮುಳುಗಿಸಿದೆ. ಆಶಾ ಭಟ್ ಅವರ ಈ ಬಾಲಿವುಡ್ ಪಯಣದ ಜೊತೆಯಲ್ಲಿ ಇಡಿಯ ಉಕ್ಕಿನ ನಗರಿ ಅವರೊಂದಿಗೆ ಇದೆ.
Discussion about this post