ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮತ್ತೊಮ್ಮೆ ಮಹಿಳಾ ದಿನಾಚರಣೆಯ ಸುಸಂದರ್ಭ ಬಂದಿದೆ. ಮತ್ತೊಮ್ಮೆ ವೇದಿಕೆಯ ಮೇಲೆ ಘೋಷಣೆ, ಭಾಷಣ, ಎರಡು ದಿನದ ನಂತರ ಎಲ್ಲವೂ ತಣ್ಣಗಾಗಿ ಮತ್ತೆ ಯಥಾ ಪ್ರಕಾರ ಮಾಮೂಲು ದಿನಚರಿಯಲ್ಲಿ ಮುಳುಗಿಬಿಡುತ್ತೇವೆ.
ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬಂದು ಶತಕಗಳು ಕಳೆದಿದ್ದರೂ ಇಂದಿಗೂ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯ, ಅತ್ಯಾಚಾರ, ತಾರತಮ್ಯ, ವರದಕ್ಷಿಣೆ ಪಿಡುಗು, ಇತ್ಯಾದಿಗಳಿಂದ ಮಹಿಳಾ ಸಮುದಾಯ ಹೊರಬರಲು ಸಾಧ್ಯವಾಗುತ್ತಿಲ್ಲ.
ಆರ್ಥಿಕ ಸ್ವಾವಲಂಬನೆಗಾಗಿಯೂ, ತನ್ನೊಳಗಿನ ಸಾಮರ್ಥ್ಯ, ಅಭಿರುಚಿಗಳನ್ನು ಸಾಬೀತುಪಡಿಸುವುದಕ್ಕಾಗಿಯೂ ಮಹಿಳೆ ಇಂದು ಎಲ್ಲಾ ರಂಗಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುತ್ತಾ ಪುರುಷರೇ ನಿರ್ಮಿಸಿರುವ ಭದ್ರಕೋಟೆಗೂ ಲಗ್ಗೆ ಹಾಕುತ್ತಾ ಅಲ್ಲಲ್ಲಿ ಯಶಸ್ಸನ್ನು ಪ್ರತಿಪಾದಿಸುತ್ತಿದ್ದಾಳೆ. ಅಲ್ಲಲ್ಲಿ ಅನ್ಯಾಯ ದೌರ್ಜನ್ಯಗಳ ವಿರುದ್ಧ ತನ್ನ ಪ್ರತಿಭಟನೆ ಹೋರಾಟಗಳನ್ನು ಮೌನವಾಗಿಯೂ, ಕೆಲವೊಮ್ಮೆ ದಿಟ್ಟವಾಗಿಯೂ ನಡೆಸುತ್ತಾ ಪ್ರಗತಿಯ ಗತಿಯಲ್ಲಿ ನಡೆಯುತ್ತಿದ್ದರೂ ವೇಗದ ಗತಿಯನ್ನು ಮಹಿಳೆಯರಿನ್ನು ತಲುಪಬೇಕಾಗಿದೆ.
ಗೃಹ ಕೃತ್ಯ, ಸಂಪಾದನೆ ಇವೆರಡನ್ನು ನಿಭಾಯಿಸುವ ಹೊತ್ತಿಗೆ ಇಂದು ಮಹಿಳೆ ಹೊಸಹೊಸ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆಧುನಿಕ ಸೌಕರ್ಯಗಳು ಬದುಕನ್ನು ಸುಗಮಗೊಳಿಸುತ್ತಿದೆ ಎನಿಸಿದರೂ ನಿಜವಾದ ಅರ್ಥದಲ್ಲಿ ಜೀವನವನ್ನು ದುರ್ಗಮಗೊಳಿಸುತ್ತಿದೆ. ಕುಟುಂಬ, ಕೆರಿಯರ್, ಆಧುನಿಕ ಸ್ಪರ್ಧೆಗಳನ್ನು ಸಮತೋಲನ ಮಾಡುವುದೆಂದರೆ ಮಹಿಳೆಯ ನಡಿಗೆ ತಂತಿಯ ಮೇಲಿನ ನಡೆದ ಹಾಗಾಗಿದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಹಿಳೆಯ ಆರೋಗ್ಯದ ಸ್ಥಿತಿಗತಿಯ ಜೊತೆಗೆ ಕೌಟುಂಬಿಕ ಆರೋಗ್ಯವೂ ಇಂದು ಸಂಕಷ್ಟದಲ್ಲಿದೆ. ಹೊರಗೆಲಸ ಮುಗಿಸಿ ಬೇಗನೆ ಮನೆಗೆ ಬರುವುದು, ನಾಲ್ಕು ಜನರ ಒಟ್ಟಿಗೆ ಕುಳಿತು ಊಟ ಮಾಡುವುದು, ಪರಸ್ಪರ ಹೇಳಿಕೇಳಿ ಮಾಡುವುದು (ಕೇರಿಂಗ್ ಅಂಡ್ ಶೇರಿಂಗ್) ಕಡಿಮೆಯಾಗುತ್ತಿದ್ದು ಸಂಬಂಧದ ತಂತುಗಳು ಸಡಿಲವಾಗುತ್ತಾ ಬಿಟ್ಟೇ ಹೋಗುತ್ತಿದೆ. ಇದೊಂದು ಬಹುದೊಡ್ಡ ಅಪಾಯ.
ಹದಿವಯಸ್ಸಿನವರಲ್ಲಂತೂ ಅಂತರ್ಜಾಲ ವ್ಯಸನ(ಸಿಟ್ಟಿಂಗ್ ಡಿಸೀಸ್)ದಿಂದ ಬೊಜ್ಜು, ಬಂಜೆತನ ಇತ್ಯಾದಿಗಳು ಹೆಚ್ಚುತ್ತಿವೆ. ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರವನ್ನು ಗೌರವಿಸಲು ಸಾಧ್ಯವಾಗದೇ (ಬೇಗನೆ ಮಲಗಿ, ಬೇಗನೆ ಏಳುವುದು, ಕಾಲಕಾಲಕ್ಕೆ ಊಟೋಪಚಾರ) ಇದರಿಂದ ಇಂದು ಮಹಿಳೆ ಪಿ.ಸಿ.ಓ.ಡಿ, ಮಧುಮೇಹ, ಏರುರಕ್ತದೊತ್ತಡ, ಕ್ಯಾನ್ಸರ್‌ನಂತಹ ಸಮಸ್ಯೆಗಳಿಂದ ಹೆಚ್ಚಾಗಿ ಬಳಲುತ್ತಿದ್ದಾಳೆ. ತಾಯ್ತನದ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಮಹಿಳೆಯರಲ್ಲಿ ಇಂದಿಗೂ ಶೇ.70ರಷ್ಟು ಜನ ರಕ್ತಹೀನತೆಯೆಂಬ ಸಾಮಾನ್ಯ ಸಮಸ್ಯೆಯನ್ನು ಜಯಿಸಲು ಸಾಧ್ಯವಾಗದೇ, ಮಾತೃಮರಣಗಳನ್ನು, ಶಿಶುಮರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ. ಕಷ್ಟಸಹಿಷ್ಣುತೆ ಮಾಯವಾಗುತ್ತಿದ್ದು ಸಿಝೇರಿಯನ್ ಇನ್ನಿತರ ಶಸ್ತ್ರಚಿಕಿತ್ಸೆಗಳು ಹೆಚ್ಚಾಗುತ್ತಿವೆ.
ಪ್ರಜನನ ಆರೋಗ್ಯದ ಬಗೆಗಿನ ಜ್ಞಾನ ಮಹಿಳೆಯರಲ್ಲಿ ಅತಿಕಡಿಮೆ. ಒಂದು ಹೆರಿಗೆಯ ನಂತರ ಇನ್ನೊಂದು ಮಗು ಬೇಗನೆ ಬೇಡವೆನಿಸಿದರೂ ಗೊತ್ತಾಗುವ ಹೊತ್ತಿಗೆ ಶೇ.60ರಷ್ಟು ಮಹಿಳೆಯರು ಗರ್ಭ ಧರಿಸಿರುತ್ತಾರೆ. ಅನವಶ್ಯಕ ಗರ್ಭಪಾತ ಮಾಡಿಕೊಂಡು ಲಕ್ಷಗಟ್ಟಲೆ ಮಹಿಳೆಯರಲ್ಲಿ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿವೆ. ದೈಹಿಕ ಪರಿಶ್ರಮ ಕಡಿಮೆಯಾಗುತ್ತಿರುವುದರಿಂದ ಮಹಿಳೆಯರು ಬೊಜ್ಜು ಅದರಿಂದುಂಟಾಗುತ್ತಿರುವ ಸಮಸ್ಯೆಗಳು ಹೆಚ್ಚುತ್ತಿವೆ. ಶೇ.20ರಷ್ಟು ಮಹಿಳೆಯರಲ್ಲಿ ಖಿನ್ನತೆ, ಉನ್ಮಾಧ, ಇನ್ನಿತರ ಸಮಸ್ಯೆಗಳು. ಜೊತೆಗೆ ಹೆಣ್ಣಿಗೆ ಜೈವಿಕವಾಗಿ ಬರುವ ಮುಟ್ಟಿನ ಮುನ್ನ ಬವಣೆ, ಋತುಬಂಧದಲ್ಲುಂಟಾಗುವ ಖಾಲಿಗೂಡಿನ ಅನುಭವ ಹೀಗೆ ಹತ್ತು ಹಲವು ಸಂಕಷ್ಟಗಳನ್ನು ಮಹಿಳೆ ಎದುರಿಸಬೇಕಾಗಿದೆ.
ಥೈರಾಯಿಡ್, ಆರ್ಥರೈಟಿಸ್, ಅಸಿಡಿಟಿ, ಅಸ್ತಮಾ, ಲೈಂಗಿಕ ಸೋಂಕುಗಳು ಇನ್ನಿತರ ಸಮಸ್ಯೆಗಳೂ ಮಹಿಳೆಯರನ್ನೇ ಹೆಚ್ಚು ಭಾದಿಸುತ್ತಿದೆ. ಶೇ.80ರಷ್ಟು ಮಹಿಳೆಯರು ನಮ್ಮ ಆರೋಗ್ಯವನ್ನು ಲೆಕ್ಕಿಸದೆ ಬರೀ ಗಂಡ ಮಕ್ಕಳ ಯೋಗಕ್ಷೇಮವನ್ನೇ ಪ್ರಾಧಾನ್ಯವಾಗಿಟ್ಟುಕೊಂಡು ತಮ್ಮ ಕೈಯಿಂದ ಬಾಯೊಳಗೆ ಯಾವ ಆಹಾರ ಹೋಗುತ್ತಿದೆ ಎಂಬುದನ್ನು ಲಕ್ಷಿಸುವುದಿಲ್ಲ. ತನ್ನ ಆರೋಗ್ಯ ಸರಿಯಾಗಿಯೇ ಎಂದು ಭಾವಿಸುತ್ತಾಳೆ. ಇದನ್ನೇ ಸಂತರ ಕಾಯಿಲೆ ಎನ್ನುವುದು. ಕುಟುಂಬದ ಆಧಾರವಾದ ಮಹಿಳೆಯರ ಆರೋಗ್ಯವೇ ಹದಗೆಟ್ಟರೆ ಕುಟುಂಬದ ಪುರೋಭಿವೃದ್ಧಿ ಸಾಧ್ಯವೇ? ಆದ್ದರಿಂದ, ಕುಟುಂಬದ ಶಕ್ತಿ ಕೇಂದ್ರ ಅಥವಾ ಶಕ್ತಿಸ್ವರೂಪಿಣಿಯಾದ ಮಹಿಳೆಯರ ಬ್ಯಾಟರಿಯೇ ಶಕ್ತಿಗುಂದದ ಹಾಗೆ ರೀಚಾರ್ಜ್ ಮಾಡಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಇಂದು ಮಹಿಳೆಯರಲ್ಲಿ ಮಲ್ಟಿಟಾಸ್ಕಿಂಗ್ ಅಥವಾ ಒಂದೇ ಸಂದರ್ಭದಲ್ಲಿ ಹಲವು ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಮೈಂಡ್‌ಫುಲ್‌ನೆಸ್ ಇಸ್ ದ ಕೀ ಎನ್ನುವ ಹಾಗೆ ನಮ್ಮ ಕೆಲಸದ ಬಗ್ಗೆ ಕಾಳಜಿ ವಹಿಸುತ್ತಾ, ಕುಟುಂಬದವರ ಸಹಕಾರದೊಂದಿಗೆ ಸರಸ ಜನನ, ವಿರಸ ಮರಣ’’ ಎನ್ನುವ ಹಾಗೆ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತಾ ತನ್ನ ಆರೋಗ್ಯವನ್ನೂ ಕಾಪಾಡಿಕೊಳ್ಳುವ ಅಗತ್ಯವಿದೆ.
ಮನೆ ಕೆಲಸವನ್ನು ಪುರುಷರೂ ಹಂಚಿಕೊಳ್ಳಬೇಕು. ಗಂಡಸಿನ ಆರ್ಥಿಕ ಹೊರೆಯನ್ನು ಹೆಣ್ಣು ಕಡಿಮೆ ಮಾಡುತ್ತಿರುವ ಸಂದರ್ಭಗಳಲ್ಲೆಲ್ಲಾ ಮನೆಕೆಲಸದಲ್ಲಿ, ಮಕ್ಕಳ ಪಾಲನೆಯಲ್ಲಿ ಪುರುಷರ ಸಹಾಯ ಹಸ್ತವಿಲ್ಲದಿದ್ದರೆ ಮಹಿಳೆಗೆ ಉದ್ಯೋಗ ಹಾಗೂ ಕುಟುಂಬದ ಸಮತೋಲನ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರ ಜೈವಿಕ ಅನಿವಾರ್ಯತೆಯಾದ ಗರ್ಭಧಾರಣೆ, ಮಗುವಿಗೆ ಜನನ, ಸ್ತನ್ಯಪಾನ ಇತ್ಯಾದಿಗಳಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲದಿದ್ದರೂ ಅನುಕೂಲಕರ ವಾತಾವರಣವನ್ನು ಕಲ್ಪಿಸಿಕೊಡಲು ಪುರುಷರ ಸಹಾಯ ಅತ್ಯಗತ್ಯ.
ಆರೋಗ್ಯವಂತ ಹೆಣ್ಣೇ ಕುಟುಂಬದ ಕಣ್ಣು, ಸ್ತ್ರೀ ಆರೋಗ್ಯದ ರಕ್ಷಣೆ, ದೇಶದ ಪ್ರಗತಿಗೆ ಪೋಷಣೆ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಿ. ಮಹಿಳೆಯರೇ ಏಳಿ, ಎಚ್ಚರಗೊಳ್ಳಿ, ನಿಮ್ಮ ಬಗ್ಗೆ ಕಾಳಜಿವಹಿಸಿ. ಆರೋಗ್ಯವಂತರಾಗಿ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ. ನಿಮ್ಮ ಆರೋಗ್ಯ ಹದಗೆಟ್ಟರೆ ಯಾವ ಯುಗ ಪುರುಷರೂ ನಿಮ್ಮನ್ನು ಉದ್ಧರಿಸುವುದಿಲ್ಲ. ನಿಮ್ಮ ಆಹಾರ, ವಿಹಾರ, ವಿಚಾರಗಳ ಬಗ್ಗೆ ಲಕ್ಷ್ಯವಿಟ್ಟು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಿ.
ಹಿತಮಿತವಾದ ಪೌಷ್ಠಿಕ ಆಹಾರವಿರಲಿ. ಬೆಳಗಿನ ಉಪಾಹಾರ ಎಂದಿಗೂ ತಪ್ಪಿಸಬೇಡಿ. ಕಬ್ಬಿಣಾಂಶ ಹಾಗೂ ಕ್ಯಾಲ್ಷಿಯಂ ಇರುವ ಆಹಾರ ಹೆಚ್ಚಿಗೆ ಸೇವಿಸಿ. ದಿನನಿತ್ಯ ಕನಿಷ್ಠ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಯಿರಲಿ. ಸಮಸ್ಯೆ ಸಂದೇಹಗಳು ಬಂದಾಗ ಕುಟುಂಬ ವೈದ್ಯರನ್ನು ಸಂಪರ್ಕಿಸಿ, ಚರ್ಚಿಸಿ. ಯಾವುದಾದರೊಂದು ಆರೋಗ್ಯವಿಮೆಯನ್ನು ಹೊಂದಿ. ಮನಬಿಚ್ಚಿ ಆಪ್ತಸ್ನೇಹಿತರೊಡನೆ ಮಾತನಾಡಿ ಭಾವನೆಗಳನ್ನು ಹಂಚಿಕೊಳ್ಳಿ. ಯಾವುದಾದರೂ ಹೊಸ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
ಹೆಣ್ಣು ಶೋಷಣೆಗೆ ಬಲಿಯಾಗುವ ಬದಲು ಸಹಬಾಳ್ವೆಯಲ್ಲಿ ಸಮಪಾಲು ದೊರೆತು ಉರಿಯುವ ಬೆಂಕಿಯಾಗದೇ ಬೆಳಗುವ ದೀಪವಾಗಲಿ ಎಂದು ಆಶಿಸುತ್ತಾ ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

ಲೇಖನ: ಡಾ॥ವೀಣಾ ಎಸ್.ಭಟ್,
ಸ್ತ್ರೀರೋತಜ್ಞೆ,
ನಯನ ಆಸ್ಪತೆ, ಭದ್ರಾವತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post